ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ 5 ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ (ಎಸ್ಕಾಂ) ಬರೋಬ್ಬರಿ 13,708 ಕೋಟಿ ರು.ಗಳ ಸಾಲ ಪಡೆಯುವ ಸಂಬಂಧ ಸರ್ಕಾರದಿಂದ ಖಾತರಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಂಗಳೂರು (ಫೆ.10) : ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ 5 ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ (ಎಸ್ಕಾಂ) ಬರೋಬ್ಬರಿ 13,708 ಕೋಟಿ ರು.ಗಳ ಸಾಲ ಪಡೆಯುವ ಸಂಬಂಧ ಸರ್ಕಾರದಿಂದ ಖಾತರಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಸ್ಕಾಂಗಳಿಗೆ ಪಾವತಿಸಬೇಕಿರುವ ವಿದ್ಯುತ್‌ ಶುಲ್ಕ ಪಾವತಿಯಲ್ಲಿನ ವಿಳಂಬ, ಪ್ರಸರಣ ವೆಚ್ಚ ಮತ್ತಿತರ ಕಾರಣಗಳಿಗೆ ಆರ್ಥಿಕ ಸಂಕಷ್ಟಎದುರಿಸುತ್ತಿರುವ ಎಸ್ಕಾಂಗಳು ಸಾಲದ ಮೊರೆ ಹೋಗಿವೆ. ಈ ಸಾಲ ಪಡೆಯಲು ರಾಜ್ಯ ಸರ್ಕಾರದ ಖಾತ್ರಿ ನೀಡಬೇಕಿರುವುದು ಅಗತ್ಯವಿರುವುದರಿಂದ ಖಾತರಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Bengaluru: ಎಲೆಕ್ಟ್ರಾನಿಕ್‌ ಸಿಟಿಯ ಟೋಲ್‌ ವೇ ಕೇಂದ್ರ ಧ್ವಂಸ: ತನಿಖೆಗೆ ನಿರ್ಧಾರ

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಬೆಸ್ಕಾಂ 7,526 ಕೋಟಿ ರು., ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿ (ಮೈಸೂರು-ಸೆಸ್‌್ಕ) 1,398 ಕೋಟಿ ರು., ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ (ಹೆಸ್ಕಾಂ) 2,120 ಕೋಟಿ ರು., ಕಲಬುರಗಿ ವಿದ್ಯುತ್‌ ಸರಬರಾಜು ಕಂಪೆನಿ (ಜೆಸ್ಕಾಂ) 2,120 ಕೋಟಿ ರು. ಸೇರಿದಂತೆ ಒಟ್ಟು 13,708 ಕೋಟಿ ರು. ಸಾಲಕ್ಕೆ ಖಾತರಿ ನೀಡಲು ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ನೀತಿ ತಿದ್ದುಪಡಿ:

ಇನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ -2022-25ಕ್ಕೆ ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ. ಇದರಂತೆ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ 1 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ 3.5 ಎಕರೆಯಂತೆ ಭೂ ಬಳಕೆಗೆ ನೀಡಿದ್ದ ಮಿತಿಯನ್ನು 4 ಎಕರೆಗೆ ಹೆಚ್ಚಳ ಮಾಡಲಾಗಿದೆ. ಇನ್ನು ಪವನ ವಿದ್ಯುತ್‌ ಯೋಜನೆ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲು ಇದ್ದ ಕಾಲಾವಧಿಯನ್ನು 3 ವರ್ಷದಿಂದ 2 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಇವೆರಡೂ ಉದ್ಯಮಿಗಳ ಮನವಿ ಮೇರೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ:

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 37 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಪಾಲು ಅನುದಾನವನ್ನು ನೀಡಲಿವೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ತರೀಕೆರೆ ತಾಲ್ಲೂಕಿನ 113 ಜನವಸತಿ ಪ್ರದೇಶಗಳಿಗೆ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಟ್ಟು 350 ಕೋಟಿ ರು. ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಲ್ಲಿ 163 ಕೋಟಿ ರು. ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಮಾಹಿತಿ ನೀಡಿದರು.

ಉಳಿದಂತೆ ಕಲ್ಯಾಣ ಕರ್ನಾಟಕ ರಸ್ತೆ ನಿಗಮ ಬಹುಮಹಡಿ ಕಟ್ಟಡವನ್ನು 26.58 ಕೋಟಿ ರು. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು, ಚಾಮರಾಜನಗರ ನಗರಾಭಿವೃದ್ದಿ ಪ್ರಾಧಿಕಾರದಿಂದ ಮಸ್ಕಾಪುರ ಗ್ರಾಮದಲ್ಲಿ 8.67 ಕೋಟಿ ರು. ಅನುದಾನದಲ್ಲಿ ವಸತಿ ಬಡಾವಣೆ ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

Bengaluru: ಬಿಬಿಎಂಪಿಯ ಅಧಿಕಾರಿ-ನೌಕರರ ಪ್ರತಿಭಟನೆ ಅರ್ಧ ತಾಸಲ್ಲೇ ಅಂತ್ಯ

ಸಿಎಂಗೆ ಕೆಪಿಎಸ್ಸಿ ಸದಸ್ಯರ ನೇಮಕ ಅಧಿಕಾರ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಸದಸ್ಯರನ್ನು ತುಂಬಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಇತರೆ ತೀರ್ಮಾನಗಳು:

  • ನರಗುಂದದಲ್ಲಿ ಪಂಚಮಸಾಲಿ ವಿವಿಧೊದ್ದೇಶ ಸಂಘಕ್ಕೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ನಿರ್ಮಾಣಕ್ಕೆ 2 ಎಕರೆ ಜಮೀನು ಮಂಜೂರು
  • * ಚಾಮರಾಜನಗರದಲ್ಲಿ 166 ಬಹುಗ್ರಾಮ ಕುಡಿಯುವ ಯೋಜನೆಗಳಿಗೆ 26 ಕೋಟಿ ರು.
  •  ರಾಮನಗರದ 15 ಗ್ರಾಮ ಹಾಗೂ 39 ಜನವಸತಿಗೆ ಜಲಜೀವನ್‌ ಮಿಷನ್‌ ಅಡಿ 28 ಕೋಟಿ ರು. ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನ
  • ಶಿಗ್ಗಾಂವಿಯಲ್ಲಿ ನಬಾರ್ಡ್‌ ಯೋಜನೆಯಡಿ ನೂತನ ಸರ್ಕಾರಿ ಉಪಕರಣಾಗಾರ (ಟೂಲ್‌) ನಿರ್ಮಾಣಕ್ಕೆ 73.75 ಕೋಟಿ ರು.