Asianet Suvarna News Asianet Suvarna News

World AIDS Day : 1 ಲಕ್ಷ ಎಚ್‌ಐವಿ ಸೋಂಕಿತರು ಚಿಕಿತ್ಸೆಯಿಂದ ದೂರ!

  • 1 ಲಕ್ಷ ಎಚ್‌ಐವಿ ಸೋಂಕಿತರು ಚಿಕಿತ್ಸೆಯಿಂದ ದೂರ!
  •  3.73 ಲಕ್ಷ ಮಂದಿಗೆ ಎಚ್‌ಐವಿ ದೃಢ: 94 ಸಾವಿರ ಸಾವು
  • 1.76 ಲಕ್ಷ ಮಂದಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ
  • ನಿರ್ಲಕ್ಷ್ಯದಿಂದ ಇದು ಏಡ್‌್ಸ ಆಗಿ ಪರಿವರ್ತನೆ: ಸಾವು ಹೆಚ್ಚಳ
1 lakh HIV patients away from treatment in state rav
Author
First Published Nov 30, 2022, 12:08 AM IST

ಡಿ.1 ವಿಶ್ವ ಏಡ್ಸ್ ದಿನ

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ನ.30) : ರಾಜ್ಯದಲ್ಲಿ ಎಚ್‌ಐವಿ ಸೋಂಕಿತರು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ಒಂದು ಲಕ್ಷಕ್ಕೂ ಅಧಿಕ ಸೋಂಕಿತರು ನಾನಾ ಕಾರಣಗಳಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಯಿಂದ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ!

ಒಮ್ಮೆ ಎಚ್‌ಐವಿ (ಹ್ಯೂಮನ್‌ ಇಮ್ಯೂನೋ ಡೆಫಿಷಿಯನ್‌ಸ್ಸಿ ವೈರಸ್‌) ದೃಢಪಟ್ಟರೆ ದೇಹದಲ್ಲಿ ವೈರಸ್‌ ಪ್ರಯಾಣ ಹೆಚ್ಚಳವಾಗದಂತೆ ಜೀವನಪೂರ್ತಿ ಔಷಧ ಪಡೆಯಬೇಕು. ಆದರೆ, ಸೋಂಕಿನ ಬಗೆಗೆ ನಿರ್ಲಕ್ಷ್ಯವಹಿಸುತ್ತಾ ಸಾಕಷ್ಟುಮಂದಿ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ. ಇದರಿಂದ ಎಚ್‌ಐವಿ ಬಲುಬೇಗ ಏಡ್‌್ಸ ಆಗಿ ಪರಿವರ್ತನೆ ಹೊಂದಿ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಮಾತ್ರವಲ್ಲದೆ ಸೋಂಕು ಹರಡಲು ಕಾರಣವಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಡಿ.1 ರಂದು ವಿಶ್ವ ಏಡ್‌್ಸ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

 

HIV ಸೋಂಕಿತರಿಗೆ ಇನ್ನು ಭಯ ಬೇಕಿಲ್ಲ, ಸಂಪೂರ್ಣವಾಗಿ ಗುಣಪಡಿಸಲು ಸಿದ್ಧವಾಗಿದೆ ಲಸಿಕೆ

ಆದರೆ, ಕರ್ನಾಟಕದಲ್ಲಿ ಮಾತ್ರ ಈ ಸೋಂಕಿನ ಬಗ್ಗೆ ನಿರ್ಲಕ್ಷ್ಯವಿದೆ. ಕರ್ನಾಟಕ ರಾಜ್ಯ ಏಡ್‌್ಸ ನಿಯಂತ್ರಣ ಸೊಸೈಟಿ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಈವರೆಗೂ 3.73 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 94 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಚಿಕಿತ್ಸೆಗೆಂದು ರಾಜ್ಯದ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿರುವ 71 ರೆಟ್ರೋವೈರಲ್‌ ಥೆರಪಿ ಕೇಂದ್ರಗಳು, 303 ಲಿಂಕ್‌ ಆ್ಯಂಟಿ ರೆಟ್ರೋವೈರಲ್‌ ಥೆರಪಿ ಕೇಂದ್ರಗಳಲ್ಲಿ 1.76 ಲಕ್ಷ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 1.03 ಲಕ್ಷ ಮಂದಿ ಸರ್ಕಾರದ ಥೆರಪಿ ಕೇಂದ್ರಗಳ ಚಿಕಿತ್ಸೆ ಪಡೆಯುತ್ತಿಲ್ಲ ಈ ಪೈಕಿ ಶೇ.2 ಅಥವಾ 3 ರಷ್ಟುಮಾತ್ರ ಚಿಕಿತ್ಸೆಗೆ ಖಾಸಗಿಯತ್ತ ಮುಖ ಮಾಡಿದ್ದು, ಮಿಕ್ಕವರೂ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ.

