ಬೆಂಗಳೂರು(ಏ.30): ರಾಜ್ಯದಲ್ಲಿ ಸದ್ಯ ಪ್ರತಿದಿನ 30 ಸಾವಿರಕ್ಕಿಂತ ಹೆಚ್ಚು ಕೋವಿಡ್‌-19 ಪ್ರಕರಣಗಳು ವರದಿಯಾಗುತ್ತಿವೆ. ಇದೇ ಪ್ರವೃತ್ತಿ ಮುಂದುವರೆದರೆ ಮೇ ಮಾಸದಲ್ಲಿ ನಿತ್ಯ 2000 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕಾಗಬಹುದು ಎಂದು ಆರೋಗ್ಯ ಇಲಾಖೆಯ ಮೂಲಗಳು ಅಂದಾಜು ಮಾಡಿವೆ.

ಒಂದು ವೇಳೆ ರಾಜ್ಯದಲ್ಲಿ ಜಾರಿಗೊಳಿಸಿರುವ ಜನತಾ ಕರ್ಫ್ಯೂನಿಂದಾಗಿ ಸೋಂಕು ಪ್ರಮಾಣ ಕಡಿಮೆಯಾದರೆ ನಿತ್ಯ 1500 ಟನ್‌ಗಿಂತ ಕಮ್ಮಿ ಆಮ್ಲಜನಕ ಸಾಕಾಗಬಹುದು. ಅದಿಲ್ಲದೆ ಸೋಂಕು ಹೆಚ್ಚಿದರೆ 2000 ಟನ್‌ಗಿಂತ ಹೆಚ್ಚು ಆಮ್ಲಜನಕಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರವು ಏಪ್ರಿಲ್‌ 22ಕ್ಕೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮೇ ತಿಂಗಳಿನಲ್ಲಿ ದಿನಕ್ಕೆ 1,471 ಮೆಟ್ರಿಕ್‌ ಟನ್‌ ಆಮ್ಲಜನಕ ಹಂಚುವಂತೆ ಕೋರಿತ್ತು. ಆದರೆ ಕೇಂದ್ರ ಸರ್ಕಾರವು ಏಪ್ರಿಲ್‌ ಅಂತ್ಯದವರೆಗೆ ಪ್ರತಿದಿನ 800 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿದೆ. ಆದರೆ ರಾಜ್ಯದಲ್ಲಿ ಈಗಾಗಲೇ ಪ್ರತಿದಿನ 1,400 ಮೆಟ್ರಿಕ್‌ ಟನ್‌ ಆಮ್ಲಜನಕ ಬಳಕೆ ಆಗುತ್ತಿದೆ. ಸದ್ಯ 600 ಮೆಟ್ರಿಕ್‌ ಟನ್‌ ಆಮ್ಲಜನಕದ ಕೊರತೆ ಇದೆ. ಈ ಮಧ್ಯೆ ಏಪ್ರಿಲ್‌ ತಿಂಗಳು ಮುಕ್ತಾಯಗೊಳ್ಳುತ್ತಿದ್ದರೂ ಮೇ ತಿಂಗಳ ಕೋಟಾದ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಭರವಸೆ ನೀಡಿಲ್ಲ. ಇದು ಕೂಡ ಆತಂಕದ ವಿಚಾರ.

ಕರ್ನಾಟಕದಲ್ಲಿ ಕೊರೋನಾರ್ಭಟ: ರೆಮ್ಡೆಸಿವಿರ್‌, ಆಕ್ಸಿಜನ್‌ ನೀಡಿ, ಕೇಂದ್ರಕ್ಕೆ ಹೈಕೋರ್ಟ್‌

ಇನ್ನು, ರಾಜ್ಯ ಸರ್ಕಾರ ಆಕ್ಸಿಜನ್‌ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್‌ಗಳ ಒಕ್ಕೂಟ (ಫನಾ) ನಮ್ಮಲ್ಲಿ ಶೇ.50ರಷ್ಟು ಆಮ್ಲಜನಕದ ಕೊರತೆ ಇದೆ ಎಂದು ಹೈಕೋರ್ಟ್‌ಗೆ ಹೇಳಿಕೆ ನೀಡಿದೆ. ಖಾಸಗಿ ಆಸ್ಪತ್ರೆಗಳು ಸದ್ಯ ತಮ್ಮಲ್ಲಿರುವ ಶೇ.75ರಷ್ಟು ಬೆಡ್‌ಗಳನ್ನು ಕೋವಿಡ್‌ ಸೋಂಕಿತರಿಗೆ ಬಿಟ್ಟುಕೊಡಬೇಕು ಎಂಬ ನಿಯಮವನ್ನು ಸರ್ಕಾರ ಮಾಡಿದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.75 ಬೆಡ್‌ಗಳನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದಂತೆ ಇನ್ನಷ್ಟುಆಮ್ಲಜನಕದ ಕೊರತೆಯಾಗಬಹುದು.

ಕೇಂದ್ರ ಆಕ್ಸಿಜನ್‌ ನೀಡಿದರೂ ಪೂರೈಕೆಯಲ್ಲಿದೆ ಸಮಸ್ಯೆ

ಕೇಂದ್ರ ಸರ್ಕಾರ ಆಮ್ಲಜನಕವನ್ನು ಪೂರೈಸಿದರೂ ಆದನ್ನು ದ್ರವರೂಪದಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಅನೇಕ ಆಸ್ಪತ್ರೆಗಳಲ್ಲಿ ಇಲ್ಲ. ಆದ್ದರಿಂದ ಪ್ರತಿ ಮೂರು ಗಂಟೆಗೊಮ್ಮೆ ಆಮ್ಲಜನಕ ಫಿಲ್‌ ಮಾಡಲು ಓಡಾಡಬೇಕಾಗುತ್ತದೆ. ಆದ್ದರಿಂದ ಈ ತುರ್ತು ಸನ್ನಿವೇಶದಲ್ಲಿ ಆಮ್ಲಜನಕ ಸಂಗ್ರಹಕ್ಕೆ ವ್ಯವಸ್ಥೆ ಮಾಡಲು ಸರ್ಕಾರ ಸಹಾಯ ಮಾಡಬೇಕು ಎಂದು ಫನಾದ ಕಾರ್ಯದರ್ಶಿ ಡಾ.ವೈ.ಎಲ್‌.ರಾಜಶೇಖರ್‌ ಮನವಿ ಮಾಡುತ್ತಾರೆ.

ಅದೇ ರೀತಿ ಮೊದಲು ಒಂದು ಟ್ಯಾಂಕ್‌ ಆಮ್ಲಜನಕ ಪಡೆಯುತ್ತಿದ್ದ ಆಸ್ಪತ್ರೆಗಳು ಈಗ 6ರಿಂದ 10 ಟ್ಯಾಂಕ್‌ ಆಮ್ಲಜನಕ ಪಡೆಯುತ್ತಿವೆ. ಕೇಂದ್ರ ಸರ್ಕಾರದಿಂದ ಆಮ್ಲಜನಕ ಬಂದರೂ ಅದನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲು ಆಗುತ್ತಿಲ್ಲ. ಒಂದು ಟ್ಯಾಂಕರ್‌ಗೆ ಆಮ್ಲಜನಕ ತುಂಬಲು 5-6 ಗಂಟೆ ಸಮಯ ತೆಗೆದುಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಪರಿÖರಿಸಲು ಪ್ರಯತ್ನಿಸಬೇಕು ಎಂದು ಫನಾದ ಅಧ್ಯಕ್ಷ ಡಾ.ಎಚ್‌. ಪ್ರಸನ್ನ ಹೇಳುತ್ತಾರೆ.

ಕೊರೋನಾ ರಣಕೇಕೆ: ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಬೆಡ್‌ಗಳ ಮಾಹಿತಿ..!

ರೋಗಿಗಳನ್ನು ನೋಡಿಕೊಳ್ಳೋದಾ? ಆಕ್ಸಿಜನ್‌ ಹಿಂದೆ ಹೋಗೋದಾ?

ನಮ್ಮ ಆಸ್ಪತ್ರೆಯಲ್ಲಿ 30ರಿಂದ 40 ಬೆಡ್‌ ಕೋವಿಡ್‌ ರೋಗಿಗಳಿದ್ದಾರೆ. ಈ ಆಸ್ಪತ್ರೆಗೆ 20 ವರ್ಷದಿಂದ ಆಮ್ಲಜನಕವನ್ನು ಒಂದು ಕಂಪನಿ ಪೂರೈಸುತ್ತಿತ್ತು. ನಮ್ಮಲ್ಲಿ ಯಾವಾಗಲೂ 3 ಟ್ಯಾಂಕ್‌ ಆಮ್ಲಜನಕ ಇರುತ್ತಿತ್ತು. ಕೋವಿಡ್‌ ನಂತರ ಆರು ಟ್ಯಾಂಕ್‌ನ ಅಗತ್ಯ ಬಿದ್ದಿದೆ. ಆದರೆ, ಅಷ್ಟುಟ್ಯಾಂಕ್‌ ದೊರೆಯುತ್ತಿಲ್ಲ. ಹೆಚ್ಚಿನ ಹಣ ಕೊಡುತ್ತೇವೆ, ನಿಮ್ಮ ಕಾಲಿಗೆ ಬೀಳುತ್ತೇವೆ ಅಂದರೂ ಕೊಡುತ್ತಿಲ್ಲ. ನಾವು ಪೇಷಂಟ್‌ ಹಿಂದೆ ಹೋಗೋದಾ, ಟ್ಯಾಂಕ್‌ ಹಿಂದೆ ಹೋಗೋದಾ? ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ಆರು ಟ್ಯಾಂಕ್‌ ಬರಬೇಕಾದಲ್ಲಿ 5 ಟ್ಯಾಂಕ್‌ ಬರುತ್ತಿದೆ. ಹೀಗೆ ಆದರೆ ರೋಗಿಗಳು ಸಾಯುತ್ತಾರೆ. ಸರ್ಕಾರ ನೆರವಿಗೆ ಬರಬೇಕು ಎಂದು ಮೀನಾಕ್ಷಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ರಾಘವೇಂದ್ರ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona