ಬೆಂಗಳೂರು[ಫೆ.15]: ಶಾಸಕ ಪ್ರೀತಂ ಗೌಡ ನಿವಾಸದ ಮುಂದೆ ಜೆಡಿಎಸ್‌ ಕಾರ್ಯಕರ್ತರು ನಡೆಸಿದ ಗಲಾಟೆ ಘಟನೆ ಖಂಡಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಸಭಾಪತಿಗಳ ಪೀಠದ ಎದುರು ನಡೆಸಿದ ಧರಣಿ, ಘೋಷಣೆಗಳ ನಡುವೆ 10 ವಿಧೇಯಕಗಳನ್ನು ಯಾವುದೇ ಚರ್ಚೆ ಇಲ್ಲದೇ ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಯಿತು.

ಕಲಾಪ ಆರಂಭದಲ್ಲಿ ಬಹುತೇಕ ಬಿಜೆಪಿ ಸದಸ್ಯರ ಅನುಪಸ್ಥಿತಿಯ ನಡುವೆ ವಿಧೇಯಕಗಳನ್ನು ಒಪ್ಪಿಗೆ ಪಡೆಯಲಾಯಿತು. ನಂತರ ಸದನಕ್ಕೆ ಆಗಮಿಸಿದ ಬಿಜೆಪಿ ಸದಸ್ಯರು ಬಿಜೆಪಿ ಶಾಸಕರಾದ ಪ್ರೀತಂ ಗೌಡ ಮನೆ ಮುಂದೆ ನಡೆಸಿದ ಪ್ರತಿಭಟನೆ, ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಪ್ರಕರಣಗಳನ್ನು ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ಆರಂಭಿಸಿದರು.

ಚರ್ಚೆ ಇಲ್ಲದೇ ಬಜೆಟ್‌ ಪಾಸ್‌, ಇದೇ ಮೊದಲು!

ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್‌ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ಋುಣ ಪರಿಹಾರ ವಿಧೇಯಕ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ, ಎನ್‌ಇಇ ವಿಶ್ವವಿದ್ಯಾಲಯ ವಿಧೇಯಕ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಇನ್ನು ಮಹತ್ವದ ಧನವಿನಿಯೋಗ ಮಸೂದೆ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳ ವಿಧೇಯಕಗಳು ಕೂಡ ಧ್ವನಿಮತದಿಂದ ಗದ್ದಲದ ನಡುವೆಯೇ ಅಂಗೀಕಾರಗೊಂಡವು.

ಬಜೆಟ್‌ ಮೇಲಿನ ಚರ್ಚೆ ಮೊಟಕು:

ಕಲಾಪದ ನಡುವೆ ಬಜೆಟ್‌ ಮೇಲಿನ ಚರ್ಚೆ ಕೈಗೆತ್ತಿಕೊಂಡ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾತನಾಡುವಂತೆ ಕಾಂಗ್ರೆಸ್‌ನ ಎಚ್‌.ಎಂ. ರೇವಣ್ಣ ಅವರಿಗೆ ಸೂಚಿಸಿದರು.

ರೇವಣ್ಣ ಅವರು ಬಜೆಟ್‌ ಮೇಲೆ ಮಾತನಾಡುತ್ತಿದ್ದಂತೆ ಧರಣಿ ನಿರತ ಬಿಜೆಪಿ ಸದಸ್ಯರು ರೈತರ ಸಾಲ ಮನ್ನಾ ಮಾಡದ, ಬಡವರಿಗೆ ಅನುಕೂಲ ಆಗದ ಬಜೆಟ್‌ಗೆ ಧಿಕ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಇದರ ನಡುವೆಯೇ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ನೀರಾವರಿ, ಶಿಕ್ಷಣಕೆ ಆದ್ಯತೆ ನೀಡಲಾಗಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಇಂತಹ ಉತ್ತಮ ಬಜೆಟ್‌ನ್ನು ಸಹಿಸಲು ಆಗುತ್ತಿಲ್ಲ ಎಂದು ಹೇಳತೊಡಗಿದರು.

ಈ ಮಧ್ಯ ಘೋಷಣೆ ಜಾಸ್ತಿಯಾಗುತ್ತಿದ್ದಂತೆ ಸಭಾಪತಿಗಳು ಹಠಾತ್ತಾಗಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.