Asianet Suvarna News Asianet Suvarna News

ಚರ್ಚೆ ಇಲ್ಲದೇ ಬಜೆಟ್‌ ಪಾಸ್‌, ಇದೇ ಮೊದಲು!

ಚರ್ಚೆಯೇ ಇಲ್ಲದೇ ಬಜೆಟ್‌ ಪಾಸ್‌, ಇದೇ ಮೊದಲು| 1 ನಿಮಿಷವೂ ಚರ್ಚೆ ಇಲ್ಲ| ಗದ್ದಲದ ನಡುವೆಯೇ ವಿಧಾನಮಂಡಲದ ಅಧಿವೇಶನ ಅಂತ್ಯ| 8 ದಿನದ ಅಧಿವೇಶನ 7 ದಿನಕ್ಕೇ ಮೊಟಕು

Karnataka Budget 2019 Passed Without Any Discussion in Assembly
Author
Bangalore, First Published Feb 15, 2019, 8:30 AM IST

ವಿಧಾನಮಂಡಲ[ಫೆ.15]: ಅತೃಪ್ತ ಶಾಸಕರ ಆಪರೇಷನ್‌ ಯತ್ನದ ಹಿನ್ನೆಲೆ ಸಾಕಷ್ಟುಕುತೂಹಲ ಹಾಗೂ ವಾಗ್ವಾದಕ್ಕೆ ಕಾರಣವಾಗಿದ್ದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಯಾವುದೇ ಚರ್ಚೆ ಇಲ್ಲದೆ ರಾಜ್ಯ ಬಜೆಟ್‌ಗೆ ಅಂಗೀಕಾರ ದೊರೆತಿದೆ.

ಹತ್ತು ಹಲವು ವದಂತಿಗಳ ನಡುವೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸರ್ವರನ್ನೂ ಸಂಪ್ರೀತಿಗೊಳಿಸುವಂಥ ಬಜೆಟ್‌ ಮಂಡಿಸಿದರೂ ಆ ಬಗ್ಗೆ ಒಂದು ನಿಮಿಷವೂ ಚರ್ಚೆ ನಡೆಯಲಿಲ್ಲ. ಜೊತೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಬಗ್ಗೆಯೂ ಯಾವುದೇ ಚರ್ಚೆ ನಡೆಯಲಿಲ್ಲ. ಗುರುವಾರ ಪ್ರತಿಪಕ್ಷ ಬಿಜೆಪಿ ಸದಸ್ಯರ ಪ್ರತಿಭಟನಾ ಧರಣಿ ನಡುವೆಯೇ ಬಜೆಟ್‌ ಮೇಲಿನ ಲೇಖಾನುದಾನಕ್ಕೆ ಮತ್ತು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯಕ್ಕೆ ಧ್ವನಿ ಮತದ ಆಧಾರದ ಮೇಲೆ ಅಂಗೀಕಾರ ಪಡೆಯಲಾಯಿತು. ಕೆಲವು ಮಹತ್ವದ ತಿದ್ದುಪಡಿ ವಿಧೇಯಕಗಳನ್ನು ಚರ್ಚೆ ಇಲ್ಲದೆ ಅಂಗೀಕರಿಸಲಾಯಿತು.

ಆಡಿಯೋ ಸಿಡಿ ಪ್ರಕರಣದ ಗದ್ದಲದ ಹಿನ್ನೆಲೆಯಲ್ಲಿ ಒಟ್ಟು ಎಂಟು ದಿನಗಳ ಕಾಲ (ಫೆ.6ರಿಂದ 15ರವರೆಗೆ ರಜಾ ದಿನ ಹೊರತುಪಡಿಸಿ) ನಡೆಯಬೇಕಿದ್ದ ಅಧಿವೇಶನ ಏಳು ದಿನಕ್ಕೆ ಮೊಟಕಗೊಂಡಿತು.

