ಬೆಂಗಳೂರಿನ ಬಿಎಂಟಿಸಿ ಚಾಲಕರೊಬ್ಬರು ಆಂಧ್ರದಿಂದ ಅಕ್ಕಿ ಸಾಗಿಸಲು ಆನ್‌ಲೈನ್‌ನಲ್ಲಿ ಸಾರಿಗೆ ಸೇವೆ ಹುಡುಕುವಾಗ ವಂಚಕರ ಬಲೆಗೆ ಬಿದ್ದಿದ್ದಾರೆ. ಅಪರಿಚಿತರು ಕಳುಹಿಸಿದ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಸುಮಾರು 2.3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಂಗಳೂರು: ಆಂಧ್ರಪ್ರದೇಶದಿಂದ ಅಕ್ಕಿ ಖರೀದಿಸಲು ಯತ್ನಿಸುತ್ತಿದ್ದ ಬಿಎಂಟಿಸಿ ಚಾಲಕನೊಬ್ಬ ಆನ್‌ಲೈನ್‌ನಲ್ಲಿ ಸಾರಿಗೆ ಸೇವೆ ಹುಡುಕುವ ವೇಳೆ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಿದ ಪರಿಣಾಮ ಕೇವಲ 10 ನಿಮಿಷಗಳೊಳಗೆ ಸುಮಾರು 2.3 ಲಕ್ಷ ರೂ. ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಬಿಎಂಟಿಸಿ ಚಾಲಕರಾದ ದಿಲೀಪ್ ಹೂವಪ್ಪ ಪೋಲ್ (47) ಅವರು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿರುವ ವ್ಯಾಪಾರಿಯಿಂದ 8 ರಿಂದ 10 ಟನ್ ಗುಣಮಟ್ಟದ ಅಕ್ಕಿಯನ್ನು ಖರೀದಿಸಲು ಯೋಜಿಸಿದ್ದರು. ಮಾರ್ಚ್ 10 ರಂದು ನೆಲ್ಲೂರಿನಿಂದ ಬೆಂಗಳೂರಿಗೆ ಅಕ್ಕಿ ಸಾಗಣೆ ಮಾಡಲು ಬೇಕಾಗುವ ಸಾರಿಗೆ ವೆಚ್ಚ ಹಾಗೂ ವಿತರಣಾ ಸಮಯದ ಮಾಹಿತಿ ತಿಳಿದುಕೊಳ್ಳಲು ಅವರು ಆನ್‌ಲೈನ್‌ನಲ್ಲಿ ವಿವಿಧ ಸಾರಿಗೆ ಸೇವೆಗಳ ಕುರಿತು ಹುಡುಕಾಟ ನಡೆಸುತ್ತಿದ್ದರು.

ಕರೆ ಬಂದಾಗ ಸ್ವೀಕರಿಸಿ ಎಡವಟ್ಟು

ಈ ವೇಳೆ ಅಪರಿಚಿತ ಸಂಖ್ಯೆಯಿಂದ ಅವರಿಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಪ್ರಸಿದ್ಧ ಸಾರಿಗೆ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾನೆ. ಹಿಂದಿಯಲ್ಲಿ ಮಾತನಾಡಿದ ಆ ವ್ಯಕ್ತಿ, “ನೀವು ಸಾರಿಗೆ ಸೇವೆ ಹುಡುಕುತ್ತಿದ್ದೀರಾ?” ಎಂದು ಕೇಳಿದ್ದಾನೆ. ಇದಕ್ಕೆ ದಿಲೀಪ್ ಅವರು ಟ್ರಕ್ ಭಾಡಿ ಮತ್ತು ದೂರದ ವಿವರಗಳನ್ನು ಕೇಳಿದಾಗ, “ಟ್ರಕ್ ಚಾಲಕರ ವಿವರಗಳು ಮತ್ತು ದೂರವನ್ನು ಆಧರಿಸಿ ಬೆಲೆ ಪಟ್ಟಿಯನ್ನು ನೋಡಬಹುದಾದ ಲಿಂಕ್ ಕಳುಹಿಸುತ್ತೇನೆ” ಎಂದು ಹೇಳಿ ಕರೆ ಮುಗಿಸಿದ್ದಾನೆ.

ಕರೆ ಮುಗಿದ ಕೆಲವೇ ಕ್ಷಣಗಳಲ್ಲಿ ದಿಲೀಪ್ ಅವರ ಮೊಬೈಲ್‌ಗೆ ಲಿಂಕ್ ಹೊಂದಿದ ಸಂದೇಶ ಬಂದಿದೆ. ಅದನ್ನು ನಿಜವಾದ ಮಾಹಿತಿ ಎಂದು ಭಾವಿಸಿ ಅವರು ಲಿಂಕ್ ಕ್ಲಿಕ್ ಮಾಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್ ಫೋನ್ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿತು. ಇದರಿಂದ ಏನೋ ತಪ್ಪಾಗಿದೆ ಎಂಬ ಅನುಮಾನ ಮೂಡಿದ ಅವರಿಗೆ ಬಳಿಕ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವುದು ಗೊತ್ತಾಯಿತು.

ದಿಲೀಪ್ ನೀಡಿದ ದೂರಿನ ಪ್ರಕಾರ, ಮೊದಲಿಗೆ 90,000 ರೂ.ಗಳನ್ನು navirajibulislam4828@naviaxis ಎಂಬ ಯುಪಿಐ ಐಡಿಗೆ ವರ್ಗಾವಣೆ ಮಾಡಲಾಗಿದೆ. ನಂತರ 99,000 ರೂ.ಗಳನ್ನು 8272934602@nyes ಮತ್ತು 907336342@nyes ಎಂಬ ಯುಪಿಐ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬಳಿಕ ಇನ್ನೊಂದು ಖಾತೆಯಿಂದ 40,000 ರೂ.ಗಳನ್ನು 907336343@nyes ಎಂಬ ಯುಪಿಐ ಐಡಿಗೆ ಕಳುಹಿಸಲಾಗಿದೆ. ಬೆಳಿಗ್ಗೆ 10.10ರಿಂದ 10.20ರ ನಡುವಿನ ಕೇವಲ ಹತ್ತು ನಿಮಿಷಗಳಲ್ಲಿ ಒಟ್ಟಾರೆ ಸುಮಾರು 2.3 ಲಕ್ಷ ರೂ.ಗಳನ್ನು ವಂಚಕರು ದೋಚಿದ್ದಾರೆ.

ಮೊಬೈಲ್ ಫೋನ್ ಸ್ವಯಂಚಾಲಿತವಾಗಿ ಸ್ವಿಚ್ ಆಫ್

ಇದಲ್ಲದೆ ಹಣ ವರ್ಗಾವಣೆ ನಡೆದ ತಕ್ಷಣ ದಿಲೀಪ್ ಅವರ ಮೊಬೈಲ್ ಫೋನ್ ಸ್ವಯಂಚಾಲಿತವಾಗಿ ಸ್ವಿಚ್ ಆಫ್ ಆಗಿದ್ದು, ಅವರ ವಾಟ್ಸಾಪ್ ಖಾತೆಯೂ ಲಾಗ್ ಔಟ್ ಆಗಿರುವುದರಿಂದ ಮೊಬೈಲ್ ಸಾಧನವನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಘಟನೆ ತಿಳಿದ ಕೂಡಲೇ ದಿಲೀಪ್ ತಮ್ಮ ಬ್ಯಾಂಕ್‌ಗಳನ್ನು ಸಂಪರ್ಕಿಸಿ ವಹಿವಾಟುಗಳನ್ನು ತಡೆಯುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡುವಂತೆ ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲು ಸುಮಾರು ಮೂರು ತಿಂಗಳುಗಳವರೆಗೆ ಸಮಯ ತೆಗೆದುಕೊಳ್ಳಬಹುದು ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದಿಲೀಪ್, “ವಂಚಕರು ನನ್ನ ಮೊಬೈಲ್ ಫೋನ್‌ನಲ್ಲಿರುವ ಚಟುವಟಿಕೆಗಳಿಗೆ ಪ್ರವೇಶಿಸಿ ಈ ರೀತಿ ಹಣ ವಂಚಿಸಲು ಸಾಧ್ಯವಾಗುತ್ತಿದ್ದರೆ, ನಮ್ಮ ಹಣವನ್ನು ರಕ್ಷಿಸಲು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟು ಕಠಿಣ ಕ್ರಮಗಳನ್ನು ಏಕೆ ಕೈಗೊಳ್ಳುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ.