ಟೊಮೆಟೋ ಬೆಲೆ ಬಲು ದುಬಾರಿಯಾಗಿರುವಾಗಲೇ, 2 ಟನ್‌ ಟೊಮೆಟೋ ಸಾಗಿಸುತ್ತಿದ್ದ ವಾಹನ ಕಾರಿಗೆ ಡಿಕ್ಕಿಯಾಗಿದ್ದನ್ನೇ ನೆಪವಾಗಿಸಿಕೊಂಡ ಅಪರಿಚಿತರ ತಂಡವೊಂದು ರೈತರನ್ನು ಕೆಳಕ್ಕಿಳಿಸಿ ಟೊಮೆಟೋ ವಾಹನ ಸಮೇತ ಪರಾರಿಯಾಗಿರುವ ಘಟನೆ ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಸಮೀಪ ನಡೆದಿದೆ.

ಬೆಂಗಳೂರು (ಜು.11) : ಟೊಮೆಟೋ ಬೆಲೆ ಬಲು ದುಬಾರಿಯಾಗಿರುವಾಗಲೇ, 2 ಟನ್‌ ಟೊಮೆಟೋ ಸಾಗಿಸುತ್ತಿದ್ದ ವಾಹನ ಕಾರಿಗೆ ಡಿಕ್ಕಿಯಾಗಿದ್ದನ್ನೇ ನೆಪವಾಗಿಸಿಕೊಂಡ ಅಪರಿಚಿತರ ತಂಡವೊಂದು ರೈತರನ್ನು ಕೆಳಕ್ಕಿಳಿಸಿ ಟೊಮೆಟೋ ವಾಹನ ಸಮೇತ ಪರಾರಿಯಾಗಿರುವ ಘಟನೆ ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಸಮೀಪ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಣುಕಾಪುರದ ರೈತರಾದ ಮಲ್ಲೇಶ್‌ ಹಾಗೂ ಶಿವಣ್ಣ ಅವರು 2 ಲಕ್ಷ ರು. ಮೌಲ್ಯದ ಟೊಮೆಟೋ ತುಂಬಿದ್ದ ತಮ್ಮ ವಾಹನ ಕಳೆದುಕೊಂಡಿದ್ದಾರೆ. ನೋಂದಣಿ ಸಂಖ್ಯೆ ಆಧರಿಸಿ ವಾಹನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ತಮ್ಮೂರಿನಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ರೈತರು ಶನಿವಾರ ಟೊಮೆಟೋ ಸಾಗಿಸುವಾಗ ಈ ಘಟನೆ ನಡೆದಿದೆ.

ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!

ಅಪಘಾತ, ಹೈಡ್ರಾಮಾ:

ಚಳ್ಳಕೆರೆಯಿಂದ ಕೋಲಾರಕ್ಕೆ ತಮ್ಮ ಮಹೀಂದ್ರ ಪಿಕ್‌ಅಪ್‌ ವಾಹನದಲ್ಲಿ 200 ಕ್ರೇಟ್‌ಗಳಲ್ಲಿ ಸುಮಾರು ಎರಡು ಟನ್‌ ತೂಕದ ಟೊಮೆಟೋವನ್ನು ತುಂಬಿಕೊಂಡು ಶನಿವಾರ ಮಲ್ಲೇಶ್‌ ಹಾಗೂ ಶಿವಣ್ಣ ತೆರಳುತ್ತಿದ್ದರು. ತುಮಕೂರು ರಸ್ತೆ ಮೂಲಕ ಬೆಂಗಳೂರು ಪ್ರವೇಶಿಸಿದ ಅವರು, ಗೊರಗುಂಟೆಪಾಳ್ಯದಲ್ಲಿ ತಿರುವು ಪಡೆದು ಕೋಲಾರ ಕಡೆಗೆ ಸಾಗುತ್ತಿದ್ದರು. ಆ ವೇಳೆ ಝೈಲೋ ಕಾರಿಗೆ ಮಹೀಂದ್ರ ಪಿಕ್‌ ಆಪ್‌ ವಾಹನ ಗುದ್ದಿದೆ. ತಕ್ಷಣವೇ ಕಾರಿನಲ್ಲಿದ್ದವರು ಕೆಳಗಿಳಿದು ಮಹೀಂದ್ರ ವಾಹನದಲ್ಲಿದ್ದವರ ಮೇಲೆ ಜಗಳಕ್ಕಿಳಿದಿದ್ದಾರೆ. ಕಾರು ರಿಪೇರಿ ಮಾಡಿಸಿಕೊಡುವಂತೆ ಒತ್ತಾಯಿಸಿದ್ದಾರೆ. ತಾವು ತಪ್ಪು ಮಾಡಿಲ್ಲವೆಂದು ಹೇಳಿದರೂ ಕೇಳದೆ ರೈತರ ಮೇಲೆ ಅಪರಿಚಿತರು ಗಲಾಟೆ ಮಾಡಿದ್ದಾರೆ.

