- Home
- News
- State
- ಮುಂಗಾರು ಆಗಮನ ಬೆನ್ನಲ್ಲೇ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; 6 ಜಿಲ್ಲೆಗಳಿಗೆ 'ರೆಟ್ ಅಲರ್ಟ್' ಘೋಷಣೆ!
ಮುಂಗಾರು ಆಗಮನ ಬೆನ್ನಲ್ಲೇ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; 6 ಜಿಲ್ಲೆಗಳಿಗೆ 'ರೆಟ್ ಅಲರ್ಟ್' ಘೋಷಣೆ!
ನೈಋತ್ಯ ಮುಂಗಾರು ಕರ್ನಾಟಕ ಪ್ರವೇಶಿಸಿದ್ದು, ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ. ಅರಬ್ಬೀ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದಾಗಿ ಕರಾವಳಿ ಮತ್ತು ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅತಿ ಭೀಕರ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.

ಬೆಂಗಳೂರು (ಜೂ.07): ನೈಋತ್ಯ ಮುಂಗಾರು (Southwest Monsoon) ಕರ್ನಾಟಕದ ಹಲವು ಭಾಗಗಳಿಗೆ ಯಶಸ್ವಿಯಾಗಿ ಪ್ರವೇಶಿಸಿದ್ದು, ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಜೂನ್ 8 ರಿಂದ ಜೂನ್ 10 ರ ಅವಧಿಯಲ್ಲಿ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅತ್ಯಂತ ಭೀಕರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ತೀವ್ರ ಮುನ್ನೆಚ್ಚರಿಕೆ (Red/Orange Alert) ನೀಡಿದೆ.
ಮುಂಗಾರು ಪ್ರಗತಿ ಮತ್ತು ಹವಾಮಾನ ವೈಪರೀತ್ಯ:
ಹವಾಮಾನ ಇಲಾಖೆಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ಅವರು ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ನೈಋತ್ಯ ಮುಂಗಾರು ಈಗ ದೇವಗಢ, ಕೊಪ್ಪಳ, ಅನಂತಪುರ ಮತ್ತು ಚೆನ್ನೈ ಮಾರ್ಗವಾಗಿ ಮುನ್ನಡೆಯುತ್ತಿದೆ. ಮುಂದಿನ 2 ರಿಂದ 3 ದಿನಗಳಲ್ಲಿ ಇದು ಸಮಗ್ರ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದ ಇನ್ನು ಕೆಲವು ಭಾಗಗಳಿಗೆ ವ್ಯಾಪಿಸಲು ವಾತಾವರಣ ಪೂರಕವಾಗಿದೆ.
ಪ್ರಸ್ತುತ ದಕ್ಷಿಣ ಕೊಂಕಣ ಕರಾವಳಿಯ ಅರಬ್ಬೀ ಸಮುದ್ರದಲ್ಲಿ 5.8 ಕಿಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ (Cyclonic Circulation) ಸೃಷ್ಟಿಯಾಗಿದೆ. ಇದರೊಂದಿಗೆ ಕರಾವಳಿ ಕರ್ನಾಟಕದಿಂದ ಕರಾವಳಿ ಆಂಧ್ರಪ್ರದೇಶದವರೆಗೆ ಬಲವಾದ ವಾಯುಭಾರ ಕುಸಿತದ ರೇಖೆ (Trough) ಗೋಚರಿಸುತ್ತಿರುವುದರಿಂದ ಮಳೆಯ ತೀವ್ರತೆ ಹೆಚ್ಚಾಗಲಿದೆ.
ಕರಾವಳಿ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಮುನ್ನೆಚ್ಚರಿಕೆ:
ಮುಂದಿನ ಕೆಲವು ದಿನಗಳ ಕಾಲ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದೆ.
ಜೂನ್ 7 (ಇಂದು): ಕರಾವಳಿಯಾದ್ಯಂತ ಗಂಟೆಗೆ 30-40 ಕಿಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಜೂನ್ 8 ಮತ್ತು 9: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 'ಅತ್ಯಂತ ಭೀಕರ ಮಳೆ' (Extremely Heavy Rainfall) ಬೀಳಲಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಎರಡು ದಿನಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.
ಜೂನ್ 10: ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಅತಿ ಹೆಚ್ವು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಉತ್ತರ ಒಳನಾಡು: ಸಿಡಿಲು-ಗಾಳಿ ಸಹಿತ ಮಳೆ:
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 7 ರಿಂದ ಜೂನ್ 10 ರವರೆಗೆ ಗಂಟೆಗೆ 40-50 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ.
ಜೂನ್ 7: ಬೆಳಗಾವಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬಾಗಲಕೋಟೆ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಾಪುರ ಮತ್ತು ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ.
ಜೂನ್ 10: ಧಾರವಾಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ತಾರಕಕ್ಕೇರಲಿದ್ದು, ಅತ್ಯಂತ ಭಾರೀ ಮಳೆಯಾಗುವ ಆರೆಂಜ್ ಅಲರ್ಸ್ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡು ಹಾಗೂ ಬೆಂಗಳೂರು ಹವಾಮಾನ ವರದಿ:
ದಕ್ಷಿಣ ಒಳನಾಡಿನ ಮಲೆನಾಡು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜೂನ್ 9 ಮತ್ತು 10 ರಂದು ವರುಣನ ಅಬ್ಬರ ಜೋರಾಗಿರಲಿದೆ. ಮಲೆನಾಡು ಭಾಗ: ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜೂನ್ 9 ಮತ್ತು 10 ರಂದು ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಾಸನ, ಕೊಡಗು ಮತ್ತು ದಾವಣಗೆರೆ ಜಿಲ್ಲೆಗಳೂ ಕೂಡ ಭಾರೀ ಮಳೆಗೆ ಸಾಕ್ಷಿಯಾಗಲಿವೆ.
ಸಿಲಿಕಾನ್ ಸಿಟಿ ಬೆಂಗಳೂರು
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ 24 ರಿಂದ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ನಗರದ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30-40 ಕಿಮೀ ವೇಗದಲ್ಲಿ ತಂಗಾಳಿ ಬೀಸಲಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಹವಾಮಾನ ಹಿತಕರವಾಗಿರಲಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮುಂಜಾನೆಯಿಂದ ಎಡಬಿಡದೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯ ಆರ್ಭಟಕ್ಕೆ ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದೆ. ಶಿರಸಿ ಮತ್ತು ಶಿರಸಿ ಗ್ರಾಮೀಣ ಭಾಗದಲ್ಲಿ ತೀವ್ರ ಮಳೆಯಾಗಿದೆ. ಭಾರಿ ಮಳೆಯಿಂದ ರಸ್ತೆ ಮೇಲೆಲ್ಲ ನೀರು ತುಂಬಿದ್ದು ವಾಹನಸವಾರರು ಸಂಚಾರಕ್ಕೆ ವ್ಯತೆ ಪಡುವಂತಾಗಿದೆ. ನಿರಂತರ ಮಳೆಯಿಂದ ಶಿರಸಿ ಜನ ಕಂಗೆಟ್ಟಿದ್ದಾರೆ. ಕಳೆದ ಎರಡು ದಿನ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸುರಿದ ಮಳೆ ಇವತ್ತು ಮಲೆನಾಡಲ್ಲೂ ತನ್ನ ಆರ್ಭಟ ಶುರುಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

