Asianet Suvarna News Asianet Suvarna News

100% Occupancy in Cinemas: ನಿರ್ಬಂಧ ಮತ್ತಷ್ಟು ಸಡಿಲ: ಸಿನಿಮಾ, ಜಿಮ್‌ 100% ಭರ್ತಿಗೆ ಸಮ್ಮತಿ

*  ಯೋಗ ಕೇಂದ್ರ, ಈಜುಕೊಳ ನಿರ್ಬಂಧವೂ ತೆರವು
*  ಇಂದಿನಿಂದ ಜಾರಿ, ಸಿಎಂ ಸಭೆಯಲ್ಲಿ ನಿರ್ಧಾರ
*  2 ಡೋಸ್‌ ಲಸಿಕೆ ಕಡ್ಡಾಯ ಹೊಸ ಮಾರ್ಗಸೂಚಿ ಪ್ರಕಟ
 

100 Percent Occupancy in Movie Theaters From Feb 5th in Karnataka grg
Author
Bengaluru, First Published Feb 5, 2022, 7:33 AM IST

ಬೆಂಗಳೂರು(ಫೆ.05):  ಕೊರೋನಾ(Coronavirus) ಪಾಸಿಟಿವಿಟಿ ದರ ಹಾಗೂ ಆಸ್ಪತ್ರೆ ಸೇರುವವರ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು(Government of Karnataka) ಮತ್ತಷ್ಟು ನಿರ್ಬಂಧಗಳನ್ನು ತೆರವುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಇಂದಿನಿಂದ(ಶನಿವಾರ) ಚಲನಚಿತ್ರ ಮಂದಿರ(Movie Theater), ಜಿಮ್‌(Gym), ಯೋಗ ಕೇಂದ್ರ ಹಾಗೂ ಈಜುಕೊಳಗಳು ಶೇ.100ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಕಂದಾಯ ಸಚಿವ ಆರ್‌. ಅಶೋಕ್‌, ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಅಧಿಕಾರಿಗಳಿಂದ ರಾಜ್ಯದಲ್ಲಿನ(Karnataka) ಕೊರೋನಾ ಸ್ಥಿತಿಗತಿ ಕುರಿತು ಬೊಮ್ಮಾಯಿ ಮಾಹಿತಿ ಪಡೆದರು.

Shiva Rajkumar: ಚಿತ್ರಮಂದಿರ 100% ಭರ್ತಿಗಾಗಿ ಸಿಎಂ ಭೇಟಿ ಮಾಡುವೆ

ಈ ವೇಳೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ರಾಜ್ಯದಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ದರ(Positivity Rate) ತೀವ್ರವಾಗಿ ಇಳಿಮುಖವಾಗುತ್ತಿದೆ. ಆಸ್ಪತ್ರೆ ಸೇರುವವರ ಪ್ರಮಾಣವು ಶೇ.5 ರಿಂದ ಶೇ.2ಕ್ಕೆ ಇಳಿಕೆಯಾಗಿದೆ. ಹೀಗಾಗಿ ಮತ್ತಷ್ಟು ನಿರ್ಬಂಧಗಳನ್ನು ಸಡಿಲಗೊಳಿಸಬಹುದು ಎಂದು ಸಲಹೆ ನೀಡಿದರು.

ಇದರಂತೆ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‌, ರಂಗಮಂದಿರ, ಸಭಾಂಗಣಗಳಲ್ಲಿ ಆಸನ ಸಾಮರ್ಥ್ಯದ ಶೇ.100 ರಷ್ಟು ಮಂದಿ ಪ್ರವೇಶಿಸಲು ಅವಕಾಶ ಕಲ್ಪಿಸಬಹುದು. ಆದರೆ ಕಟ್ಟುನಿಟ್ಟಾಗಿ ಕೊರೋನಾ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಈ ಷರತ್ತುಗಳು ಅನ್ವಯ:

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಪ್ರವೇಶಕ್ಕೆ ಅವಕಾಶ ನೀಡಬೇಕು. ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಥರ್ಮಲ್‌ ಸ್ಕ್ಯಾನರ್‌ ಮೂಲಕ ಜ್ವರದ ಪರೀಕ್ಷೆ ನಡೆಸಬೇಕು. ರೋಗ ಲಕ್ಷಣಗಳನ್ನು ಹೊಂದಿರುವವರಿಗೆ ಪ್ರವೇಶ ನಿರ್ಬಂಧಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಜತೆಗೆ ಎನ್‌-95 ಮಾಸ್ಕ್‌(N-95 Mask) ಅನ್ನು ಕಡ್ಡಾಯವಾಗಿ ಧರಿಸಬೇಕು. ಸಿನಿಮಾ ಪ್ರದರ್ಶನದ ಸಮಯ ಸೇರಿದಂತೆ ಎಲ್ಲಾ ಸಮಯದಲ್ಲೂ ಎನ್‌-95 ಮಾಸ್ಕ್‌ ಧರಿಸುವುದು ಕಡ್ಡಾಯ. ಯಾವುದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸಿ ಕೊರೋನಾ ಮಾರ್ಗಸೂಚಿ ಪಾಲಿಸದಿದ್ದರೆ ದಂಡ ವಿಧಿಸಬಹುದು ಎಂದು ಹೇಳಲಾಗಿದೆ.