ಬಳಿಕ ಟೊಮೆಟೋ ವಾಹನವೇರಿದ ಅಪರಿಚಿತರು, ಶಿವಣ್ಣ ಹಾಗೂ ಮಲ್ಲೇಶ್‌ ಅವರಿಗೆ ಬೆದರಿಕೆ ಹಾಕಿ ತಾವೇ ವಾಹನ ಚಲಾಯಿಸಿಕೊಂಡು ಕೆ.ಆರ್‌.ಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ರೈತರ ಬಳಿ ಮತ್ತೆ ಹಣಕ್ಕೆ ಕಿಡಿಗೇಡಿಗಳು ಒತ್ತಾಯಿಸಿದ್ದಾರೆ. ಆಗಲೂ ತಮ್ಮ ಬಳಿ ಹಣವಿಲ್ಲವೆಂದು ರೈತರು ಹೇಳಿದ್ದಾರೆ. ಈ ಮಾತಿನಿಂದ ಕೆರಳಿದ ಅಪರಿಚಿತರು, ರೈತರನ್ನು ವಾಹನದಿಂದ ಕೆಳಗಿಸಿ ‘ವಾಹನದಲ್ಲಿ ತುಂಬಿರುವ ಟೊಮೆಟೋ ಮಾರಿ ಹಣ ಪಡೆದು ಕಾರು ರಿಪೇರಿ ಮಾಡಿಸಿಕೊಳ್ಳುತ್ತೇವೆ’ ಎಂದು ವಾಹನ ಸಮೇತ ಪರಾರಿಯಾಗಿದ್ದಾರೆ. ಈ ವಿಚಾರವನ್ನು ತಮ್ಮ ಮಾಲೀಕನಿಗೆ ತಿಳಿಸಿದ ರೈತರು, ನಂತರ ಮಾಲೀಕರ ಸೂಚನೆ ಮೇರೆಗೆ ಆರ್‌ಎಂಸಿ ಯಾರ್ಡ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮಹೀಂದ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

15 ದಿನದಲ್ಲಿ ಟೊಮೆಟೋ ಬೆಲೆ ಇಳಿಕೆ; ತೊಗರಿ ಬೇಳೆ ಬೆಲೆ ಕಡಿಮೆ ಮಾಡಲು ಹೆಚ್ಚು ಆಮದು: ಕೇಂದ್ರ ಸರ್ಕಾರ

ಗೊರಗುಂಟೆಪಾಳ್ಯ ಜಂಕ್ಷನ್‌ ಸಮೀಪ ರಸ್ತೆಯಲ್ಲಿ ಎರಡು ವಾಹನಗಳ ನಡುವೆ ಸ್ಪರ್ಶಿಸಿ ಜಖಂಗೊಂಡಿದ್ದಕ್ಕೆ ಮಹೀಂದ್ರ ಪಿಕ್‌ ಆಪ್‌ ವಾಹನ ಕಳ್ಳತನವಾಗಿದೆ. ಇದು ಟೊಮೆಟೋಗಾಗಿ ನಡೆದ ಕಳ್ಳತನ ಕೃತ್ಯವಲ್ಲ. ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ.

-ಶಿವಪ್ರಕಾಶ್‌ ದೇವರಾಜ್‌, ಡಿಸಿಪಿ, ಉತ್ತರ ವಿಭಾಗ