ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ವನ್ಯಜೀವಿಯ ದೇಹದ ಭಾಗ ಅಥವಾ ಅದರಿಂದ ಮಾಡಲಾದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಅಕ್ರಮ. ಹೀಗಾಗಿಯೇ ಹುಲಿ ಉಗುರಿನ ಆಭರಣ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಕೆಲವರನ್ನು ಬಂಧಿಸಿ, ಪ್ರಕರಣವನ್ನೂ ದಾಖಲಿಸಲಾಗಿದೆ. ಅದೇ ರೀತಿ ಮಾಹಿತಿಯ ಕೊರತೆಯಿಂದ ತಮ್ಮ ಬಳಿ ಇಟ್ಟುಕೊಂಡಿರುವವರು ವನ್ಯಜೀವಿಗಳ ದೇಹದ ಭಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡಲಾಗಿದೆ: ಅರಣ್ಯ ಸಚಿವ ಈಶ್ವರ್‌ ಖಂಡ್ರೆ 

ಬೆಂಗಳೂರು(ಅ.28): ಹುಲಿ ಉಗುರಿನ ಆಭರಣ ಹೊಂದಿದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಮತ್ತು ಅದರಿಂದ ಮಾಡಿರುವ ವಸ್ತುಗಳನ್ನು ಹೊಂದಿರುವವರು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಯಾವುದೇ ವನ್ಯಜೀವಿಯ ದೇಹದ ಭಾಗ ಅಥವಾ ಅದರಿಂದ ಮಾಡಲಾದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಅಕ್ರಮ. ಹೀಗಾಗಿಯೇ ಹುಲಿ ಉಗುರಿನ ಆಭರಣ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಕೆಲವರನ್ನು ಬಂಧಿಸಿ, ಪ್ರಕರಣವನ್ನೂ ದಾಖಲಿಸಲಾಗಿದೆ. ಅದೇ ರೀತಿ ಮಾಹಿತಿಯ ಕೊರತೆಯಿಂದ ತಮ್ಮ ಬಳಿ ಇಟ್ಟುಕೊಂಡಿರುವವರು ವನ್ಯಜೀವಿಗಳ ದೇಹದ ಭಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಗುರುವಾರ ಘೋಷಿಸಿದ್ದರು. ಅದರಂತೆ ಇದೀಗ ವನ್ಯಜೀವಿಗಳ ದೇಹದ ಭಾಗಗಳನ್ನು ಅರಣ್ಯ ಇಲಾಖೆಗೆ ನೀಡಲು 60 ದಿನಗಳ (2 ತಿಂಗಳ) ಕಾಲಾವಕಾಶ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಅರಣ್ಯಾಧಿಕಾರಿಗಳು: ನನ್ನ ಮಗ ಹಾಕಿದ್ದು ಒರಿಜಿನಲ್ ಅಲ್ಲ, ಪ್ಲಾಸ್ಟಿಕ್ ಉಗುರು ಎಂದ ಹೆಬ್ಬಾಳ್ಕರ

ಸದ್ಯ ವನ್ಯಜೀವಿ ಸಂರಕ್ಷಣ ಕಾಯ್ದೆ ಪ್ರಕಾರ ಯಾರೇ ಆಗಲಿ ವನ್ಯಜೀವಿಗಳ ದೇಹದ ಭಾಗವನ್ನು ಹೊಂದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಮನಗಂಡಿರುವ ಜನರು ತಮ್ಮ ಬಳಿಯಲ್ಲಿನ ವನ್ಯಜೀವಿಗಳ ದೇಹದ ಭಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗುತ್ತಿಲ್ಲ. ಹೀಗಾಗಿ ವನ್ಯಜೀವಿಯ ಅಂಗಾಂಗವನ್ನು ನೀಡುವವರ ವಿರುದ್ಧ ಯಾವುದೇ ಪ್ರಕರಣ ಅಥವಾ ದಂಡವಿಲ್ಲದಂತೆ ಮಾಡಲು ಇರುವ ಕಾನೂನಿನ ತೊಡಕಿನ ಬಗ್ಗೆ ತಿಳಿಯಲು ಹಾಗೂ ಅದಕ್ಕೆ ಪರಹಾರ ಕಂಡುಕೊಳ್ಳಲು ಕಾನೂನು ತಜ್ಞರೊಂದಿಗೆ ಚರ್ಚಿಸಲು ಅರಣ್ಯ ಸಚಿವರು ಮುಂದಾಗಿದ್ದಾರೆ. ಇನ್ನೊಂದು ವಾರದೊಳಗೆ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆದು ವನ್ಯಜೀವಿಗಳ ಅಂಗಾಂಗ ಅರಣ್ಯ ಇಲಾಖೆಗೆ ವಾಪಾಸು ನೀಡುವ ಕಾಲಾವಕಾಶವನ್ನು ಪ್ರಕಟಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

