ಬೆಂಗಳೂರು(ಜು.10): ಕೊರೋನಾ ಸೋಂಕು ಪರೀಕ್ಷೆಗೆ 1 ಲಕ್ಷ ಆಂಟಿಜೆನ್‌ ಕಿಟ್‌ ತರಿಸಲಾಗಿದ್ದು, ವಾರಾಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಈ ಕಿಟ್‌ಗಳ ಮೂಲಕ 30ರಿಂದ 40 ಸಾವಿರ ಹೆಚ್ಚುವರಿ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಲಭ ಹಾಗೂ ತ್ವರಿತವಾಗಿ ಸೋಂಕು ಪತ್ತೆಗೆ ಆಂಟಿಜನ್‌ ಕಿಟ್‌ ಸಹಕಾರಿ. ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಈ ಕಿಟ್‌ ಬಳಸಿಕೊಂಡು ಹೆಚ್ಚು ಪರೀಕ್ಷೆ ನಡೆಸಲಾಗುವುದು. ಕೇವಲ 10 ನಿಮಿಷದಲ್ಲಿ ಇವುಗಳಿಂದ ಪರೀಕ್ಷೆ ನಡೆಸಿ ವರದಿ ಪಡೆಯಬಹುದು. ಪ್ರತಿ ಕಿಟ್‌ ಬೆಲೆ 450 ರು. ಇರುತ್ತದೆ. ಈ ಕಿಟ್‌ಗಳ ಮೂಲಕ ನಡೆಸುವ ಪರೀಕ್ಷೆಯೂ ಶೇ.98ರಷ್ಟುಸಮರ್ಪಕವಾಗಿರುತ್ತದೆ. ಕೇವಲ ಎರಡು ದಿನಗಳಲ್ಲಿ ಸುಮಾರು 1 ಲಕ್ಷ ಸಂಖ್ಯೆಯ ಪರೀಕ್ಷೆ ನಡೆಸಬಹುದು.

ಇದು ಆರೋಪ ಮಾಡುವ ಟೈಮಲ್ಲ: ಸಿದ್ದುಗೆ ಎಚ್‌ಡಿಕೆ ಟಾಂಗ್‌

ನಗರದಲ್ಲಿ 1007 ಹಾಸಿಗೆ ಖಾಲಿ: ಕೋವಿಡ್‌ ಚಿಕಿತ್ಸೆಗೆ ನಗರದಲ್ಲಿ ವಿವಿಧ ಕೋವಿಡ್‌ ನಿಗಾ ಕೇಂದ್ರ, ಚಿಕಿತ್ಸಾ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿರುವ ಒಟ್ಟು 5144 ಹಾಸಿಗೆಗಳ ಪೈಕಿ ಗುರುವಾರದ ವರೆಗೆ 4137 ಹಾಸಿಗೆ ಭರ್ತಿಯಾಗಿದ್ದು, 1007 ಹಾಸಿಗೆ ಬಾಕಿ ಇವೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿನ 819 ಹಾಸಿಗೆಗಳಲ್ಲಿ 749 ಭರ್ತಿಯಾಗಿದ್ದು, 70 ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿನ 568 ಹಾಸಿಗೆಯಲ್ಲಿ 501 ಭರ್ತಿಯಾಗಿ 57 ಬಾಕಿ ಇವೆ. ಖಾಸಗಿ ವೈದ್ಯಕೀಯ ಕಾಲೇಜಿನ 1928 ಹಾಸಿಗೆಯಲ್ಲಿ 1200 ಭರ್ತಿಯಾಗಿ 728 ಬಾಕಿ ಇದೆ. 2750 ಹಾಸಿಗೆ ನೀಡಬೇಕಿರುವ ಖಾಸಗಿ ಆಸ್ಪತ್ರೆಗಳು ಈ ವರೆಗೆ 250 ಹಾಸಿಗೆ ಮಾತ್ರ ಸರ್ಕಾರಕ್ಕೆ ಕೊಟ್ಟಿದ್ದು, ಇದರಲ್ಲಿ 215 ಭರ್ತಿಯಾಗಿ 35 ಖಾಲಿ ಇವೆ. ಇವುಗಳ ಜೊತೆಗೆ ವಿವಿಧ ಕೋವಿಡ್‌ ನಿಗಾ ಕೇಂದ್ರಗಳಲ್ಲಿನ 1526 ಹಾಸಿಗೆಯಲ್ಲಿ 1409 ಭರ್ತಿಯಾಗಿವೆ. 117 ಖಾಲಿ ಇವೆ ಎಂದರು.

ಕೊರೋನಾ ವೈರಸ್ ಕುರುಹು ಪತ್ತೆಗೆ ಎಕ್ಸರೇ ನೆರವು ಬಳಕೆ!

ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮಗೆ ತಾವೇ ಮೂರು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಕಡ್ಡಾಯ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಿರ್ದಿಷ್ಟಸಮಯಕ್ಕೊಮ್ಮೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು, ತೊಳೆಯದ ಕೈಗಳಿಂದ ಮುಖದ ಯಾವುದೇ ಭಾಗ ಮುಟ್ಟಿಕೊಳ್ಳದಂತೆ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಈ ರೇಖೆಗಳನ್ನು ಮೀರಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.