ಕಳಂಕ ಭೀತಿಯಿಂದ ಬಾರದ ಜನ:

ಸೋಂಕು ದೃಢಪಟ್ಟಕೂಡಲೇ ಅವರನ್ನು ರೆಟ್ರೋವೈರಲ್‌ ಥೆರಪಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಆ ಬಳಿಕ ಸಮಾಲೋಚನೆ ನಡೆಸಿ ಪ್ರತಿ ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಕೇಂದ್ರಕ್ಕೆ ಬಂದು ತಪಾಸಣೆಗೊಳಗಾಗಿ ಚಿಕಿತ್ಸೆ (ಮಾತ್ರೆಗಳು) ಪಡೆಯಲು ಸೂಚಿಸಲಾಗುತ್ತದೆ. ಆದರೆ, ಸಮಾಜದ ಮುಂದೆ ಎಚ್‌ಐವಿ ಸೋಂಕಿತರು ಎಂಬ ಕಳಂಕವನ್ನು ಹೊತ್ತುಕೊಳ್ಳಬೇಕು ಎಂಬ ಭಯದಿಂದ ಸಾಕಷ್ಟುಮಂದಿ ಚಿಕಿತ್ಸೆಗೆ ಆಗಮಿಸುತ್ತಿಲ್ಲ. ವಿಳಾಸ ಪತ್ತೆ ಮಾಡಿ ಚಿಕಿತ್ಸೆಗೆ ಆಗಮಿಸುವಂತೆ ಮನವೊಲಿಸುವ ಪ್ರಯತ್ನ ಪಟ್ಟರು ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ.

ಸೋಂಕಿನ ಲಕ್ಷಣ ಇಲ್ಲದವರು ಚಿಕಿತ್ಸೆ ಬೇಡ ಎಂದು ನಿರಾಕರಣ ಪತ್ರ ಕೊಡುತ್ತಿದ್ದಾರೆ. ಕೆಲವರು ಆಯುರ್ವೇದ ಚಿಕಿತ್ಸೆಗೆ ಮುಂದಾದರೆ, ಉಳಿದವರು ಆಸ್ಪತ್ರೆಗೆ ನೀಡಿದ ವಿಳಾಸದಿಂದ ವಲಸೆ ಹೋಗುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆಗಳ ರೆಟ್ರೋವೈರಲ್‌ ಥೆರಪಿ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಹೇಳುತ್ತಾರೆ.

ವರ್ಷಗಳ ಬಳಿಕ ಏಡ್ಸ್ ಆಗಿ ಪರಿವರ್ತನೆ:

ಎಚ್‌ಐವಿ ವೈರಸ್‌ ದೇಹಕ್ಕೆ ಸೇರಿದ ಬಳಿಕ ನಮ್ಮ ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿರಕ್ತಕಣಗಳ ಮೇಲೆ ದಾಳಿ ಮಾಡುತ್ತದೆ. ನಂತರ ದೇಹದ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ, ರೋಗಿಯು ಬ್ಯಾಕ್ಟೀರಿಯಾ, ಫಂಗಸ್‌, ವೈರಾಣು ಅಥವಾ ಇನ್ನಾವುದೇ ರೋಗಗಳ ಸೋಂಕಿಗೆ ಬೇಗನೆ ತುತ್ತಾಗುತಾರೆ. ಎಚ್‌ಐವಿ ಸೋಂಕಿಗೆ ಚಿಕಿತ್ಸೆ ನಿರ್ಲಕ್ಷ್ಯ ಮಾಡುವುದರಿಂದ ದೇಹದಲ್ಲಿ ವೈರಾಣು ಹೆಚ್ಚಳವಾಗಿ ಕನಿಷ್ಠ 4ರಿಂದ ಗರಿಷ್ಠ 10 ವರ್ಷದೊಳಗೆ ಏಡ್‌್ಸ ಆಗಿ ಪರಿವರ್ತನೆಯಾಗುತ್ತದೆ. ಆನಂತರ ಕ್ಷಯ ಸೇರಿದಂತೆ ಹತ್ತು ಹಲವು ತೊಂದರೆಗಳು ಒಟ್ಟಾಗಿ ಸೋಂಕಿತ ಸಾವಿಗೀಡಾಗುತ್ತಾನೆ. ಹೀಗಾಗಿ, ಎಚ್‌ಐವಿ ಸೋಂಕಿತರ ಚಿಕಿತ್ಸೆ ನಿರ್ಲಕ್ಷಿಸಲೇ ಬಾರದು ಎಂದು ವೈದ್ಯರು ಹೇಳುತ್ತಾರೆ.

