ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
* ನೆರೆ ರಾಜ್ಯಗಳಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಳ
* ಕರ್ನಾಟಕದ ಗಡಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ
* ಹೊಸ ಮಾರ್ಗಸೂಚಿಯನ್ನು ಹೊರಡಿಸಿದ ರಾಜ್ಯ ಸರ್ಕಾರ
ಬೆಂಗಳೂರು, (ಜು.31): ಕರ್ನಾಟಕದಲ್ಲಿ ಇಳಿಮುಖವಾಗಿದ್ದ ಕೊರೋನಾ ಕೇಸುಗಳ ಸಂಖ್ಯೆ ಮತ್ತೆ ದಿಢೀರ್ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಮಹಾರಾಷ್ಟ್ರ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ವಿಶೇಷ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ವರದಿ ತೋರಿಸುವವರಿಗೆ ಮಾತ್ರ ರಾಜ್ಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಇಂದು (ಶನಿವಾರ) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಕೋವಿಡ್ ಮಾರ್ಗಸೂಚಿ ವಿಸ್ತರಣೆ: ರಾಜ್ಯ ಸರ್ಕಾರಗಳಿಗೆ ಖಡಕ್ ಸೂಚನೆ
ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಈಗಾಗಲೇ 2 ಡೋಸ್ ಕೊವಿಡ್ ಲಸಿಕೆ ಪಡೆದಿದ್ದರೂ ಕೊರೋನಾ ನೆಗೆಟಿವ್ ರಿಪೋರ್ಟ್ ತೋರಿಸುವುದು ಕಡ್ಡಾಯವಾಗಿದೆ. ಈ ಮಾರ್ಗಸೂಚಿಗಳು ಇಂದಿನಿಂದಲೇ ಜಾರಿಯಾಗಲಿವೆ.
ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೋನಾ ಕೇಸುಗಳು ಹೆಚ್ಚಾಗುತ್ತಿರುವುದರಿಂದ ಈ ಎರಡು ರಾಜ್ಯಗಳಿಂದ ಕರ್ನಾಟಕದ ಗಡಿಯೊಳಗೆ ಬರುವವರು 72 ಗಂಟೆಗಳ ಒಳಗಿನ ನೆಗೆಟಿವ್ ರಿಪೋರ್ಟ್ ತೋರಿಸುವುದು ಕಡ್ಡಾಯವಾಗಿದೆ.
ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಮತ್ತೆ ಹೆಚ್ಚಾಗುತ್ತಿದೆ.ಇದರಿಂದ ಕರ್ನಾಟಕದ ಗಡಿಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.