ಹೈಕೋರ್ಟ್ ಆದೇಶದಂತೆ 15,000 ಶಿಕ್ಷಕರ ಹೊಸ ಪಟ್ಟಿ ಪ್ರಕಟ
ಹೈಕೋರ್ಟ್ ಆದೇಶದಂತೆ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನೂ ಪರಿಗಣಿಸಿ 1:1 ಅನುಪಾತದಲ್ಲಿ ಹೊಸ ತಾತ್ಕಾಲಿಕ ಪಟ್ಟಿ ಪ್ರಕಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ.
ಬೆಂಗಳೂರು(ಫೆ.28): ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೈಕೋರ್ಟ್ ಆದೇಶದಂತೆ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನೂ ಪರಿಗಣಿಸಿ 1:1 ಅನುಪಾತದಲ್ಲಿ ಹೊಸ ತಾತ್ಕಾಲಿಕ ಪಟ್ಟಿಯನ್ನು ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದ ಶಿಕ್ಷಣ ಇಲಾಖೆಯು 2022ರ ನವೆಂಬರ್‌ನಲ್ಲಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಿತ್ತು. ಈ ವೇಳೆ ವಿವಾಹವಾಗಿದ್ದರೂ ಪತಿಯ ಆದಾಯ ಪ್ರಮಾಣ ಪತ್ರ ಸಲ್ಲಿಸದೆ ತಂದೆಯ ಹೆಸರಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವುದು ನಿಯಮ ಬಾಹಿರ ಎಂದು ಹಲವು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಗೆ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಂದೆಯ ಆದಾಯ ಪ್ರಮಾಣ ಸಲ್ಲಿಸಿರುವ ಮಹಿಳಾ ಅಭ್ಯರ್ಥಿಗಳನ್ನೂ ಆಯ್ಕೆಪಟ್ಟಿಗೆ ಪರಿಗಣಿಸಿ ಹೊಸ ತಾತ್ಕಾಲಿಕ ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಆದೇಶಿಸಿತ್ತು. ಇದೀಗ ಅದರಂತೆ ಹೊಸ ಪಟ್ಟಿಯನ್ನು ಇಲಾಖೆಯು https://www.schooleducation.kar.nic.in/ ನಲ್ಲಿ ಪ್ರಕಟಿಸಿದೆ.
BMRCL Recruitment 2023: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, 1,40,000 ರೂ ವೆರೆಗೂ ವೇತನ
ಒಟ್ಟು 23 ವಿಷಯಗಳಲ್ಲಿ ಖಾಲಿ ಇದ್ದ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಪೈಕಿ 1:1 ಅನುಪಾತದಲ್ಲಿ ಆಯ್ಕೆಯಾಗಿರುವ 13,351 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಉಳಿದ 1649ಹುದ್ದೆಗಳಿಗೆ ಯಾವುದೇ ಅಭ್ಯರ್ಥಿಗಳು ಅರ್ಹತೆ ಪಡೆದು ಆಯ್ಕೆಯಾಗಿಲ್ಲ. ಆ ಹುದ್ದೆಗಳನ್ನು ಮುಂದಿನ ನೇಮಕಾತಿಯಲ್ಲಿ ಭರ್ತಿ ಮಾಡಿಕೊಳ್ಳಬೇಕಾಗುತ್ತದೆ.
13,351 ಅಭ್ಯರ್ಥಿಗಳ ಪೈಕಿ 4971 ಪುರುಷ ಅಭ್ಯರ್ಥಿಗಳು, 8,377 ಮಹಳಾ ಅಭ್ಯರ್ಥಿಗಳು ಮತ್ತು ಮೂವರು ತೃತೀಯ ಲಿಂಗ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ 5000 ಹುದ್ದೆಗಳಿಗೆ ಪ್ರತಿಯಾಗಿ 4,194 (ಶೇ.83.88), ಇತರೆ ಜಿಲ್ಲೆಗಳ ಶಾಲೆಗಳಲ್ಲಿನ 10000 ಹುದ್ದೆಗಳಿಗೆ 9,157 (ಶೇ.91.57) ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.