ಬೆಂಗಳೂರು(ಮೇ.12): ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅಟ್ಟಹಾಸ ಮೆರೆಯುತ್ತಾ ಬಂದಿದ್ದ ಕೊರೋನಾ ವೈರಸ್‌ ಕೊಂಚ ಕಡಿಮೆಯಾಗಿದೆ. ಸೋಮವಾರ ಹೊಸದಾಗಿ 14 ಪ್ರಕರಣಗಳು ಮಾತ್ರ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ, ಬೆಳಗಾವಿಯಲ್ಲಿ ಗುಣಮುಖನಾಗಿದ್ದ 50 ವರ್ಷದ ವ್ಯಕ್ತಿಯೊಬ್ಬನಿಗೆ ಮತ್ತೆ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ತಬ್ಲೀಘಿ ಸಂಪರ್ಕದಿಂದ ಏ.16ರಂದು ಸೋಂಕು ದೃಢಪಟ್ಟು ಚಿಕಿತ್ಸೆ ಬಳಿಕ ಗುಣಮುಖನಾಗಿ ಮೇ 6ಕ್ಕೆ ಬಿಡುಗಡೆಯಾಗಿದ್ದ ಈ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮೇ 7ಕ್ಕೆ ಮತ್ತೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್‌ ಬಂದಿದೆ. ಹೃದ್ರೋಗಿಯೂ ಆಗಿರುವ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮತ್ತೆ ನಗರಕ್ಕೆ ವಾಪಸ್‌ ಆಗುತ್ತಿರುವವರಿಗೆ ಪಿಜಿ, ಹಾಸ್ಟೆಲ್‌ಗೆ ನೋ ಎಂಟ್ರಿ!

ಎಲ್ಲಿ ಎಷ್ಟು?:

ಸೋಮವಾರ ದಾವಣಗೆರೆಯಲ್ಲಿ ಮೂರು ಪ್ರಕರಣ ಪತ್ತೆಯಾಗಿದ್ದು, ಇತ್ತೀಚೆಗೆ ಮೃತಪಟ್ಟಮಹಿಳೆಯ (ಪಿ-662)ಸಂಪರ್ಕದಿಂದ 33 ವರ್ಷದ ಪುರುಷನಿಗೆ, ಪಿ-663 ಸಂಪರ್ಕದಿಂದ 30 ವರ್ಷದ ಮಹಿಳೆಗೆ ಹಾಗೂ 15 ವರ್ಷದ ಸೋಂಕಿತೆ (ಪಿ-667) ಪ್ರಾಥಮಿಕ ಸಂಪರ್ಕ ಹೊಂದಿದ್ದ 56 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕು ಜಿಲ್ಲಾವಾರು ಪಟ್ಟಿಯಲ್ಲಿ ದಾವಣಗೆರೆ ಐದನೇ ಸ್ಥಾನ ಪಡೆದುಕೊಂಡಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ 20 ವರ್ಷದ ಯುವಕ ಅಹಮದಾಬಾದ್‌ ಜಮಾತ್‌ನಲ್ಲಿ ಭಾಗವಹಿಸಿ ಮರಳಿದ್ದು, ಆತನಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ ಬಾದಾಮಿ ಬಳಿ ಗ್ರಾಮದ ಸೋಂಕಿತ ಗರ್ಭಿಣಿಯಿಂದ ಸೋಂಕು ಹರಡಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 28 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ. ಬೀದರ್‌ನಲ್ಲಿ ಸೋಂಕಿತ ಮಹಿಳೆ (ಪಿ -644) ಸಂಪರ್ಕದಿಂದ 50 ವರ್ಷ ಹಾಗೂ 27 ವರ್ಷದ ಪುರುಷ ಸೋಂಕಿತರಾಗಿದ್ದಾರೆ.

ದೇವಸ್ಥಾನಗಳೇ ಮುಚ್ಚಿರುವಾಗ ಮದ್ಯ ಬೇಕಾ?

ಉಳಿದಂತೆ ಕಲಬುರಗಿಯಲ್ಲಿ 38 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ವಿಜಯಪುರದಲ್ಲಿ ಸೋಂಕಿತರ ಸಂಪರ್ಕದಿಂದ (ಪಿ-511) 20 ವರ್ಷದ ಮಹಿಳೆ, ಮಂಡ್ಯದಲ್ಲಿ ಮುಂಬೈ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿರುವ 38 ವರ್ಷದ ಪುರುಷ, ಬೆಂಗಳೂರಿನಲ್ಲಿ ಸೋಂಕಿತ (ಪಿ -796) ಸಂಪರ್ಕದಿಂದ 26 ವರ್ಷದ ಸ್ಥಳೀಯ ಪುರುಷ ಹಾಗೂ 55 ವರ್ಷದ ಆಂಧ್ರ ಪ್ರದೇಶ ಅನಂತಪುರ ಮಹಿಳೆ ಸೋಂಕಿತರಾಗಿದ್ದಾರೆ.

ಹಾಸನಕ್ಕೂ ಕೊರೋನ ಪ್ರವೇಶ

ಇದುವರೆಗೂ ಸೋಂಕಿಲ್ಲದಂತಿದ್ದ ಹಾಸನಕ್ಕೆ ಸೋಮವಾರ ಕೊರೊನಾ ವೈರಸ್‌ ದಾಳಿ ಇಟ್ಟಿದೆ. ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿದ್ದ 30 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದ ಸೋಂಕಿತ ಜಿಲ್ಲೆಗಳ ಪಟ್ಟಿ23ಕ್ಕೆ ಏರಿಕೆಯಾಗಿದೆ. ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಲಾಗುತ್ತಿದೆ.