ರಾಯಚೂರು ಜಿಲ್ಲೆಯ ಕವಿತಾಳದ ಚಿಂಚರಕಿ ಸರ್ಕಾರಿ ಶಾಲೆಯಲ್ಲಿ ಆಹಾರ ಸಾಮಗ್ರಿ ಕೊರತೆಯಿಂದ ಬಿಸಿಯೂಟ ಸ್ಥಗಿತಗೊಂಡಿದೆ. 189 ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ದೂರದ ಹಳ್ಳಿಗಳಿಂದ ಬರುವ ಮಕ್ಕಳ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. 

ರಾಯಚೂರು (ಸೆ.15): ರಾಯಚೂರು ಜಿಲ್ಲೆಯ ಕವಿತಾಳದ ಚಿಂಚರಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದು ವಾರದಿಂದ ಬಿಸಿಯೂಟ ವಿತರಣೆ ಸ್ಥಗಿತಗೊಂಡಿದ್ದು, 189 ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಆಹಾರ ಸಾಮಗ್ರಿಗಳ ಕೊರತೆಯಿಂದ ಈ ಸಮಸ್ಯೆ ಉಂಟಾಗಿದ್ದು, ಸ್ಥಳೀಯ ಮಕ್ಕಳು ಮಧ್ಯಾಹ್ನಕ್ಕೆ ಮನೆಗೆ ಹೋಗಿ ಊಟ ಮಾಡಿ ಬರುತ್ತಾರೆ. ಆದರೆ ದೂರದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಮಧ್ಯಾಹ್ನಕ್ಕೆ ಊಟವಿಲ್ಲದೆ ಉಪವಾಸ ಮಕ್ಕಳ ಸ್ಥಿತಿಗೆ ಶಿಕ್ಷಕರು ಸಹ ಅಸಹಾಯಕರಾಗಿದ್ದಾರೆ.

ಆಹಾರ ಸಾಮಗ್ರಿ ನೀಡದ ಅಧಿಕಾರಿಗಳು:

ಎಸ್‌ಡಿಎಂಸಿ ಅಧ್ಯಕ್ಷ ಮುದೆಪ್ಪ ಅವರು, ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಶಾಲೆಯಲ್ಲಿ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳು ಮುಗಿದಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯ ಶಿಕ್ಷಕಿ ಜುಬಿದ ಬೇಗಂ ಹೇಳಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. 

ಸರಕಾರದ ಬಿಸಿಯೂಟ ಯೋಜನೆಯ ಉದ್ದೇಶವೇ ಗುಣಮಟ್ಟದ ಆಹಾರದೊಂದಿಗೆ ಶಿಕ್ಷಣವನ್ನು ಉತ್ತೇಜಿಸುವುದಾದರೂ, ಈ ಕೊರತೆಯಿಂದ ಆ ಗುರಿ ಸಾಕಾರಗೊಳ್ಳದಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.