ಅಧಿವೇಶನದ ಇತಿಹಾಸದ ಪುಟಗಳನ್ನು ತಿರುಗಿ ಹಾಕಿದಾಗ ರಾಜಕೀಯ ಕಾರಣಗಳಿಗಾಗಿ ಪ್ರತಿಪಕ್ಷದ ಪ್ರತಿಭಟನೆ, ಗದ್ದಲ, ಸಭಾತ್ಯಾಗಗಳಂತಹ ಪ್ರಕರಣಗಳು ನಡೆದಿವೆ. ಆದರೆ, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಮತ್ತು ಬಜೆಟ್‌ ಮೇಲೆ ಚರ್ಚೆಯಾಗದೆ ಅಂಗೀಕಾರವಾಗಿಲ್ಲ. ಸದನದಲ್ಲಿ ಚರ್ಚಿಸಿ ಸರ್ಕಾರವು ಉತ್ತರ ನೀಡಿದ ತರುವಾಯವೇ ಅಂಗೀಕಾರಗೊಂಡಿವೆ. ಆದರೆ, ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಭಾಷಣದ ಮತ್ತು ಬಜೆಟ್‌ ಮೇಲೆ ಯಾವುದೇ ಚರ್ಚೆಯಾಗದೆ ಅಂಗೀಕಾರ ಪಡೆದುಕೊಳ್ಳಲಾಗಿದೆ. ಈ ಮೂಲಕ ವಿಧಾನಸಭೆಯು ಹೊಸ ಇತಿಹಾಸಕ್ಕೆ ನಾಂದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗದ್ದಲ- ಅಂಗೀಕಾರ:

ವಿಧಾನಸಭೆಯಲ್ಲಿ ಶಾಸಕ ಪ್ರೀತಂಗೌಡ ಅವರ ಹಾಸನದಲ್ಲಿನ ನಿವಾಸದ ಮೇಲೆ ಜೆಡಿಎಸ್‌ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ಗುರುವಾರ ಪ್ರತಿಪಕ್ಷ ಬಿಜೆಪಿ ಭಾವಿಗಿಳಿದು ಧರಣಿ ನಡೆಸಿತು. ಸರ್ಕಾರ ವಿರುದ್ಧ ಘೋಷಣೆ, ಧಿಕ್ಕಾರ ಕೂಗಿನ ನಡುವೆಯೇ ವರದಿಗಳನ್ನು ಒಪ್ಪಿಸಲಾಯಿತು. ಬಳಿಕ ಸಭಾಧ್ಯಕ್ಷ ರಮೇಶ್‌ ಕುಮಾರ್‌ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾಪ ಮಂಡಿಸಿದರು. ಪ್ರತಿಪಕ್ಷದ ವಿರೋಧದ ನಡುವೆಯೇ ರಾಜ್ಯಪಾಲರ ಭಾಷಣವನ್ನು ಅಂಗೀಕರಿಸಲಾಯಿತು.

ಸಭಾಧ್ಯಕ್ಷರ ಅನುಮತಿ ಮೇರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, 2018-19ನೇ ಸಾಲಿನ 14,581 ಕೋಟಿ ರು. ಪೂರಕ ಅಂದಾಜನ್ನು ಮಂಡಿಸಿದರು. ಈ ಮೊತ್ತ ಮೀರದಷ್ಟುರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ಉಪಯೋಗಿಸುವತಕ್ಕದ್ದು ಎಂದು ತಿಳಿಸಲಾಗಿದೆ. ತರುವಾಯ 2019-20ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಲೇಖಾನುದಾನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಂಗೀಕಾರಕ್ಕೆ ಕೋರಿದರು. ಜುಲೈ ಅಂತ್ಯದೊಳಗೆ ಬೊಕ್ಕಸದಿಂದ 80,16,837.06 ಲಕ್ಷ ರು.ಗಳ ವೆಚ್ಚದ ಲೇಖಾನುದಾನಕ್ಕೆ ಪ್ರತಿಪಕ್ಷ ಬಿಜೆಪಿಯ ಗದ್ದಲದ ನಡುವೆ ಸದನವು ಸಮ್ಮತಿ ನೀಡಿತು.

ಲೇಖಾನುದಾನಕ್ಕೆ ಸದನ ಒಪ್ಪಿಗೆ ಪಡೆದ ನಂತರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡುವ ಪ್ರಸ್ತಾವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸದನದಲ್ಲಿ ಮಂಡಿಸಿದ್ದು, ಗದ್ದಲದ ಮಧ್ಯೆಯೇ ಸರ್ಕಾರವು ಒಪ್ಪಿಗೆ ಪಡೆದುಕೊಂಡಿತು.

ತೀವ್ರ ಆಕ್ರೋಶ:

ರಾಜ್ಯದ ಜನಸಾಮಾನ್ಯರ ತೆರಿಗೆ ಹಣವನ್ನು ವಿನಿಯೋಗಿಸುವ ಲೇಖಾನುದಾನಕ್ಕೆ ಅಂಗೀಕಾರ ನೀಡುವ ಮೊದಲು ಚರ್ಚೆಗಳು ನಡೆಯಬೇಕು. ಸಾಧಕ-ಬಾಧಕ ಕುರಿತು ಚರ್ಚಿಸದೆ ಅಂಗೀಕರಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Follow Us:
Download App:
  • android
  • ios