ರಾಜ್ಯದಲ್ಲಿ ಮತ್ತೆ 2,000 ಗಡಿ ದಾಟಿದ ಕೊರೋನಾ: ಬೆಳಗಾವಿಯಲ್ಲಿ 100+
ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಒಂದೇ ವಾರದಲ್ಲಿ ಎರಡನೇ ಬಾರಿ ಎರಡು ಸಾವಿರದ ಗಡಿ ದಾಟಿವೆ.
ಬೆಂಗಳೂರು(ಆ.06): ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ಒಂದೇ ವಾರದಲ್ಲಿ ಎರಡನೇ ಬಾರಿ ಎರಡು ಸಾವಿರದ ಗಡಿ ದಾಟಿವೆ. ಆರು ತಿಂಗಳ ಬಳಿಕ ಇದೇ ಮೊದಲ ಬಾರಿ ಬೆಂಗಳೂರು ಹೊರತು ಪಡಿಸಿ ಜಿಲ್ಲೆಯೊಂದರಲ್ಲಿ 100ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ 2,042 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, 1704 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ಮತ್ತು ಕೋಲಾರದಲ್ಲಿ ತಲಾ ಒಬ್ಬ ವೃದ್ಧರು ಸಾವಿಗೀಡಾಗಿದ್ದಾರೆ. ಗುರುವಾರ 1992 ಕೇಸ್ ಪತ್ತೆಯಾಗಿ, ಒಂದು ಸಾವು ವರದಿಯಾಗಿತ್ತು. ಬೆಳಗಾವಿಯಲ್ಲಿ 110 ಪ್ರಕರಣ ಪತ್ತೆಯಾಗಿವೆ.
33 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.2 ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿದರೆ ಸೋಂಕು ಪರೀಕ್ಷೆಗಳು ಎರಡು ಸಾವಿರ ಹೆಚ್ಚಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 50 ಏರಿಕೆಯಾಗಿವೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಐದು ತಿಂಗಳ ಬಳಿಕ ಕಳೆದ ಬುಧವಾರ ಎರಡು ಸಾವಿರ (2136) ಗಡಿ ದಾಟಿತ್ತು. ಎರಡು ದಿನಗಳ ಅಂತರದಲ್ಲಿ ಮತ್ತೆ ಎರಡು ಸಾವಿರಕ್ಕೆ ಹೆಚ್ಚಿದೆ. ಬೆಂಗಳೂರಿನಲ್ಲಿ 1309 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಬೆಳಗಾವಿ 110, ಧಾರವಾಡ 96, ಮೈಸೂರು 82 ಮಂದಿಗೆ ಸೋಂಕು ತಗುಲಿದೆ. ಫೆಬ್ರವರಿ ಮೊದಲ ವಾರದ ಬಳಿಕ ಮೊದಲ ಬಾರಿ ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಯೊಂದರಲ್ಲಿ ಹೊಸ ಪ್ರಕರಣಗಳು 100 ಗಡಿ ದಾಟಿವೆ. ಏಳು ಜಿಲ್ಲೆಗಳಲ್ಲಿ ಬೆರಳೆಣಿಕೆ, ಯಾದಗಿರಿಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.
ಕರ್ನಾಟಕದಲ್ಲಿ 4 ತಿಂಗಳಲ್ಲಿ ಕೊರೋನಾ ಕೇಸ್ ಭಾರಿ ಏರಿಕೆ
ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 11,405ಕ್ಕೆ ಹೆಚ್ಚಿವೆ. ಈ ಪೈಕಿ 65 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯು, 9 ಮಂದಿ ಆಕ್ಸಿಜನ್, 46 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 11,040 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.