Asianet Suvarna News Asianet Suvarna News

ಸುಮ್ಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ: 10 ದಿನ ಸಂಚಾರ ನಿಷೇಧ..!

ಸುಮ್ಮನಹಳ್ಳಿ ಜಂಕ್ಷನ್‌ ಫ್ಲೈಓವರ್‌ನಲ್ಲಿ ಗುಂಡಿ ಬಿದ್ದು ರಿಪೇರಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಮಾರು 10 ದಿನ ಕಾಲ ನಾಗರಭಾವಿ ಕಡೆಯಿಂದ ರಾಜಕುಮಾರ್‌ ಸಮಾಧಿ ಕಡೆ ಸಾಗುವ ಮಾರ್ಗದಲ್ಲಿ ಫ್ಲೈಓವರ್‌ ಮೇಲೆ ಸಂಚಾರವನ್ನು ನಿಷೇಧಿಸಲಾಗಿದೆ.

pothole in sumanahalli flyover route bund
Author
Bangalore, First Published Nov 3, 2019, 8:11 AM IST

ಬೆಂಗಳೂರು(ನ..03): ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲೆ ಗುಂಡಿ ನಿರ್ಮಾಣವಾಗಿರುವುದಕ್ಕೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಹೇಳಿದ್ದಾರೆ.

ಶುಕ್ರವಾರ ರಾತ್ರಿ ನಗರದ ರಿಂಗ್‌ ರಸ್ತೆಯ ಸುಮ್ಮನಹಳ್ಳಿ ಮೇಲ್ಸೇತುವೆನಲ್ಲಿ ದೊಡ್ಡ ಗುಂಡಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ನಾಗರಭಾವಿ ಕಡೆಯಿಂದ ರಾಜಕುಮಾರ್‌ ಸಮಾಧಿ ಮಾರ್ಗದ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಶನಿವಾರ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಹಾಗೂ ಮೇಯರ್‌ ಗೌತಮ್‌ ಕುಮಾರ್‌ ಗುಂಡಿ ಬಿದ್ದ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬ್ರಿಡ್ಜ್ ನಲ್ಲಿ ಭಾರೀ ಗುಂಡಿ : ಸಂಚಾರ ಮಾರ್ಗ ಬದಲಾಗಿ ಕಿ.ಮೀವರೆಗೂ ಟ್ರಾಫಿಕ್ ಜಾಮ್

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, 2010ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೇಲ್ಸೇತುವೆ ನಿರ್ಮಿಸಿತ್ತು. ಅದನ್ನು 2016-17ರಲ್ಲಿ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಸೂಕ್ತ ನಿರ್ವಹಣೆ ಮಾಡಬೇಕಿದ್ದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಮೇಲ್ಸೇತುವೆಯಲ್ಲಿ ಗುಂಡಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಮಾದರಿ ಸಂಗ್ರಹಣೆಗೆ ಸೂಚನೆ:

ಗುಂಡಿ ಸೃಷ್ಟಿಗೆ ಕಾರಣ ತಿಳಿಯಲು ಈಗಾಗಲೇ ಸೂಚಿಸಲಾಗಿದೆ. ನಗರದ ಸಿವಿಲ್‌-ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆ ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಿದ ಕಬ್ಬಿಣ, ಮರಳು, ಸಿಮೆಂಟ್‌ ಹಾಗೂ ಜಲ್ಲಿ ಮಾದರಿ ಸಂಗ್ರಹಿ ಪರೀಕ್ಷೆ ಮಾಡಿ ವರದಿ ನೀಡಲಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

10*6 ಅಡಿ ರಸ್ತೆ ಕತ್ತರಿ:

ಶನಿವಾರ ಬೆಳಗ್ಗೆಯಿಂದಲೇ ಮೇಲ್ಸೇತುವೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಗುಂಡಿ ಸುತ್ತ ಸುಮಾರು 10 ಅಡಿ ಅಗಲ ಹಾಗೂ 6 ಅಡಿ ಉದ್ದ ಮೇಲ್ಸೇತುವೆ ಕತ್ತರಿಸಿ ಮರು ಕಾಂಕ್ರಿಟಿಕರಣ ಮಾಡಲಾಗುವುದು. ಎರಡು ದಿನದಲ್ಲಿ ದುರಸ್ತಿ ಕಾರ್ಯ ಮುಕ್ತಾಯಗೊಳ್ಳುವುದು. ಆದರೆ, ಕ್ಯೂರಿಂಗ್‌ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಆಯುಕ್ತರು ಮಾಹಿತಿ ನಿಡಿದರು.

