ಗೃಹಲಕ್ಷ್ಮಿ ಯೋಜನೆ ಗೊಂದಲ ಸೃಷ್ಟಿಸಿ ಬಳಿಕ ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು(ಜೂ.10): ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಕುರಿತಂತೆ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್ ತಾವು ನೀಡಿದ್ದ ಹೇಳಿಕೆಯನ್ನು ಒಂದೇ ದಿನದಲ್ಲಿ ಬದಲಿಸಿದ್ದು, ಮನೆಯೊಡತಿಯ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೂ ತಾಯಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಮನೆಯೊಡತಿಯ ಮಕ್ಕಳು ತೆರಿಗೆ ಪಾವತಿದಾರರಿದ್ದರೆ ತಾಯಿ ಗೃಹಲಕ್ಷ್ಮೇ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ ಎಂದು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಗುರುವಾರ ಹೇಳಿಕೆ ನೀಡಿದ್ದರು. ಈ ಬಗ್ಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು.
ಮಕ್ಕಳು ತೆರಿಗೆ ಕಟ್ಟುತ್ತಿದ್ದರೆ ತಾಯಿಗೆ ಇಲ್ಲ 2000: ಗೃಹಲಕ್ಷ್ಮಿ ಯೋಜನೆಗೆ ಹೊಸ ಷರತ್ತು?
ಈ ಕುರಿತಂತೆ ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೇ ಯೋಜನೆ ಮಾರ್ಗಸೂಚಿಯಲ್ಲಿ ಪತಿ ಅಥವಾ ಪತ್ನಿ ತೆರಿಗೆ ಪಾವತಿದಾರರಾಗಿದ್ದರೆ ಯೋಜನೆ ಅನ್ವಯವಾಗುವುದಿಲ್ಲ ಎಂಬ ಅಂಶವಿದೆ. ಹೀಗಾಗಿ ಮನೆಯೊಡತಿಯ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೂ ಯೋಜನೆ ಅನ್ವಯವಾಗಲಿದೆ. ಈ ಬಗ್ಗೆ ಜನರು ಗೊಂದಲಕ್ಕೆ ಒಳಗಾಗಬಾರದು ಎಂದು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಅಂತ್ಯೋದಯ, ಬಿಪಿಎಲ್, ಎಪಿಎಲ್ ಯಾವುದಾದರೊಂದಿಗೆ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಅದರಲ್ಲಿ ಮಹಿಳೆಯರೇ ಮನೆಯೊಡತಿ ಎಂಬ ಅಂಶವಿರಬೇಕು. ರಾಜ್ಯದಲ್ಲಿನ ಪಡಿತರ ಚೀಟಿಯಲ್ಲಿ ಶೇ. 95ರಷ್ಟು ಮಹಿಳೆಯರೇ ಮನೆಯೊಡತಿ ಎಂಬ ಉಲ್ಲೇಖವಿದೆ. ಅದರಿಂದ ಈ ಅಂಶ ಯಾವುದೇ ಸಮಸ್ಯೆಯಾಗುವುದಿಲ್ಲ. ಆಗಸ್ಟ್ 17 ಅಥವಾ 18ರಂದು ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸಿ ಗೃಹಲಕ್ಷ್ಮೇಯರಿಗೆ 2 ಸಾವಿರ ರು. ನೀಡುವುದನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಕರಡು ಅರ್ಜಿಯಲ್ಲಿ ಬದಲಾವಣೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹ ಲಕ್ಷ್ಮೇ ಯೋಜನೆಯ ಅರ್ಜಿ ನಮೂನೆಯು ನಿಜವಾದದ್ದಾಗಿದ್ದು, ಆದರೆ ಅದು ಕರಡು ಅರ್ಜಿ (ಡ್ರಾಫ್ಟ್) ನಮೂನೆಯಾಗಿದೆ. ಅದರಲ್ಲಿ ಸಾಕಷ್ಟು ಲೋಪಗಳಿರುವುದು ಗಮನಕ್ಕೆ ಬಂದಿದೆ. ಅದನ್ನೆಲ್ಲ ಸರಿಪಡಿಸಲಾಗುವುದು. ಪ್ರಮುಖವಾಗಿ ಜಾತಿ ಕಾಲಂ ತೆಗೆದು ವರ್ಗದ ಕಲಂ ಸೇರಿಸಲಾಗುವುದು. ಜತೆಗೆ ವಿಧವೆಯರು ಸೇರಿ ಇನ್ನಿತರಿಗೆ ಅನುಕೂಲವಾಗುವಂತೆ ಅರ್ಜಿಯಲ್ಲಿ ಕಲಂಗಳನ್ನು ಸೇರಿಸಲಾಗುತ್ತದೆ. ಇನ್ನು ಎರಡ್ಮೂರು ದಿನಗಳಲ್ಲಿ ಅಧಿಕೃತ ಅರ್ಜಿ ನಮೂನೆಯನ್ನು ಪ್ರಕಟಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದರು.
