ಕರ್ನಾಟಕ ಸರ್ಕಾರವು ಗುತ್ತಿಗೆ ಆಧಾರದ ವೈದ್ಯರು ಮತ್ತು ನರ್ಸ್‌ಗಳ ವೇತನವನ್ನು ಶೇ.25 ರಿಂದ ಶೇ.50 ರಷ್ಟು ಹೆಚ್ಚಿಸಿದೆ. ಹೊಸದಾಗಿ ನೇಮಕವಾಗುವ ಸಿಬ್ಬಂದಿಗಳಿಗೆ ಮಾತ್ರ ಈ ಹೆಚ್ಚಳ ಅನ್ವಯವಾಗುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ರಾಜೀನಾಮೆ ನೀಡಿ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಬೆಂಗಳೂರು (ಮೇ 30): ರಾಜ್ಯದ ಗುತ್ತಿಗೆ ಆಧಾರದ ವೈದ್ಯರು ಹಾಗೂ ನರ್ಸ್‌ಗಳಿಗೆ ಸಂತಸದ ಸುದ್ದಿಯೊಂದನ್ನು ಸರ್ಕಾರ ನೀಡಿದೆ. ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡು, ಅವರ ವೇತನದಲ್ಲಿ ಶೇ.25ರಿಂದ ಶೇ.50ರಷ್ಟುವರೆಗೆ ಭಾರಿ ಹೆಚ್ಚಳ ಮಾಡುವ ಆದೇಶ ನೀಡಿದೆ.
ವೈದ್ಯರ ಸೇವೆ ಅತ್ಯಗತ್ಯ: ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯರು ರಾಜ್ಯದ ಗ್ರಾಮೀಣ ಹಾಗೂ ಪಟ್ಟಣದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಈ ಸೇವೆಯ ಮಹತ್ವವನ್ನು ಅರಿತ ಸರ್ಕಾರ, ಕೇಂದ್ರ ಸರ್ಕಾರದ ಅನುಮತಿ ಪಡೆದು ಈ ಬದಲಾವಣೆ ತಂದಿದೆ.
ಹೆಚ್ಚಳದ ವಿವರ:
MBBS ವೈದ್ಯರ ವೇತನ: ₹45,000 ರಿಂದ ₹75,000ಕ್ಕೆ ಪರಿಷ್ಕರಣೆ
ತಜ್ಞ ವೈದ್ಯರ ವೇತನ: ₹1,10,000 ರಿಂದ ₹1,40,000ಕ್ಕೆ ಏರಿಕೆ
ನರ್ಸ್‌ಗಳ ವೇತನ: ₹18,000 ರಿಂದ ₹22,000ಕ್ಕೆ ಹೆಚ್ಚಳ
ಆರೋಗ್ಯ ಇಲಾಖೆಯ ಸ್ಪಷ್ಟನೆ:
ವೈದ್ಯರ ಸೇವೆಯ ಗುಣಮಟ್ಟ ಹೆಚ್ಚಿಸಲು ಹಾಗೂ ಗುತ್ತಿಗೆ ವೈದ್ಯರಲ್ಲಿ ಸ್ಥಿರತೆ ತರುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಿಂದ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ನಿರೀಕ್ಷಿಸಲಾಗಿದೆ. ಈ ಆದೇಶ ರಾಜ್ಯದ ಸಾವಿರಾರು ಗುತ್ತಿಗೆ ವೈದ್ಯರು ಹಾಗೂ ನರ್ಸ್‌ಗಳಿಗೆ ಹೊಸ ಆಶಾವಾದ ತುಂಬಿದೆ. ಕಳೆದ ಕೆಲ ವರ್ಷಗಳಿಂದ ಬೇಡಿಕೆಯಾದ ವೇತನ ಪರಿಷ್ಕರಣೆ ಇದೀಗ ಈಡೇರಿದಂತಾಗಿದೆ.
ಹೊಸಬರಿಗೆ ಮಾತ್ರ ಅನ್ವಯ:
ಆದರೆ, ಈ ಎಲ್ಲ ವೇತನ ಪರಿಷ್ಕರಣೆ ಹೊಸದಾಗಿ ನೇಮಕ ಮಾಡಲಾಗುವ ಎಲ್ಲ ವೇತನ ಪರಿಷ್ಕರಣೆ ಹೊಸದಾಗಿ ನೇಮಕವಾಗುವ ಗುತ್ತಿಗೆ ಸಿಬ್ಬಂದಿಗಳಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮುಂದುವರೆಯುತ್ತಾರೆ. ಈ ನೌಕರರು ರಾಜೀನಾಮೆ ಸಲ್ಲಿಸಿ ಹೊಸ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅವರು ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಹೊಸ ನೇಮಕಾತಿ ಸಂದರ್ಭದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಅವರ ಸೇವಾ ಅನುಭವದ ಆಧಾರದ ಮೇಲೆ (ಪ್ರತಿ ವರ್ಷಕ್ಕೆ2 ಅಂಕಗಳು) ಆದ್ಯತೆ ನೀಡಲಾಗುತ್ತದೆ.