ಇಡೀ ಫ್ಲೈಓವರ್‌ ಪರೀಕ್ಷೆ

ಸುಮ್ಮನಹಳ್ಳಿ ಮೇಲ್ಸೇತುವೆಯ ನಾಗರಭಾವಿ ಕಡೆಯಿಂದ ರಾಜಕುಮಾರ್‌ ಸಮಾಧಿ ಕಡೆ ಸಾಗುವ ಮಾರ್ಗದಲ್ಲಿ ಗುಂಡಿ ಬಿದ್ದಿದೆ. ಹಾಗಾಗಿ, ಇಡೀ ಮೇಲ್ಸೇತುವೆಯ ಸುರಕ್ಷತೆಯ ಬಗ್ಗೆ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆಯ ಸಂಪೂರ್ಣ ಪರೀಕ್ಷೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷಾ ವರದಿ ಬಂದ ಬಳಿಕ ಪರಿಶೀಲಿಸಿ ನಂತರ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೇ? ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ‘ಕನ್ನಡಪ್ರಭ‘ಕ್ಕೆ ಮಾಹಿತಿ ನೀಡಿದ್ದಾರೆ.

10 ದಿನ ಸಂಚಾರ ನಿಷೇಧ

ಸುಮ್ಮನಹಳ್ಳಿ ಜಂಕ್ಷನ್‌ ಫ್ಲೈಓವರ್‌ನಲ್ಲಿ ಗುಂಡಿ ಬಿದ್ದು ರಿಪೇರಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಮಾರು 10 ದಿನ ಕಾಲ ನಾಗರಭಾವಿ ಕಡೆಯಿಂದ ರಾಜಕುಮಾರ್‌ ಸಮಾಧಿ ಕಡೆ ಸಾಗುವ ಮಾರ್ಗದಲ್ಲಿ ಫ್ಲೈಓವರ್‌ ಮೇಲೆ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಸರ್ವಿಸ್‌ ರಸ್ತೆ ಮೂಲಕ ಸಾಗಬೇಕಿದೆ. ಇನ್ನು ರಾಜಕುಮಾರ್‌ ಸಮಾಧಿ ಕಡೆಯಿಂದ ನಾಗರಭಾವಿ ಕಡೆ ಸಾಗುವ ವಾಹನ ಫ್ಲೈಓವರ್‌ ಮೇಲ್ಭಾಗದಲ್ಲಿ ಎಂದಿನಂತೆ ಸಂಚಾರಿಸಬಹುದಾಗಿದೆ.

ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜನೆ

ಫ್ಲೈಓವರ್‌ ಮೇಲೆ ವಾಹನ ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಸುಮ್ಮನಹಳ್ಳಿ ಜಂಕ್ಷನ್‌, ಕಂಠೀರವ ನಗರ ಹಾಗೂ ಕೊಟ್ಟಿಗೆಪಾಳ್ಯ ಸೇರಿದಂತೆ ವಿವಿಧ ಕಡೆ ಭಾರೀ ಸಂಚಾರಿ ದಟ್ಟಣೆ ಉಂಟಾಗುತ್ತಿರುವುದರಿಂದ ದಟ್ಟಣೆ ನಿವಾರಣೆಗೆ ಸಂಚಾರಿ ಪೊಲೀಸ್‌ ಇಲಾಖೆ ಭಾನುವಾರದಿಂದ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಿದೆ.

ಗುಂಡಿ ನಿರ್ಮಾಣಕ್ಕೆ ಕಾರಣ?

* ಕಾಂಕ್ರಿಟ್‌ ಮಿಶ್ರಣದಲ್ಲಿ ಲೋಪ

* ಕಾಂಕ್ರಿಟ್‌ ಸ್ಲಾಬ್‌ ನಿರ್ಮಿಸುವಾಗ ಕಳಪೆ ಕಾಮಗಾರಿ

* ಡಾಂಬಾರ್‌ ಹೊದಿಕೆ ಕಿತ್ತು ಹೋಗಿ ಮೇಲ್ಭಾಗದಲ್ಲಿ ಗುಂಡಿ ನಿರ್ಮಾಣ

* ಅದೇ ಸ್ಥಳದಲ್ಲಿ ಮಳೆ ನೀರು ನಿಂತಿಕೊಂಡಿದ್ದು

* ಭಾರೀ ವಾಹನಗಳ ನಿರಂತರ ಸಂಚಾರದಿಂದ ಗುಂಡಿ ಸೃಷ್ಟಿ

ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ, ವಾಹನ ಸವಾರರೇ ಹುಷಾರ್..

Follow Us:
Download App:
  • android
  • ios