ಆಂಧ್ರಪ್ರದೇಶದ ತಿರುಪತಿಯಲ್ಲಿ 13 ಎಕರೆ ಜಮೀನನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಉಂಡೆ ನಾಮ ಹಾಕಿ ಹಣ ದೋಚಿದ್ದ ಐವರು ಕಿಡಿಗೇಡಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ನ.8): ಆಂಧ್ರಪ್ರದೇಶದ ತಿರುಪತಿಯಲ್ಲಿ 13 ಎಕರೆ ಜಮೀನನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಉಂಡೆ ನಾಮ ಹಾಕಿ ಹಣ ದೋಚಿದ್ದ ಐವರು ಕಿಡಿಗೇಡಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಪ್ರಭಾಕರ ರೆಡ್ಡಿ, ಸೋಲದೇನಹಳ್ಳಿಯ ಸಂಜಯ್‌, ಕೆಂಗೇರಿಯ ಶ್ರೀನಿವಾಸ್‌ ಹಾಗೂ ಲೋಕನಾಥಚಾರಿ, ರವಿಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹65 ಲಕ್ಷ ನಗದು, ₹8.5 ಲಕ್ಷದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ತಿರುಪತಿಗೆ ಭಕ್ತರು ಆಗಮಿಸುವ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆ, ಕರಡಿ ಮತ್ತೊಮ್ಮೆ ಎಚ್ಚರಿಸಿದ ಟಿಟಿಡಿ

ಇತ್ತೀಚೆಗೆ ತಿರುಪತಿಯ ರಾಧಾಕೃಷ್ಣ ಎಂಬುವರಿಗೆ ಆರೋಪಿಗಳು ನಾಮ ಹಾಕಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಬಿ.ಭರತ್ ನೇತೃತ್ವದ ತಂಡವು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಶೋಕ ಹೋಟೆಲ್‌ನಲ್ಲಿ ಡೀಲ್‌ಗೆ ಕರೆದು ವಂಚನೆ:

ಹಲವು ವರ್ಷಗಳಿಂದ ತಿರುಪತಿಯ ರಾಧಾಕೃಷ್ಣ ಹಾಗೂ ಬೆಂಗಳೂರಿನ ಶಿವಕುಮಾರ್ ಸ್ನೇಹಿತರು. ಇತ್ತೀಚೆಗೆ ಶಿವಕುಮಾರ್‌ ಮೂಲಕ ರಾಧಾಕೃಷ್ಣ ಅವರಿಗೆ ಸಂಜಯ್‌, ಶ್ರೀನಿವಾಸ್, ಲೋಕನಾಥಚಾರಿ ಹಾಗೂ ರೆಡ್ಡಿ ಪರಿಚಯವಾಗಿದೆ. ಆಗ ತಿರುಪತಿಯಲ್ಲಿ ನಮಗೆ ಪರಿಚಯಸ್ಥರ ಕೋಟ್ಯಂತರ ಮೌಲ್ಯದ 13 ಎಕರೆ ಆಸ್ತಿ ಇದ್ದು, ಅದನ್ನು ₹1 ಕೋಟಿಗೆ ಕೊಡಿಸುವುದಾಗಿ ಹೇಳಿದ್ದರು.

ಈ ಸಂಬಂಧ ಮಾತುಕತೆಗೆ ನಗರದ ಅಶೋಕ ಹೋಟೆಲ್‌ಗೆ ರಾಧಾಕೃಷ್ಣ ಅವರನ್ನು ಆರೋಪಿಗಳು ಕರೆಸಿಕೊಂಡಿದ್ದರು. ಶಿವಕುಮಾರ್ ಹಾಗೂ ರಾಧಾಕೃಷ್ಣ ಬಂದಿದ್ದರು. ಆ ವೇಳೆ ನಕಲಿ ದಾಖಲೆಗಳನ್ನು ರಾಧಾಕೃಷ್ಣ ಅವರಿಗೆ ಆರೋಪಿಗಳು ನೀಡಿದರು. ನಂತರ ಜಮೀನು ಮಾಲೀಕರ ಭೇಟಿಗೆ ನೆಪದಲ್ಲಿ ರಾಧಾಕೃಷ್ಣ ಅವರನ್ನು ಹೋಟೆಲ್‌ನಲ್ಲಿ ಕೂಡಿಸಿ ಶಿವಕುಮಾರ್ ಅವರನ್ನು ಹಣದ ಸಮೇತ ಕಾರಿನಲ್ಲಿ ಆರೋಪಿಗಳು ಕರೆದೊಯ್ದಿದ್ದರು.

ಆಗ ಮಾರ್ಗ ಮಧ್ಯೆ ತಂಪು ಪಾನೀಯ ತರುವಂತೆ ಹೇಳಿ ಶಿವಕುಮಾರ್‌ ಅವರನ್ನು ಕಾರಿನಿಂದಿಳಿಸಿದ ಆರೋಪಿಗಳು, ಆತ ಕಾರಿನಿಂದಿಳಿಯುತ್ತಿದ್ದಂತೆ ಹಣದ ಸಮೇತ ಪರಾರಿಯಾಗಿದ್ದರು. ತಕ್ಷಣವೇ ಹೋಟೆಲ್‌ಗೆ ಬಂದು ಗೆಳೆಯನ್ನು ಭೇಟಿಯಾಗಿ ನಡೆದ ಘಟನೆಯನ್ನು ಶಿವಕುಮಾರ್ ಹೇಳಿದರು. ಕೊನೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ರಾಧಾಕೃಷ್ಣ ದೂರು ನೀಡಿದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ನಾಲ್ವರು ವಂಚಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.