ರಾಜ್ಯ ಸರ್ಕಾರಿ ಆಸ್ಪತ್ರೆಗಳ ಎನ್‌ಎಚ್‌ಎಂ ವೈದ್ಯರು ಮತ್ತು ನರ್ಸ್‌ಗಳ ವೇತನ ಪರಿಷ್ಕರಣೆಯಾಗಿದೆ. ಹೊಸ ನೇಮಕಾತಿಗಳಿಗೆ ಮಾತ್ರ ಹೊಸ ವೇತನ ಅನ್ವಯ. ಈಗಿರುವ ಸಿಬ್ಬಂದಿ ರಾಜೀನಾಮೆ ನೀಡಿ ಪುನಃ ಅರ್ಜಿ ಸಲ್ಲಿಸಬೇಕು. ಎಂಬಿಬಿಎಸ್ ವೈದ್ಯರಿಗೆ ₹60,000, ತಜ್ಞರಿಗೆ ₹1,40,000, ನರ್ಸ್‌ಗಳಿಗೆ ₹22,000 ಹೊಸ ವೇತನ ನಿಗದಿ. ಹುದ್ದೆ ಖಾಲಿ ಇದ್ದರೂ, ಕಡಿಮೆ ವೇತನದಿಂದ ಅಭ್ಯರ್ಥಿಗಳ ಕೊರತೆ ಇದೆ.

ಬೆಂಗಳೂರು (ಮೇ 14): ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳ ವೇತನವನ್ನು ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಮೂಲಕ ಮಹತ್ವದ ಘೋಷಣೆ ಮಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಯೋಜನೆಯಡಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೇತನವನ್ನು ಪರಿಷ್ಕರಿಸಲಾಗಿದೆ. ಈ ವೇತನ ಹೆಚ್ಚಳ ಹೊಸದಾಗಿ ನೇಮಕವಾಗುವ ಸಿಬ್ಬಂದಿಗೆ ಮಾತ್ರ ಅನ್ವಯವಾಗಲಿದೆ. ಈಗಿರುವ ಸಿಬ್ಬಂದಿಗೆ ಇದೇ ವೇತನ ಮುಂದುವರೆಯಲಿದೆ. ಅವರು ಕೂಡ ಹೊಸ ವೇತನಕ್ಕೆ ಅರ್ಹರಾಗಬೇಕಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈಗಾಗಲೇ ಕೆಲಸ ಮಾಡಿದ ವೈದ್ಯರಿಗೆ ಹೊಸ ಹುದ್ದೆಗಳನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೇತನ ಏರಿಕೆಯ ವಿವರ ಹೀಗಿದೆ:
ಎಂಬಿಬಿಎಸ್ ವೈದ್ಯರು –
ಪ್ರಸ್ತುತ ಸಂಬಳ: ₹46,895 ರಿಂದ ₹50,000
ಪರಿಷ್ಕೃತ ವೇತನ: ₹60,000

ತಜ್ಞ ವೈದ್ಯರು –
ಪ್ರಸ್ತುತ ವೇತನ: ₹1,10,000 ರಿಂದ ₹1,30,000
ಪರಿಷ್ಕೃತ ವೇತನ: ₹1,40,000

ಸ್ಟಾಫ್ ನರ್ಸ್‌ಗಳು –
ಪ್ರಸ್ತುತ ವೇತನ: ₹14,186 ರಿಂದ ₹18,774
ಪರಿಷ್ಕೃತ ವೇತನ: ₹22,000

ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ: ರಾಜ್ಯದಲ್ಲಿ ಒಟ್ಟು 9,041 ಹುದ್ದೆಗಳಿವೆ. ಇದರಲ್ಲಿ 1,398 ಎಂಬಿಬಿಎಸ್ ವೈದ್ಯರು, 899 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್‌ಗಳ ಹುದ್ದೆಗಳಿವೆ. ಇದರಲ್ಲಿ ಪ್ರಸ್ತುತವಾಗಿ 579 ಎಂಬಿಬಿಎಸ್ ವೈದ್ಯರು, 305 ತಜ್ಞ ವೈದ್ಯರು ಹಾಗೂ 936 ಸ್ಟಾಫ್ ನರ್ಸ್ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.

ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದರೂ, ಅಭ್ಯರ್ಥಿಗಳು ಬರುತ್ತಿಲ್ಲ: ರಾಜ್ಯದಲ್ಲಿ ವೈದ್ಯಕೀಯ ಸಿಬ್ಬಂದಿಗೆ ವೇತನ ಕಡಿಮೆ ಇರುವ ಕಾರಣದಿಂದ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ವೈದ್ಯರು ಹಾಗೂ ನರ್ಸ್‌ಗಳು ಸರ್ಕಾರಿ ಆಸ್ಪತ್ರೆಗೆ ಬಂದು ಕೆಲಸ ಮಾಡುವುದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣದಿಂದಲೇ ಕೇಂದ್ರ ಸರ್ಕಾರದ ಅನುದಾನದ ಒಳಗೇ ವೇತನ ಪರಿಷ್ಕರಣೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಕಳೆದ ಎಂಟು ತಿಂಗಳಿಂದ ಈ ಕುರಿತು ಮನವಿ ಮಾಡುತ್ತಾ ಬಂದಿದ್ದು, ಇದೀಗ ಕೇಂದ್ರದಿಂದ ಒಪ್ಪಿಗೆ ಲಭಿಸಿದೆ ಎಂದರು.

ಹಳೆಯ ವೈದ್ಯರಿಗೆ ಹೊಸ ವೇತನ ಬೇಕಾದಲ್ಲಿ ರಾಜೀನಾಮೆ ಕೊಡಿ:
'ಹಳೆಯ ಸಿಬ್ಬಂದಿಗೆ ಹಳೆಯ ವೇತನವನ್ನೇ ನೀಡಲಾಗುತ್ತದೆ. ಒಂದು ವೇಳೆ ಹಳೆಯ ವೈದ್ಯಕೀಯ ಸಿಬ್ಬಂದಿ ಪರಿಷ್ಕೃತ ವೇತನ ಬೇಕು ಎಂದು ಬಯಸುವುದಾದರೆ, ಈಗಿರುವ ಸ್ಥಾನಕ್ಕೆ ರಾಜೀನಾಮೆ ನೀಡಿ ಪುನಃ ಅರ್ಜಿ ಹಾಕಬೇಕು. ಹೀಗೆ, ಅರ್ಜಿ ಸಲ್ಲಿಕೆ ಮಾಡಿದ ನಂತರ ಅವರ ಅರ್ಜಿ ಆಯ್ಕೆಯಾದರೆ ಮಾತ್ರ ಹೊಸ ವೇತನ ಪಡೆಯಲು ಅರ್ಹರಾಗುತ್ತಾರೆ. ಇಲ್ಲದಿದ್ದರೆ, ಅವರು ಹಿಂದಿನ ವೇತನದಲ್ಲೇ ಮುಂದುವರಿಯಬೇಕು.
- ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ರಾಜ್ಯದ 30 ಸಾವಿರ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವಿಲ್ಲ: 
ರಾಜ್ಯದ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವೈದ್ಯರು ಹಾಗೂ ಇತರೆ ವೈದ್ಯಕೀಯ ಸಹಾಯಕ ಸಿಬ್ಬಂದಿ ಸೇರಿ 28,250ಕ್ಕೂ ಅಧಿಕ ಸಿಬ್ಬಂದಿ ಕಾರ್ಯು ನಿರ್ವಹಿಸುತ್ತಿದ್ದಾರೆ. ಆದರೆ, ಈ ಎಲ್ಲಾ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನವನ್ನೇ ಪಾವತಿ ಮಾಡಿಲ್ಲ. ಇದರಿಂದ ಎಲ್ಲ ವೈದ್ಯಕೀಯ ಸಿಬ್ಬಂದಿ ವೇತನ ಸಿಗದೇ ಕುಟುಂಬ ನಿರ್ವಹಣೆಗೆ ವೇದನೆ ಅನುಭವಿಸುವಂತಾಗಿದೆ. ಸರ್ಕಾರದ ಸೇವೆ ಮಾಡಿದ ಸಿಬ್ಬಂದಿ ವೇತನಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ.