Shivamogga ಜಿಲ್ಲೆಯಲ್ಲಿ 1185 ಶಿಕ್ಷಕರ ಹುದ್ದೆಗಳು ಖಾಲಿ!
ಶಿವಮೊಗ್ಗ ಜಿಲ್ಲೆಯ 89 ಶಾಲೆಗಳಲ್ಲಿ ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದ್ದು, 28 ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ. ಸದ್ಯಕ್ಕೆ 851 ಅತಿಥಿ ಉಪನ್ಯಾಸಕರಿಂದ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಪ್ರೌಢಶಾಲೆಗಳಲ್ಲಿ ಒಟ್ಟು 167 ಶಿಕ್ಷಕರ ಕೊರತೆ ಇದೆ.
ವರದಿ: ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ (ಜು.16): ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಈಗಲೂ ಶಿಕ್ಷಕರ ಕೊರತೆ ಕಾಡುತ್ತಿದೆ. ಖಾಲಿ ಉಳಿದಿರುವ ಕಾಯಂ ಶಿಕ್ಷಕರ ಹುದ್ದೆಗಳು ಇನ್ನೂ ಭರ್ತಿಯಾಗದ ಕಾರಣ ಬಹುತೇಕ ಸರ್ಕಾರಿ ಶಾಲೆಗಳು ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಂಡಿವೆ.ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸಂಖ್ಯೆಗೆ ಅನುಗುಣವಾಗಿ ಪ್ರಸ್ತುತದದ 1185 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ 89 ಶಾಲೆಗಳಲ್ಲಿ ಮುಖ್ಯಶಿಕ್ಷಕರ ಹುದ್ದೆ ಖಾಲಿ ಉಳಿದಿವೆ. 28 ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ. ಇನ್ನೂ ಕಾಯಂ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಸದ್ಯ 851 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳ ಹಾವಳಿಗೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಜಿಲ್ಲೆಯ ಶಾಲೆಗಳೂ ಇದರಿಂದ ಹೊರತಾಗಿಲ್ಲ. ಮಕ್ಕಳಿಗೆ ಪಾಠ ಬೋಧನೆ ಮಾಡಬೇಕಾದ ಶಿಕ್ಷಕರ ಕೊರತೆಯಿಂದಾಗಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ಶೆಕ್ಷಣಿಕ ಪ್ರಗತಿ ಕುಂಠಿತದ ಭೀತಿ ಎದುರಾಗಿದೆ.
ಸರ್ಕಾರಿ ಶಾಲೆಗಳಿಗೆ ಎಲ್ಲ ಸವಲತ್ತು ಕೊಟ್ಟೂಮಕ್ಕಳು ಬರುತ್ತಿಲ್ಲ ಎಂಬ ಕೊರಗಿನ ನಡುವೆಯೇ ಬರುವ ಮಕ್ಕಳಿಗೆ ಪಾಠ ಹೇಳಿಕೊಡಲೂ ಶಿಕ್ಷಕರ ಕೊರತೆ ಇನ್ನೊಂದು ಸಮಸ್ಯೆಯಾಗಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಸರಿದೂಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವ ಶಿಕ್ಷಣ ಇಲಾಖೆ, ಖಾಲಿ ಇರುವ ಕಾಯಂ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂಬುದು ಶಿಕ್ಷಕರ ವಲಯದಲ್ಲೆ ಕೇಳಿಬರುತ್ತಿರುವ ಗಂಭೀರ ಆರೋಪ.
7000 ಅನುದಾನಿತ ಶಿಕ್ಷಕರ ನೇಮಕಕ್ಕೆ ಶಾಲೆಗಳ ಆಗ್ರಹ
ಹೆಚ್ಚುವರಿ ಅತಿಥಿ ಶಿಕ್ಷಕರ ಬೇಡಿಕೆ: ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯನ್ನು ನೀಗಿಸುತ್ತಿರುವ ಅತಿಥಿ ಶಿಕ್ಷಕರಿಗೂ ಬೇಡಿಕೆ ಹೆಚ್ಚಿದೆ. ಸದ್ಯ 851 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಇನ್ನೂ ಹೆಚ್ಚುವರಿಯಾಗಿ 205 ಅತಿಥಿ ಶಿಕ್ಷಕರ ಬೇಡಿಕೆ ಇದೆ. ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಪೈಕಿ ಸೊರಬದಲ್ಲಿ 231, ಸಾಗರದಲ್ಲಿ 221, ಶಿಕಾರಿಪುರದಲ್ಲಿ 50, ತೀರ್ಥಹಳ್ಳಿಯಲ್ಲಿ 125, ಶಿವಮೊಗ್ಗದಲ್ಲಿ 44, ಭದ್ರಾವತಿಯಲ್ಲಿ 35, ಹೊಸನಗರದಲ್ಲಿ 145 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರಿ ಪ್ರೌಢ ಶಾಲೆಯಲ್ಲೂ ಶಿಕ್ಷಕರ ಕೊರತೆ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಒಟ್ಟು 1529 ಶಿಕ್ಷಕರ ಹುದ್ದೆಗಳು ಮಂಜುರಾಗಿದ್ದು, ಇದರಲ್ಲಿ 1424 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 167 ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಒಟ್ಟು 107 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳ ಅಂಕಿಅಂಶ
ತಾಲೂಕು- ಖಾಲಿ ಹುದ್ದೆ (ಪ್ರಾಥಮಿಕ)- ಖಾಲಿ ಹುದ್ದೆ (ಪ್ರೌಢಶಾಲೆ)
ಶಿವಮೊಗ್ಗ- 91- 08
ಭದ್ರಾವತಿ- 139- 10
ತೀರ್ಥಹಳ್ಳಿ- 138- 34
ಹೊಸನಗರ- 177- 32
ಸಾಗರ- 269- 26
ಸೊರಬ- 271- 30
ಶಿಕಾರಿಪುರ- 100- 27
ಒಟ್ಟು- 1185- 167
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ 400ಕ್ಕೂ ಹೆಚ್ಚು ಮಂದಿ ಶಿಕ್ಷಕರ ನೇಮಕವಾಗಲಿದೆ. ಉಳಿದಂತೆ ಹಂತ-ಹಂತವಾಗಿ ಶಿಕ್ಷಕರ ನೇಮಕವಾಗಲಿದೆ
- ಪರಮೇಶ್ವರಪ್ಪ, ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