ಬಿಬಿಎಂಪಿ ಅಧಿಕಾರಿ, ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ನಡೆಸಲು ಉದ್ದೇಶಿಸಿದ್ದ ಅಧಿಕಾರಿ, ನೌಕರರು ಪ್ರತಿಭಟನೆ ಅರ್ಧ ಗಂಟೆಗೆ ಮಾತ್ರ ಸೀಮಿತವಾಯಿತು.

ಬೆಂಗಳೂರು (ಫೆ.10) : ಬಿಬಿಎಂಪಿ ಅಧಿಕಾರಿ, ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ನಡೆಸಲು ಉದ್ದೇಶಿಸಿದ್ದ ಅಧಿಕಾರಿ, ನೌಕರರು ಪ್ರತಿಭಟನೆ ಅರ್ಧ ಗಂಟೆಗೆ ಮಾತ್ರ ಸೀಮಿತವಾಯಿತು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಬಿಬಿಎಂಪಿ ಅಧಿಕಾರಿ ನೌಕರರು ಬಿಬಿಎಂಪಿಯ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ನೌಕರರ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಭರವಸೆ ನೀಡಿದರು. ಹೀಗಾಗಿ, ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಪ್ರತಿಭಟನೆ 10.30ರ ವೇಳೆಗೆ ಅಂತ್ಯಗೊಂಡಿತು. 

ಪಾಲಿಕೆ ವಿದ್ಯಾರ್ಥಿಗಳಿಗೆ ಸ್ವೆಟರ್‌ ಭಾಗ್ಯವಿಲ್ಲ: ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ಸ್ವೆಟರ್‌ ಕೊಡದ ಬಿಬಿಎಂಪಿ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಅಮಾನತಾಗಿ 6 ತಿಂಗಳಿಗೂ ಹೆಚ್ಚಿನ ಅವಧಿಯಾಗಿರುವ ಸಹಾಯಕ ಕಂದಾಯ ಅಧಿಕಾರಿ ಮತ್ತು ಕಂದಾಯ ಪರಿವೀಕ್ಷಕರ ಅಮಾನತು ತೆರವು ಮಾಡುವುದು. ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ 318 ನೌಕರರಿಗೆ ಆದೇಶ ಪ್ರತಿ ನೀಡುವುದು. ಎಲ್ಲ ವೃಂದದ ಮುಂಬಡ್ತಿ ನೀಡುವುದು. ಬಿಬಿಎಂಪಿಯಲ್ಲಿ ಎರವಲು ಸೇವೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ, ನೌಕರರು ವಿಧಾನಸಭೆ ಚುನಾವಣೆ ನಂತರ ಮಾತೃ ಇಲಾಖೆಗೆ ವಾಪಾಸು ಕಳುಹಿಸುವುದು. ನಾಡಪ್ರಭು ಕೆಂಪೇಗೌಡ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಿಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿಯಲ್ಲಿ ಮಾರ್ಷಲ್‌ಗಳ ಸೇವೆ ಅಂತ್ಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 2009ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಂತೆ 10 ಸಾವಿರಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್‌ ಗಿರಿನಾಥ್‌, ನೌಕರರ ಸಂಘ ಹಲವು ವರ್ಷಗಳಿಂದ ಬೇಡಿಕೆ ಈಡೇರಿಕೆಗೆ ಮನವಿ ಮಾಡುತ್ತಿದೆ. ಬಿಬಿಎಂಪಿ ಮಟ್ಟದಲ್ಲಿಯೇ ಈಡೇರಿಸಬಹುದಾದ ಬೇಡಿಕೆಗಳ ಕುರಿತು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ನೇಮಕಾತಿ ಸೇರಿ ಇನ್ನಿತರ ವಿಷಯಗಳ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನೌಕರರ ಅನುಕೂಲಕ್ಕೆ ತಕ್ಕಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ಮತ್ತೊಂದು ಪಾರ್ಕಿಂಗ್‌: ಮುಖ್ಯ ಆಯುಕ್ತರ ಸೂಚನೆ

2 ಸಾವಿರ ಮಂದಿ ರಜೆ

ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಕುರಿತಂತೆ ಮೊದಲೇ ಸೂಚನೆಯಿದ್ದ ಕಾರಣ, ಗುರುವಾರ ಕಂದಾಯ ವಿಭಾಗ ಸೇರಿ ಇನ್ನಿತರ ವಿಭಾಗದ 2 ಸಾವಿರಕ್ಕೂ ಹೆಚ್ಚಿನ ನೌಕರರು ಕಚೇರಿಗೆ ಹಾಜರಾಗಲಿಲ್ಲ. ಅಲ್ಲದೆ, ಪ್ರತಿಭಟನೆ ಕೇವಲ ಅರ್ಧ ಗಂಟೆಯಲ್ಲಿ ಕೈಬಿಟ್ಟನಂತರವೂ ಮೊದಲೆ ರಜೆ ಹಾಕಿದ್ದ ನೌಕರರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ತೆರಿಗೆ ಸಂಗ್ರಹ, ಎಂಜಿನಿರಿಂಗ್‌ ಸೇರಿ ಇನ್ನಿತರ ಕೆಲಸ ಕಾರ್ಯಕ್ಕೆ ಅಲ್ಪಮಟ್ಟದ ತೊಂದರೆ ಉಂಟಾಯಿತು.