ಕಳೆದ 1.5 ವರ್ಷದಲ್ಲಿ 10,480 ಮಂದಿ ಸಾವು

ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಏಡ್‌್ಸನಿಂದ 292 ಮಕ್ಕಳನ್ನು ಸೇರಿದಂತೆ 10,480 ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಪೈಕಿ 158 ಬಾಲಕರು, 134 ಬಾಲಕಿಯರು, 6104 ಪುರುಷರು, 4039 ಮಹಿಳೆಯರು, 43 ಲೈಂಗಿಕ ಅಲ್ಪಸಂಖ್ಯಾತರು ಮೃತಪಟ್ಟಿದ್ದಾರೆ. ಬಹುತೇಕರು ಅದರಲ್ಲೂ ಮಕ್ಕಳ ಸಾವಿಗೆ ಸೂಕ್ತ ಚಿಕಿತ್ಸೆ ಪಡೆಯದಿರುವುದೇ ಕಾರಣ ಎನ್ನುತ್ತಾರೆ ತಜ್ಞರು. ರಾಜ್ಯದಲ್ಲಿ ಈವರೆಗೂ 94315 ಮಂದಿ ಏಡ್‌್ಸಗೆ ಬಲಿಯಾಗಿದ್ದಾರೆ.

ಚಿಕಿತ್ಸೆ ನಿರಾಕರಿಸಿ ಪತ್ರ

ಸೋಂಕಿತರ ಪೈಕಿ ಶೇ.10ಕ್ಕೂ ಅಧಿಕ ಮಂದಿ ಚಿಕಿತ್ಸೆ ನಿರಾಕರಿಸಿ ಪತ್ರ ಬರೆದುಕೊಟ್ಟಿದ್ದಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಕೊರತೆ, ಚಿಕಿತ್ಸೆ ಸಂದರ್ಭದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ, ಚಿಕಿತ್ಸೆಗೆ ಅನಗತ್ಯ ಕಾಯುವಿಕೆಯು ಕಾರಣವಾಗಿರಬಹುದು ಎನ್ನಲಾಗಿದೆ.

India HIV Case ಏಡ್ಸ್ ಸೋಂಕು, ದೇಶದಲ್ಲೇ ಕರ್ನಾಟಕ ನಂ.3!

ಪರೀಕ್ಷೆ ಗುರಿ ತಲುಪಲು ಆಗುತ್ತಿಲ್ಲ

ಕೊರೋನಾ ಸಂದರ್ಭದಲ್ಲಿ (2020) ತಗ್ಗಿದ ಎಚ್‌ಐವಿ ಪರೀಕ್ಷೆ ಆ ಬಳಿಕ ಹೆಚ್ಚಳವಾದರೂ ವಾರ್ಷಿಕ ಶೇ.100 ರಷ್ಟುಗುರಿ ಸಾಧನೆಯಾಗುತ್ತಿಲ್ಲ. ನಿಗದಿತ ಗುರಿಯಲ್ಲಿ 2020 ರಲ್ಲಿ ಶೇ.62, 2021ರಲ್ಲಿ ಶೇ.84 ರಷ್ಟು, 2022ರಲ್ಲಿ ಇವರೆಗೂ ಶೇ.70 ರಷ್ಟುಪರೀಕ್ಷೆ ನಡೆಯುತ್ತಿವೆ. ಸದ್ಯ ವಾರ್ಷಿಕ 2 ಲಕ್ಷ ಮಂದಿ ಪರೀಕ್ಷೆ ನಡೆಸಲಾಗುತ್ತಿದೆ. ಜನರು ಇಂದಿಗೂ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಏಡ್‌್ಸ ನಿಯಂತ್ರಣ ಸೊಸೈಟಿ ಅಧಿಕಾರಿಗಳು.

Follow Us:
Download App:
  • android
  • ios