ಬಿಜೆಪಿ ಆಡಳಿತಾವಧಿಯ ಬೆಲೆ ಏರಿಕೆಯಿಂದ ಬೇಸತ್ತು ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತೇವೆ. ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ಈಗಿನ 5 ರು.ಗಳಿಂದ 7 ರು.ಗೆ ಹೆಚ್ಚಿಸುತ್ತೇವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 

ತುಮಕೂರು(ಜೂ.04): ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ 5 ರು.ಗಳಿಂದ 7 ರು.ಗೆ ಹೆಚ್ಚಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಆಡಳಿತಾವಧಿಯ ಬೆಲೆ ಏರಿಕೆಯಿಂದ ಬೇಸತ್ತು ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತೇವೆ. ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ಈಗಿನ 5 ರು.ಗಳಿಂದ 7 ರು.ಗೆ ಹೆಚ್ಚಿಸುತ್ತೇವೆ ಎಂದು ತಿಳಿಸಿದರು.

ಔರಾದ್ಕರ್‌ ವರದಿ ಜಾರಿ ಬಗ್ಗೆ ಪರಿಶೀಲನೆ ಮಾಡುತ್ತೇನೆ. 7ನೇ ವೇತನ ಆಯೋಗ ಜಾರಿ ಮಾಡಿದರೆ ಔರಾದ್ಕರ್‌ ವರದಿಯನ್ನು ಪ್ರತ್ಯೇಕವಾಗಿ ಜಾರಿ ಮಾಡುವ ಅವಶ್ಯಕತೆ ಇಲ್ಲ. ಸದ್ಯದಲ್ಲೇ 15 ಸಾವಿರ ಪೊಲೀಸ್‌ ಪೇದೆಗಳ ನೇಮಕ ಮಾಡಲಾಗುತ್ತದೆ. ಪಿಎಸ್‌ಐ ನೇಮಕಾತಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. 53 ಜನರು ತಪ್ಪಿತಸ್ಥರು ಎಂದು ಕಂಡು ಬಂದಿದೆ. ಮರು ಪರೀಕ್ಷೆ ಮಾಡಬಾರದು ಎಂದು ಕೋರ್ಚ್‌ ತಡೆ ನೀಡಿದೆ. ಹೀಗಾಗಿ, ಈ ವಿಷಯವಾಗಿ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.

ನಂದಿನಿ ಬೂತ್‌ನಲ್ಲಿ ಪೇಡಾ ತಿಂದು ಐಸ್‌ಕ್ರೀಂ ಸವಿದ ರಾಹುಲ್‌ ಗಾಂಧಿ

ಜುಲೈನಲ್ಲಿ ಬಜೆಟ್‌ ಮಂಡಿಸಲಾಗುವುದು. ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಅನುದಾನ ಮೀಸಲಿಡಲಾಗುವುದು. ರಾಜ್ಯದ ಅಭಿವೃದ್ಧಿ ಕುಂಠಿತವಾಗದ ರೀತಿಯಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆ. ಹಣಕಾಸು ವ್ಯಯ ಆಗದೆ, ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಜಾರಿ ಮಾಡುತ್ತೇವೆ. ಐದು ವರ್ಷದವರೆಗೂ ಗ್ಯಾರಂಟಿಯನ್ನು ಮುಂದುವರಿಸುತ್ತೇವೆ. ಎಲ್ಲಾ ಯೋಜನೆಗಳ ಡಿಪಿಆರ್‌ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಾವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ. ಅಲ್ಲದೆ, ನಿಗಮ ಮಂಡಳಿ ವಿಚಾರವಾಗಿಯೂ ಅನಗತ್ಯ ಎಂದು ಕಂಡು ಬಂದರೆ ಅದನ್ನು ರದ್ದುಪಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು.