Asianet Suvarna News Asianet Suvarna News

Lok Sabha Elections 2024: ರಾಜ್ಯದಲ್ಲಿಂದು 2ನೇ ಹಂತದ ಲೋಕಸಭೆ ಸಮರ

ಮತ ಕೇಂದ್ರಗಳಿಗೆ ಮತಯಂತ್ರ, ಮತದಾನದ ಸಾಮಗ್ರಿ ಕಳುಹಿಸಿಕೊಡಲಾಗಿದ್ದು, ಸಿಬ್ಬಂದಿಗಳು ತಮಗೆ ವಹಿಸಿರುವ ಮತಗಟ್ಟೆಗಳಿಗೆ ತೆರಳಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ 28,269 ಮತಗಟ್ಟೆಗಳಲ್ಲಿ ನಡೆಯುವ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. 

2nd Phase of Lok Sabha Elections 2024 Voting will be held on May 07th in Karnataka grg
Author
First Published May 7, 2024, 4:16 AM IST

ಬೆಂಗಳೂರು(ಮೇ.07): ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ಲೋಕಸಭಾ ಚುನಾವಣೆಯು ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಮಂಗಳವಾರ ಮತದಾನ ನಡೆಯಲಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳ 227 ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ತೀರ್ಮಾನವಾಗಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ.

ಮತ ಕೇಂದ್ರಗಳಿಗೆ ಮತಯಂತ್ರ, ಮತದಾನದ ಸಾಮಗ್ರಿ ಕಳುಹಿಸಿಕೊಡಲಾಗಿದ್ದು, ಸಿಬ್ಬಂದಿಗಳು ತಮಗೆ ವಹಿಸಿರುವ ಮತಗಟ್ಟೆಗಳಿಗೆ ತೆರಳಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ 28,269 ಮತಗಟ್ಟೆಗಳಲ್ಲಿ ನಡೆಯುವ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಚುನಾವಣಾ ಅಖಾಡದಲ್ಲಿರುವ 227 ಅಭ್ಯರ್ಥಿಗಳ ಪೈಕಿ 206 ಪುರುಷರು, 21 ಮಹಿಳೆಯರಿದ್ದಾರೆ. ದಾವಣಗೆರೆಯಲ್ಲಿ ಗರಿಷ್ಠ 30 ಅಭ್ಯರ್ಥಿಗಳು ಮತ್ತು ರಾಯಚೂರಿನಲ್ಲಿ ಕನಿಷ್ಠ 8 ಅಭ್ಯರ್ಥಿಗಳಿದ್ದಾರೆ.

'ನಾನು ಡಾನ್ಸ್‌ ಮಾಡ್ತಿರೋದನ್ನ ನೋಡಿ ಎಂಜಾಯ್‌ ಮಾಡಿದೆ' ‘DICTATOR’ ಪೋಸ್ಟ್‌ಗೆ ಮೋದಿ ಪ್ರತಿಕ್ರಿಯೆ!

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಮಂಗಳವಾರ ಮತದಾನ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಪ್ರಭಾ ಮಲ್ಲಿಕಾರ್ಜುನ್‌, ಗಾಯತ್ರಿ ಸಿದ್ದೇಶ್ವರ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಸೇರಿದಂತೆ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

14 ಕ್ಷೇತ್ರಗಳಲ್ಲಿ 2.59 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಇದರಲ್ಲಿ 1.29 ಕೋಟಿ ಪುರುಷರು, 1.29 ಕೋಟಿ ಮಹಿಳೆಯರು ಮತ್ತು 1,945 ಇತರೆ ಮತದಾರರಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟವರು 2.29 ಲಕ್ಷ ಮತದಾರರು, 6.90 ಲಕ್ಷ ಯುವ ಮತದಾರರಿದ್ದಾರೆ.

ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 28,257 ಪ್ರಮುಖ ಮತಗಟ್ಟೆಗಳಾಗಿದ್ದು, 12 ಉಪ ಮತಗಟ್ಟೆಗಳಾಗಿವೆ. 28,269 ಮತಗಟ್ಟೆಗಳ ಪೈಕಿ 936 ವಿಶೇಷ ಮತಗಟ್ಟೆಗಳಾಗಿವೆ. ಮಹಿಳೆಯರು ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸಖಿ ಮತಗಟ್ಟೆಗಳಂತೆ ಒಟ್ಟು 560 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಂಗವಿಕಲ ಸಿಬ್ಬಂದಿಯಿಂದ ಕಾರ್ಯನಿರ್ವಹಿಸುವ ಮತಗಟ್ಟೆ 112 ಇವೆ. 264 ಮತಗಟ್ಟೆಗಳು ಮಾದರಿ ಮತಗಟ್ಟೆಗಳಾಗಿವೆ. ಇವುಗಳಲ್ಲಿ ಯುವ ಸಿಬ್ಬಂದಿವುಳ್ಳ112 ಮತಗಟ್ಟೆ, 112 ಧ್ಯೇಯ ಆಧಾರಿತ ಮತಗಟ್ಟೆಗಳಾಗಿರುತ್ತವೆ. ಸಾಂಸ್ಕೃತಿಕ ಹಿನ್ನೆಲೆ ಬಿಂಬಿಸುವ ಮತಗಟ್ಟೆಗಳನ್ನು ಶಿವಮೊಗ್ಗದಲ್ಲಿ 3 ಮತ್ತು ಉತ್ತರ ಕನ್ನಡದಲ್ಲಿ 5 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸೂಜಿ ಮೊನೆಯಷ್ಟೂ ಮಧ್ಯೆಪ್ರವೇಶ ಮಾಡೊಲ್ಲ: ಸಿಎಂ

ಎಡಗೈ ತೋರು ಬೆರಳಿಗೆ ಶಾಯಿ

ಈ ಬಾರಿಯ ಚುನಾವಣೆಯಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಗುರುತಿನ ಶಾಯಿ ಹಾಕಲಾಗುತ್ತದೆ. ಅಳಿಸಲಾಗದ ಶಾಯಿಯನ್ನು ಮತದಾರರ ಎಡಗೈ ತೋರು ಬೆರಳಿಗೆ ಹಚ್ಚಲಾಗುತ್ತದೆ. 

ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಿ

ಮತದಾರರು ಮತ ಚಲಾಯಿಸಲು ಮತದಾನ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ಕೊಂಡೊಯ್ಯಬೇಕು. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದಿದ್ದು, ಮತಪಟ್ಟಿಯಲ್ಲಿ ಹೆಸರಿದ್ದರೆ ಪರ್ಯಾಯ ದಾಖಲೆಗಳನ್ನು ಕೊಂಡೊಯ್ದು ಮತಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆಧಾರ್ ಕಾರ್ಡ್, ನರೇಗಾ ಕಾರ್ಡ್, ಬ್ಯಾಂಕ್/ಅಂಚೆ ಕಚೇರಿ ನೀಡಿದ ಭಾವಚಿತ್ರ ಇರುವ ಪಾಸ್ಬುಕ್, ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪಾನ್ಕಾರ್ಡ್, ಪಾಸ್ಪೋರ್ಟ್, ಭಾವಚಿತ್ರ ಇರುವ ಪಿಂಚಣಿಯ ದಾಖಲೆ, ಕೇಂದ್ರ/ರಾಜ್ಯ/ ಸಾರ್ವಜನಿಕ ಸಂಸ್ಥೆಗಳು ನೀಡಿದ ಭಾವಚಿತ್ರ ಇರುವ ಸೇವಾ ಗುರುತಿನ ಚೀಟಿಗಳು, ಸಂಸದರು, ಶಾಸಕರಿಗೆ ನೀಡಲಾದ ಗುರುತಿನ ಚೀಟಿಗಳು, ವಿಶಿಷ್ಟ ಅಂಗವೈಕಲ್ಯ ಕಾರ್ಡ್‌ಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

Latest Videos
Follow Us:
Download App:
  • android
  • ios