ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಸೇರಿ ಯಾವುದಾದರೂ ಒಂದು ಕಾರ್ಡ್‌ ಇರಬೇಕು. ಇಲ್ಲದಿದ್ದರೆ ಸದ್ಯಕ್ಕೆ ಯೋಜನೆ ಅನ್ವಯವಿಲ್ಲ.

ಬೆಂಗಳೂರು(ಜೂ.09): ಮನೆಯೊಡತಿಯ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ ತಾಯಿಗೆ ‘ಗೃಹಲಕ್ಷ್ಮೀ’ ಯೋಜನೆ ಅನ್ವಯವಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಗೊಂದಲದ ಹೇಳಿಕೆ ನೀಡಿದ್ದಾರೆ.

ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿಎಸ್‌ಟಿ ನೋಂದಣಿ ಮಾಡಿಕೊಂಡಿದ್ದರೆ ‘ಗೃಹಲಕ್ಷ್ಮೇ’ ಯೋಜನೆ ಅನ್ವಯ ಇಲ್ಲ ಎಂದು ಸರ್ಕಾರಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಆದರೆ, ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌, ಮಕ್ಕಳು ತೆರಿಗೆ ಪಾವತಿ ಮಾಡಿದ್ದರೂ ಆ ಕುಟುಂಬಕ್ಕೆ ಯೋಜನೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಅತ್ತೆ, ಸೊಸೆ ಇಬ್ಬರಿಗೂ ಗೃಹಲಕ್ಷ್ಮಿ ಯೋಜನೆ ಕೊಡುವಂತೆ ಒತ್ತಾಯ!

ಇನ್ನು ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಸೇರಿ ಯಾವುದಾದರೂ ಒಂದು ಕಾರ್ಡ್‌ ಇರಬೇಕು. ಇಲ್ಲದಿದ್ದರೆ ಸದ್ಯಕ್ಕೆ ಯೋಜನೆ ಅನ್ವಯವಿಲ್ಲ. ಎಪಿಎಲ್‌ಗೆ ಹೊಸದಾಗಿ ಅರ್ಜಿ ಹಾಕಿರುವವರು, ಜಿಎಸ್‌ಟಿ ರಿಟರ್ನ್‌ ಮಾಡುವವರನ್ನು ಸಹ ಯೋಜನೆಗೆ ಸೇರಿಸುವ ಬಗ್ಗೆ ಮನವಿಗಳು ಬಂದಿವೆ. ಮುಂದಿನ ದಿನಗಳಲ್ಲಿ ನಾವು ಸೇರಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರೇಷನ್‌ ಕಾರ್ಡ್‌ ಇದ್ದರಷ್ಟೆ 2000

ಗೃಹಲಕ್ಷ್ಮಿ ಯೋಜನೆಯಡಿ 2000 ರು. ಪಡೆಯಲು ಎಪಿಎಲ್‌, ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಸೇರಿ ಯಾವುದಾದರೂ ಒಂದು ಕಾರ್ಡ್‌ ಇರಬೇಕು. ಇಲ್ಲದಿದ್ದರೆ ಯೋಜನೆಯ ಲಾಭ ಸಿಗದು ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.