ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: ಇಲ್ಲಿದೆ ಜು.31ರ ಅಂಕಿ-ಸಂಖ್ಯೆ
* ಕರ್ನಾಟಕದಲ್ಲಿ ಇಳಿಮುಖವಾಗಿದ್ದ ಕೊರೋನಾ ಕೇಸುಗಳು ಇದ್ದಕ್ಕಿದ್ದಂತೆ ಏರಿಕೆ
* ಮೂರನೇ ಅಲೆ ಶುರುವಾಯ್ತಾ ಎನ್ನುವ ಆತಂಕ
* ಇಲ್ಲಿದೆ ಜುಲೈ 31ರ ಅಂಕಿ-ಸಂಖ್ಯೆ
ಬೆಂಗಳೂರು, (ಜು.31): ಕರ್ನಾಟಕದಲ್ಲಿ ಇಳಿಮುಖವಾಗಿದ್ದ ಕೊರೋನಾ ಕೇಸುಗಳು ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಮೂರನೇ ಅಲೆ ಆತಂಕ ಶುರುವಾಗಿದೆ.
ಹೌದು..ರಾಜ್ಯದಲ್ಲಿ ಇಂದು (ಶನಿವಾರ) 1,38,532 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1987 ಕೊರೋನಾ ಕೇಸ್ ಪತ್ತೆಯಾಗಿದ್ದು, 37 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಪಾಸಿಟಿವಿಟಿ ದರ ಶೇಕಡ 1.43ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 29,05124ಕ್ಕೇರಿದ್ರೆ, ಸಾವನ್ನಪ್ಪಿದವರ ಸಂಖ್ಯೆ 36562ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು 1632 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ 2844742 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 23,796 ಸಕ್ರಿಯ ಪ್ರಕರಣಗಳು ಇವೆ.
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 450 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 377 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, 11 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಇಳಿಮುಖವಾಗಿದ್ದ ಕೊರೋನಾ ಕೇಸುಗಳ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಕರ್ನಾಟಕದ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕರ್ನಾಟಕಕ್ಕೂ ಆತಂಕ ಎದುರಾಗಿದೆ.
ಮಹಾರಾಷ್ಟ್ರ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ವಿಶೇಷ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ವರದಿ ತೋರಿಸುವವರಿಗೆ ಮಾತ್ರ ರಾಜ್ಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಇಂದು (ಶನಿವಾರ) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.