ಕೊಡಗಿನಲ್ಲಿ 24ರಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿ: ಡಿಸಿ ಸತೀಶ್
ಆ.26ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮತ್ತೊಂದು ಕಡೆ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ.24 ಬೆಳಗ್ಗೆ 6 ಗಂಟೆಯಿಂದ ಆ.27 ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಸತೀಶ್ ಆದೇಶ ಹೊರಡಿಸಿದ್ದಾರೆ.
ಮಡಿಕೇರಿ (ಆ.23): ಆ.26ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮತ್ತೊಂದು ಕಡೆ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆ.24 ಬೆಳಗ್ಗೆ 6 ಗಂಟೆಯಿಂದ ಆ.27 ಸಂಜೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಸತೀಶ್ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಈ ಆದೇಶ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಿಜೆಪಿ ಪಕ್ಷದ ಕಾರ್ಯಕರ್ತರು, ಕಪ್ಪು ಬಾವುಟ ತೋರಿಸಿ, ಘೋಷಣೆ ಕೂಗಿ, ಸಾವರ್ಕರ್ ಚಿತ್ರ ತೋರಿಸಿ, ಮೊಟ್ಟೆಎಸೆದಿರುವ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಆ.26ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಪ್ರತಿಭಟನೆ ಸುಮಾರು ಲಕ್ಷ ಜನರು ಸೇರಿಸುವುದಾಗಿ ತಿಳಿಸಿದ್ದಾರೆ. ಇತರೆ ಜಿಲ್ಲೆಗಳಿಂದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಂಡ ತಂಡವಾಗಿ ಆಗಮಿಸುವ ಮಾಹಿತಿಯಿದೆ.
ಮಡಿಕೇರಿ ಚಲೋ ಹಿಂತೆಗೆದುಕೊಳ್ಳಿ: ಸಿದ್ದರಾಮಯ್ಯಗೆ ಮಾಜಿ ಕುಚುಕು ಮನವಿ, ಸಲಹೆ
ಆ.26ರಂದೇ ಬಿಜೆಪಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜನ ಜಾಗೃತಿ ಸಮಾವೇಶ ನಡೆಸಲು ಕರೆ ನೀಡಿದ್ದು, ಈ ಸಮಾವೇಶದಲ್ಲಿ 1 ಲಕ್ಷ ಕಾರ್ಯಕರ್ತರನ್ನು ಸೇರಿಸಲು ಪ್ರಯತ್ನ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಕಾರ್ಯಕ್ರಮಕ್ಕೆ ಇತರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಆಗಮಿಸುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜಿಲ್ಲಾದ್ಯಂತ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕಾಗಿರುತ್ತದೆ.
'ಟಿಪ್ಪು ಬಂದಾಗಲೇ ಕೊಡವರು ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ'
ಜಿಲ್ಲೆಯಾದ್ಯಂತ (ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಯಾವುದೇ ಸಭೆ ಸಮಾರಂಭಗಳನ್ನು ನಡೆಸದಂತೆ, ಯಾವುದೇ ಪ್ರತಿಭಟನೆ, ಮೆರವಣಿಗೆ, ರಾರಯಲಿ, ಜಾಥಾ ನಡೆಸದಂತೆ, 5 ಮತ್ತು ಅದಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ, ವಿಜಯೋತ್ಸವ ನಡೆಸದಂತೆ, ಪಟಾಕಿ ಸಿಡಿಸದಂತೆ, ಕಪ್ಪು ಬಟ್ಟೆ ಧರಿಸದಂತೆ ಮತ್ತು ಕಪ್ಪು ಬಾವುಟ ಹಿಡಿಯದಂತೆ, ಧ್ವನಿವರ್ಧಕ ಬಳಸಿ ಪ್ರಚೋದನಾತ್ಮಕ ಘೋಷಣೆ ಕೂಗದಂತೆ, ವಾಹನಗಳಲ್ಲಿ ಪ್ರಚೋದನಾತ್ಮಕ, ಫಲಕ/ಬಾವುಟಗಳನ್ನು ಅಳವಡಿಸದಂತೆ ಹಾಗೂ ಯಾವನೇ ವ್ಯಕ್ತಿಯು ಆಯುಧಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ತಿರುಗಾಡದಂತೆಯೂ, ಭಾಷಣ ನಡೆಸದಂತೆಯೂ ಹಾಗೂ ಯಾವುದೇ ವಾರದ ಸಂತೆಯನ್ನು ಸಹ ನಡೆಸದಂತೆ ಮುಂಜಾಗೃತಾ ಕ್ರಮಕ್ಕಾಗಿ ಕಲಂ 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಿಲಾಧಿಕಾರಿ ಸತೀಶ್ ಜಾರಿಗೊಳಿಸಿದ್ದಾರೆ.