ರಾಜ್ಯದಲ್ಲಿ ಕೊರೋನಾ ಸರಾಸರಿ ಪಾಸಿಟಿವಿಟಿ ದರ ಕಡಿಮೆಯಾಗಿರುವ ಹಿನ್ನೆಲೆ ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಮುಕ್ತ ಅವಕಾಶ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ

 ಬೆಂಗಳೂರು (ಸೆ.25):  ರಾಜ್ಯದಲ್ಲಿ ಕೊರೋನಾ (covid ) ಸರಾಸರಿ ಪಾಸಿಟಿವಿಟಿ (positivity) ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಮುಕ್ತ ಅವಕಾಶ ಒದಗಿಸಲು ರಾಜ್ಯ ಸರ್ಕಾರ (karnataka govt) ಮುಂದಾಗಿದ್ದು, ಈ ನಿಟ್ಟಿನಲ್ಲಿ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ ಅಕ್ಟೋಬರ್‌ ಒಂದರಿಂದ ರಂಗಮಂದಿರ, ಸಭಾಂಗಣ ಹಾಗೂ ಚಲನಚಿತ್ರ (theaters) ಮಂದಿರಗಳಿಗೆ ಮತ್ತು ಅ.3ರಿಂದ ಪಬ್‌ಗಳಲ್ಲಿ ಶೇ.100ರಷ್ಟುಪ್ರವೇಶಾವಕಾಶ ನೀಡಲು ನಿರ್ಧರಿಸಿದೆ.

ಜತೆಗೆ, 6ನೇ ತರಗತಿ ಮೇಲ್ಪಟ್ಟಶಾಲಾ-ಕಾಲೇಜಿನ ಭೌತಿಕ ತರಗತಿಗಳಿಗೆ ಶೇ.100ರಷ್ಟುಸಾಮರ್ಥ್ಯದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಹೀಗಾಗಿ ಅಂಗನವಾಡಿಯಿಂದ 5ನೇ ತರಗತಿವರೆಗಿನ ಮಕ್ಕಳ ಭೌತಿಕ ತರಗತಿ ಹಾಗೂ ರಾತ್ರಿ ಕರ್ಫ್ಯೂ ಹೊರತುಪಡಿಸಿ ಬಹುತೇಕ ಉಳಿದೆಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದಂತಾಗಿದೆ.

ಗದಗ: ಕೇವಲ 15 ದಿನದಲ್ಲಿ ರೆಡಿಯಾಗಲಿದೆ 100 ಬೆಡ್‌ ಆಸ್ಪತ್ರೆ

ಶುಕ್ರವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕೊರೋನಾ ಸಭೆ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅ.11ರವರೆಗೆ ಅನ್ವಯವಾಗುವಂತೆ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಇದರಂತೆ ಅ.1ರಿಂದ ಕೊರೋನಾ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿನ ಚಿತ್ರಮಂದಿರ, ಸಭಾಂಗಣ, ಮಲ್ಟಿಪ್ಲೆಕ್ಸ್‌, ರಂಗಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಮಾದರಿಯಲ್ಲಿ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳಲ್ಲಿ ಅ.3ರಿಂದ ಶೇ.100ರಷ್ಟುಸಾಮರ್ಥ್ಯದೊಂದಿಗೆ ಪಬ್‌ಗಳನ್ನು ತೆರೆಯಲು ಅವಕಾಶ ನೀಡಲು ಮಾರ್ಗಸೂಚಿ ಹೊರಡಿಸಲಾಗಿದೆ. ಇನ್ನು 6ನೇ ತರಗತಿಯಿಂದ 12ನೇ ತರಗತಿವರೆಗಿನ ಶಾಲಾ-ಕಾಲೇಜು ಮಕ್ಕಳಿಗೆ ವಾರದ 5 ದಿನ ಭೌತಿಕ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಥಿಯೇಟರ್‌ ಜೊತೆ ಪಬ್‌ಗೂ 100% ಪರ್ಮಿಷನ್?

ಸೋಂಕು ಹೆಚ್ಚಾದರೆ ಮತ್ತೆ ಬಂದ್‌:

ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ 0.66% ಇದೆ. ಅಕ್ಟೋಬರ್‌ 1ರಿಂದ ಕೊರೋನಾ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು. ಶೇ.1ಕ್ಕಿಂತ ಹೆಚ್ಚಾದರೆ ಶೇ.50ರಷ್ಟುಭರ್ತಿಗೆ ಹಾಗೂ ಶೇ.2ಕ್ಕಿಂತ ಹೆಚ್ಚಾದರೆ ಚಿತ್ರಮಂದಿರ ಬಂದ್‌ ಮಾಡಲಾಗುವುದು ಎಂದು ತಿಳಿಸಿದರು. ಇದೇ ಮಾನದಂಡವನ್ನು ಪಬ್‌ಗಳಿಗೂ (Pub) ಅನುಸರಿಸಲಾಗುವುದು ಎಂದು ತಿಳಿಸಿದರು.

ಗರ್ಭಿಣಿಯರು, ವೃದ್ಧರಿಗೆ ಅವಕಾಶವಿಲ್ಲ: ಚಿತ್ರ ಮಂದಿರಗಳಲ್ಲಿ ಕನಿಷ್ಠ ಒಂದು ಡೋಸ್‌ ಲಸಿಕೆ (vaccine) ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು, ವೃದ್ಧರು ಚಿತ್ರಮಂದಿರಗಳಿಗೆ ಹೋಗದಂತೆ ಸಲಹೆ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕಾ್ಯನಿಂಗ್‌ ನಡೆಸಬೇಕು. ಶೌಚಾಲಯ ಸೇರಿದಂತೆ ಎಲ್ಲಾ ಪ್ರದೇಶವನ್ನು ಪ್ರತಿ ಶೋ ಮುಗಿದ ಬಳಿಕ ಸ್ಯಾನಿಟೈಸ್‌ ಮಾಡಬೇಕು ಎಂಬಿತ್ಯಾದಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ ಎಂದರು.

ರಾತ್ರಿ ಕರ್ಫ್ಯೂ ಸಡಿಲ:

ರಾತ್ರಿ ಕರ್ಫ್ಯೂವನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆ ಬದಲಿಗೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನಿಗದಿಪಡಿಸಲಾಗಿದೆ. ದಸರಾ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ಇನ್ನು ಗಡಿ ಭಾಗದಲ್ಲಿ ಹೆಚ್ಚು ನಿಗಾ ವಹಿಸಲಾಗುವುದು. ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಲು, ಜನರಲ್ಲಿ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಮತ್ತಿತರರು ಹಾಜರಿದ್ದರು.

4 ಜಿಲ್ಲೆಗಳಿಗೆ 1%ಕ್ಕಿಂತ ಅಧಿಕ ಪಾಸಿಟಿವಿಟಿ

ಉಡುಪಿ (ಶೇ.1.36), ಚಿಕ್ಕಮಗಳೂರು (ಶೇ.1.27), ದಕ್ಷಿಣ ಕನ್ನಡ (ಶೇ.1.19) ಮತ್ತು ಕೊಡಗು ಜಿಲ್ಲೆಯಲ್ಲಿ (ಶೇ.1.14) ಶೇ.1ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ನಿಯಮ ಸಡಿಲಿಸುವುದು ಅನುಮಾನ. ರಾಜ್ಯದ ಸರಾಸರಿ ಪಾಸಿಟಿವಿಟಿ ದರ ಶೇ.0.66 ಇದೆ.

ಏನೇನು ಕ್ರಮ?

- ರಾಜ್ಯದ ಸರಾಸರಿ ಕೋವಿಡ್‌ ಪಾಸಿಟಿವಿಟಿ ದರ 0.66%ಕ್ಕೆ ಇಳಿಕೆ

- ಈ ಹಿನ್ನೆಲೆಯಲ್ಲಿ ಹಲವು ನಿರ್ಬಂಧ ಸಡಿಲಗೊಳಿಸಿದ ಸರ್ಕಾರ

- ಪಾಸಿಟಿವಿಟಿ ದರ 1%ಕ್ಕಿಂತ ಕಡಿಮೆ ಇರುವಡೆ ಹಲ ನಿರ್ಬಂಧ ತೆರವು

- ಥಿಯೇಟರ್‌, ಸಭಾಂಗಣ, ಮಲ್ಟಿಪ್ಲೆಕ್ಸ್‌, ರಂಗಮಂದಿರಕ್ಕೆ ಅ.1ರಿಂದ ವಿನಾಯ್ತಿ

- 100% ಆಸನ ಭರ್ತಿ ಅವಕಾಶ. ಪಬ್‌ಗಳಲ್ಲಿ ಅ.3ರಿಂದ ನಿಯಮ ಸಡಿಲ

- ಪಬ್‌, ಚಿತ್ರಮಂದಿರಗಳ ಪ್ರವೇಶಕ್ಕೆ ಕನಿಷ್ಠ 1 ಡೋಸ್‌ ಲಸಿಕೆ ಕಡ್ಡಾಯ

- ಗರ್ಭಿಣಿಯರು, ಮಕ್ಕಳು, ವೃದ್ಧರು ಚಿತ್ರಮಂದಿರಗಳಿಗೆ ಹೋಗುವಂತಿಲ್ಲ

- ರಾತ್ರಿ ಕರ್ಫ್ಯೂ ರಾತ್ರಿ 9ರ ಬದಲು ರಾತ್ರಿ 10ರಿಂದ ಆರಂಭ. ಬೆಳಗ್ಗೆ 5ಕ್ಕೆ ಅಂತ್ಯ

- ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ

- 5ನೇ ತರಗತಿವರೆಗಿನ ಶಾಲೆ, ರಾತ್ರಿ ಕರ್ಫ್ಯೂ ಹೊರತು ಈಗ ಎಲ್ಲ ನಿರ್ಬಂಧ ತೆರವು