2003ರಲ್ಲಿ ಅವಕಾಶ ನೀಡಲಾಗಿತ್ತು

ವನ್ಯಜೀವಿಗಳ ಅಂಗಾಂಗ ಹಾಗೂ ಅದರಿಂದ ಮಾಡಲಾದ ವಸ್ತುಗಳನ್ನು ಇಟ್ಟುಕೊಂಡಿರುವ ಬಗ್ಗೆ ಘೋಷಿಸಿಕೊಂಡು, ಅರಣ್ಯ ಇಲಾಖೆಗೆ ವಾಪಸು ನೀಡುವುದು ಅಥವಾ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುವ ಕುರಿತು 2003ರಲ್ಲೂ ಅವಕಾಶ ನೀಡಲಾಗಿತ್ತು. ಆಗ 180 ದಿನ (6 ತಿಂಗಳು) ಕಾಲಾವಕಾಶ ನೀಡಲಾಗಿತ್ತು. ಅದೇ ಮಾದರಿಯನ್ನು ಈಗಲೂ ಅನುಸರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇಲಾಖೆ ನೀಡುವ 2 ತಿಂಗಳ ಕಾಲಾವಧಿಯೊಳಗೆ ಜನರು ತಮ್ಮ ಬಳಿಯಲ್ಲಿನ ವನ್ಯಜೀವಿಗಳ ಅಂಗಾಂಗ ಹಾಗೂ ಅದರಿಂದ ಮಾಡಲಾದ ವಸ್ತುಗಳ ವಿವರವನ್ನು ಅರ್ಜಿ ಸಹಿತ ಅರಣ್ಯ ಇಲಾಖೆಗೆ ನೀಡಬೇಕಿದೆ.

ಒಂದು ವೇಳೆ ಪೂರ್ವಿಕರಿಂದ ಅದು ಬಳುವಳಿಯಾಗಿ ಬಂದಿದ್ದರೆ ಅಥವಾ ಅದನ್ನು ಇಟ್ಟುಕೊಳ್ಳಲು ಹಿಂದೆಯೇ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿದ್ದರೆ ಆ ಬಗ್ಗೆ ದಾಖಲೆಯನ್ನೂ ಸಲ್ಲಿಸಬೇಕಿದೆ. ಅಂತಹ ವನ್ಯಜೀವಿ ಅಂಗಾಂಗಗಳನ್ನು ಜನರು ತಮ್ಮ ಬಳಿಯಲ್ಲೇ ಇಟ್ಟುಕೊಳ್ಳಲು ಅವಕಾಶ ನೀಡುವ ಬಗ್ಗೆ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ.

ಅರಣ್ಯ ಇಲಾಖೆ ನೋಟಿಸ್‌ಗೆ ಚಿತ್ರನಟರು ಡೋಂಟ್‌ ಕೇರ್‌! ಉತ್ತರಿಸದ ದರ್ಶನ್‌, ನಿಖಿಲ್‌, ಜಗ್ಗೇಶ್‌, ರಾಕ್‌ಲೈನ್‌

ಅರಣ್ಯ ಇಲಾಖೆ ನೀಡುವ ಅವಕಾಶವನ್ನು ಬಳಸಿಕೊಂಡು ವನ್ಯಜೀವಿ ಅಂಗಾಂಗ ಮತ್ತು ವಸ್ತುಗಳನ್ನು ಇಲಾಖೆ ವಶಕ್ಕೆ ನೀಡದಿದ್ದರೆ, 2 ತಿಂಗಳ ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2003ರಲ್ಲಿ ನೀಡಿದಂತೆ ವನ್ಯಜೀವಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆಗೆ ನೀಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಹಿಂದೆ 6 ತಿಂಗಳು ಕಾಲಾವಕಾಶ ನೀಡಲಾಗಿತ್ತು, ಈಗ 2 ತಿಂಗಳು ಕಾಲಾವಕಾಶ ನೀಡಲು ಚರ್ಚಿಸಲಾಗಿದೆ. ಕಾನೂನು ತಜ್ಞರ ಸಲಹೆ ಪಡೆದು ಶೀಘ್ರದಲ್ಲಿ ದಿನಾಂಕ ಘೋಷಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.