2025ರ ಏ.1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಮತ್ತು ಇತರೆ ಸಾರಿಗೆ ನಿಗಮಗಳ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. 26 ತಿಂಗಳ ವೇತನ ಹಿಂಬಾಕಿ ಪಾವತಿಗೆ 1,271 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿ 2025ರ ಏ.1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಮತ್ತು ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಾರಿಗೆ ನೌಕರ ಸಂಘಟನೆಗಳ ಮುಂದಿಟ್ಟು, ಈ ಕುರಿತು ಚರ್ಚಿಸಲು ಏ.17ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ.

ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ಆದೇಶ ಜಾರಿಗೆ ಸಂಬಂಧಿಸಿ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ನೇತೃತ್ವದಲ್ಲಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಮುಖರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಈ ಹಿಂದೆ ಸರ್ಕಾರ ಆದೇಶಿಸಿರುವಂತೆ 2021ರ ಜ.1ರಿಂದ 2023ರ ಫೆ. 28ರವರೆಗೆ ಒಟ್ಟು 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಹಾಗೂ 2025ರ ಏ.1ರಿಂದ ಜಾರಿಗೆ ಬರುವಂತೆ ಹೊಸದಾಗಿ ವೇತನ ಹೆಚ್ಚಳ ಮಾಡುವ ಕುರಿತು ಚರ್ಚಿಸಲಾಯಿತು.

1,271 ಕೋಟಿ ಶೀಘ್ರ ಬಿಡುಗಡೆ:

ಈ ವೇಳೆ ಅಕ್ರಂ ಪಾಷಾ ಅವರು, 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಸಂಬಂಧಿಸಿ ಸರ್ಕಾರ ಘೋಷಿಸಿರುವ 1271.92 ಕೋಟಿ ರು.ಅನ್ನು ಶೀಘ್ರ ನಿಗಮಗಳಿಗೆ ಬಿಡುಗಡೆ ಮಾಡಲಿದೆ. ಹಣ ಬಿಡುಗಡೆಯಾದ ಕೂಡಲೇ ವೇತನ ಹೆಚ್ಚಳ ಹಿಂಬಾಕಿ ಪಾವತಿಸುವುದಾಗಿ ತಿಳಿಸಿದರು.

ಅದಕ್ಕೆ ಆಕ್ಷೇಪಿಸಿದ ಸಾರಿಗೆ ನೌಕರ ಸಂಘಟನೆಯ ಪ್ರಮುಖರು, 2021ರ ಜ.1ರಿಂದ 2023ರ ಫೆ. 28ರವರೆಗಿನ ವೇತನ ಹೆಚ್ಚಳ ಹಿಂಬಾಕಿ ಜತೆಗೆ 2020ರ ಜ. 1ರಿಂದ ಡಿ. 31ರವರೆಗಿನ 12 ತಿಂಗಳ ವೇತನ ಹೆಚ್ಚಳ ಹಿಂಬಾಕಿಯನ್ನೂ ಪಾವತಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಹೊಸ ವೇತನ ಹೆಚ್ಚಳದ ಪ್ರಮಾಣವನ್ನು ಸಭೆಯಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಅದರ ಜತೆಗೆ, 2025ರ ಆ.5ರಂದು ನಡೆದ ಮುಷ್ಕರದ ಸಂದರ್ಭದಲ್ಲಿ ನಿಯಮ 23ರ ಅಡಿ ನೌಕರರ ಮೇಲಿನ ಶಿಸ್ತು ಕ್ರಮ ಕೂಡಲೇ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಅಕ್ರಂ ಪಾಷಾ ಅವರು, 2025ರ ಏ.1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಮತ್ತು ಉಳಿದ ಮೂರು ನಿಗಮಗಳ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ಮುಂದಿಟ್ಟರು. ಇನ್ನು, ನಿಯಮ 23ರ ಅಡಿಯಲ್ಲಿ ತೆಗೆದುಕೊಳ್ಳಲಾಗಿರುವ ಶಿಸ್ತು ಕ್ರಮವನ್ನು ನಿಯಮ 22ಕ್ಕೆ ಪರಿವರ್ತಿಸಿ ನೌಕರರಿಗೆ ಅಂತರ ನಿಗಮ ವರ್ಗಾವಣೆ, ಬಡ್ತಿ ಸೇರಿ ಇನ್ನಿತರ ಸೌಲಭ್ಯಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೆಎಸ್ಸಾರ್ಟಿಸಿಯಿಂದ ನೀಡಲಾಗಿರುವ ಪ್ರಸ್ತಾವದ ಕುರಿತು ಜಂಟಿ ಕ್ರಿಯಾ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಹೇಳುವುದಾಗಿ ತಿಳಿಸಲಾಯಿತು. ಉಳಿದಂತೆ ಅಧಿಕಾರಿಗಳು ಮತ್ತು ಜಂಟಿ ಕ್ರಿಯಾ ಸಮಿತಿ ಪ್ರಮುಖರ ನಡುವೆ ಏ. 17ರಂದು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು.

ಇದನ್ನೂ ಓದಿ: 20 ವರ್ಷಗಳಿಂದ ಸ್ಥಗಿತಗೊಂಡಿದ್ದ ಸೇವೆಗೆ ಮರುಜೀವ; ಮೆಜೆಸ್ಟಿಕ್‌ಗೆ ಡೈರೆಕ್ಟ್ 4 ಬಸ್

ಬಸ್‌ ಪ್ರಯಾಣ ದರ ಹೆಚ್ಚಳ ಮಾಡಲ್ಲ: ರಾಮಲಿಂಗಾರೆಡ್ಡಿ

ಜ್ಯದಲ್ಲಿ ಸದ್ಯಕ್ಕೆ ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರದಲ್ಲಿ ಏರಿಕೆಯಾಗುವುದಿಲ್ಲ. ಇನ್ನು ಆಟೋ ಗ್ಯಾಸ್‌ ಸೇರಿ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಸರಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಸಾರಿಗೆ ಬಸ್‌ಗಳಿಗೆ ಪೂರೈಸಲಾಗುತ್ತಿರುವ ಡೀಸೆಲ್‌ ಬೆಲೆಯಲ್ಲೂ ಹೆಚ್ಚಳವಾಗುತ್ತದೆ ಎಂಬ ಊಹಾಪೋಹಗಳಿದ್ದವು. ಅದಕ್ಕಾಗಿ ಮುಖ್ಯಮಂತ್ರಿ ಅವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಿ, ಸಾರಿಗೆ ಬಸ್‌ಗಳಿಗೆ ಪೂರೈಸಲಾಗುತ್ತಿರುವ ಡೀಸೆಲ್‌ ಬೆಲೆ ಹೆಚ್ಚಿಸದಂತೆ ಕೋರಲಾಗಿತ್ತು. ಇನ್ನು, ಯುದ್ಧ ತಾತ್ಕಾಲಿಕವಾಗಿದ್ದು, ಅದರಿಂದ ನಮಗೆ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ. ಅಲ್ಲದೆ, ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದರು.

ಯುದ್ಧ ತಾತ್ಕಾಲಿಕ, ಹೀಗಾಗಿ ದರ ಹೆಚ್ಚಳ ಇಲ್ಲ

ಆಟೋ ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಪೂರೈಕೆಗೆ ಕೇಂದ್ರ ಸರ್ಕಾರವೇ ಅನುಮತಿ ನೀಡುತ್ತದೆ. ಅದರಲ್ಲಿ ರಾಜ್ಯದ ನಿಯಂತ್ರಣವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಆಟೋ ಗ್ಯಾಸ್‌ ಸಮಸ್ಯೆ ನಿವಾರಿಸುವಂತೆ ಒತ್ತಡ ಹೇರಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರದ ಸಚಿವರಿಗೆ ಕರೆ ಮಾಡಿಯೂ ಮಾತನಾಡಿದ್ದಾರೆ. ಸದ್ಯದ ಪರಿಸ್ಥಿತಿ ನಮ್ಮ ಹಿಡಿತದಲ್ಲಿಲ್ಲ. ಯುದ್ಧ ನಿಂತರೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.