ಈಜುಕೊಳ, ಜಿಮ್‌, ಯೋಗ ಸೆಂಟರ್‌ ಮುಕ್ತ:

ಈಜುಕೊಳ, ಜಿಮ್‌ ಹಾಗೂ ಯೋಗ ಕೇಂದ್ರಗಳಿಗೂ ಶೇ. 100ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಇಲ್ಲೂ ಸಹ ಎರಡೂ ಡೋಸ್‌ ಲಸಿಕೆ ಪಡೆದವರಷ್ಟೇ ಆಗಮಿಸಬೇಕು. ಥರ್ಮಲ್‌ ಸ್ಕಾ್ಯನಿಂಗ್‌ ವ್ಯವಸ್ಥೆ ಮಾಡಿ ರೋಗ ಲಕ್ಷಣ ಹೊಂದಿರವವರಿಗೆ ಪ್ರವೇಶ ಅವಕಾಶ ನೀಡಬಾರದು. ಎರಡು ಮೀಟರ್‌ (ಆರು ಅಡಿ) ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿ ಬ್ಯಾಚ್‌ ಮುಗಿದ ಬಳಿಕವೂ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು ಎಂದು ತಿಳಿಸಲಾಗಿದೆ.

ಅನಿರೀಕ್ಷಿತ ಭೇಟಿಗೆ ಅವಕಾಶ

ಸಿನಿಮಾ ಮಂದಿರ, ಈಜುಕೊಳ, ಜಿಮ್‌ ಹಾಗೂ ಯೋಗ ಕೇಂದ್ರಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲಿಸಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಅನಿರೀಕ್ಷಿತ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಪರಿಶೀಲನೆ ವೇಳೆ ಮಾರ್ಗಸೂಚಿ(Guidelines) ಉಲ್ಲಂಘನೆ ಕಂಡು ಬಂದರೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಥಿಯೇಟರ್‌, ಪಬ್‌ 100% ಭರ್ತಿಗೆ ಓಕೆ

ಮೈ ಮರೆಯುವಂತಿಲ್ಲ: ಡಾ.ಕೆ. ಸುಧಾಕರ್‌

ನಾವು ನಿರೀಕ್ಷಿಸಿದಂತೆ ಮೂರನೇ ಅಲೆ ವೇಗವಾಗಿ ಕಡಿಮೆಯಾಗುತ್ತಿದೆ. ಜನವರಿಯಲ್ಲಿ ಶೇ.5-6 ರಷ್ಟಿದ್ದ ಆಸ್ಪತ್ರೆ ದಾಖಲಾತಿ ಪ್ರಮಾಣ ಶೇ.2ಕ್ಕೆ ಇಳಿಕೆಯಾಗಿದೆ. ಜತೆಗೆ ಸಿನಿಮಾ ಉದ್ಯಮ ನಂಬಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿರುತ್ತವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾ ಮಂದಿರ, ಜಿಮ್‌, ಯೋಗ ಕೇಂದ್ರ, ಈಜುಕೊಳಗಳಿಗೆ ಶೇ.100 ರಷ್ಟುಅವಕಾಶ ನೀಡಲಾಗಿದೆ. ಆದರೆ, ನಿರ್ಲಕ್ಷ್ಯದಿಂದ ಮೈ ಮರೆಯುವಂತಿಲ್ಲ. ಕೊರೋನಾ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಈ ನಿರ್ಬಂಧಗಳು ಮುಂದುವರಿಕೆ:

- ವಿವಾಹ ಸಮಾರಂಭಗಳಿಗೆ ಹೊರಾಂಗಣದಲ್ಲಿದ್ದ 300 ಜನ ಭಾಗವಹಿಸುವಿಕೆ ಮಿತಿ ಹಾಗೂ ಒಳಾಂಗಣದಲ್ಲಿನ 200 ಮಂದಿಯ (ಕಲ್ಯಾಣ ಮಂಟಪ) ಮಿತಿ.
- ಎಲ್ಲ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರ‍್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆ
- ಕ್ರೀಡಾಂಗಣ ಹಾಗೂ ಕ್ರೀಡಾ ಸಂಕೀರ್ಣಗಳಲ್ಲಿ ಸಾಮರ್ಥ್ಯದ ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ
- ದೇವಾಲಯ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಒಂದು ಬಾರಿಗೆ 50 ಮಂದಿಗೆ ಮಾತ್ರ ಅವಕಾಶ
 

Latest Videos
Follow Us:
Download App:
  • android
  • ios