ಕೋವಿಡ್‌ ಹೆಮ್ಮಾರಿ, 18 ಕಂದಮ್ಮಗಳು ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥವಾಗುವಂತೆ ಮಾಡಿದೆ ರಾಜ್ಯದಲ್ಲಿ ಸಂಖ್ಯೆ ಇನ್ನಷ್ಟುಹೆಚ್ಚಾಗುವ ಭೀತಿಯೂ ಇದೆ ರಾಜ್ಯದ 10 ಜಿಲ್ಲೆಗಳಿಂದ 18 ಮಕ್ಕಳು ಅನಾಥರಾಗಿರುವ ಮಾಹಿತಿ

 ಬೆಂಗಳೂರು (ಜೂ.02):  ರಾಜ್ಯದಲ್ಲಿ ಕೋವಿಡ್‌ ಹೆಮ್ಮಾರಿ, 18 ಕಂದಮ್ಮಗಳು ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥವಾಗುವಂತೆ ಮಾಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಜೊತೆಗೆ ಈ ಸಂಖ್ಯೆ ಇನ್ನಷ್ಟುಹೆಚ್ಚಾಗುವ ಭೀತಿಯೂ ಇದೆ.

ರಾಜ್ಯದ 10 ಜಿಲ್ಲೆಗಳಿಂದ 18 ಮಕ್ಕಳು ಅನಾಥರಾಗಿರುವ ಮಾಹಿತಿ ಸದ್ಯ ಸರ್ಕಾರ ಬಳಿಯಿದೆ. ಬಾಗಲಕೋಟೆ, ರಾಯಚೂರಿನಲ್ಲಿ ತಲಾ ಮೂವರು, ಬೆಂಗಳೂರು ನಗರ, ಮೈಸೂರು, ಬೀದರ್‌, ಬೆಳಗಾವಿ ಜಿಲ್ಲೆಯಲ್ಲಿ ತಲಾ ಇಬ್ಬರು, ಕೋಲಾರ, ಚಾಮರಾಜನಗರ, ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಯಲ್ಲಿ ತಲಾ ಒಂದು ಮಗು ತನ್ನ ತಂದೆ ತಾಯಿ ಇಬ್ಬರನ್ನೂ ಕೋವಿಡ್‌ ಹೆಮ್ಮಾರಿಯಿಂದ ಕಳೆದುಕೊಂಡಿದೆ. ಈ ಎಲ್ಲ ಮಕ್ಕಳನ್ನು ಆಯಾ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದ್ದು ಅವರ ಆಪ್ತ ಕುಟುಂಬದ ವಶಕ್ಕೆ ನೀಡಲಾಗಿದೆ. ಕಳೆದ 10 ದಿನಗಳಿಂದ ಮಕ್ಕಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮಕ್ಕಳ ರಕ್ಷಣಾ ಘಟಕಗಳು ಸಂಗ್ರಹಿಸುತ್ತಿವೆ.

ಕರ್ನಾಟಕದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆ, ಕೊಂಚ ನಿರಾಳ ಭಾವ ..

ಸುಪ್ರೀಂ ಕೋರ್ಟ್‌ ಸೂಚನೆಯಂತೆ ಇದೀಗ ಸರ್ಕಾರವು ಕೊರೋನಾದಿಂದಾಗಿ ತಂದೆ ತಾಯಿಗಳಲ್ಲಿ ಒಬ್ಬರನ್ನು ಕಳೆದುಕೊಂಡವರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. 2020ರ ಮಾಚ್‌ರ್‍ನಿಂದ 2021ರ ಮೇವರೆಗೆ ಒಬ್ಬರು ಪೋಷಕರು ಅಥವಾ ಇಬ್ಬರನ್ನೂ ಕಳಕೊಂಡವರ ಮಾಹಿತಿ ಸಂಗ್ರಹಿಸುವಂತೆ ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರವು ಈ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿದೆ.

ಕೋವಿಡ್‌ ನಿಂದ ತಂದೆ ತಾಯಿಗಳಿಬ್ಬರನ್ನು ಕಳಕೊಂಡವರ ಸಂಖ್ಯೆ ಇನ್ನಷ್ಟುಹೆಚ್ಚಿರುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರು ಅಭಿಪ್ರಾಯ ಪಡುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona