Asianet Suvarna News Asianet Suvarna News

ಸರ್ಕಾರಿ ಉದ್ಯೋಗಕ್ಕೆ ಹಣ ಕೊಟ್ಟು ಮೋಸ ಹೋದವರ ಹೋರಾಟ: ಹಣ ಕೊಡಿಸುತ್ತಾ ಸರ್ಕಾರ?

ಸರ್ಕಾರಿ ನೌಕರಿ ಪಡೆಯುವುದಕ್ಕೆ ಖಾಸಗಿ ವ್ಯಕ್ತಿ ಅಥವಾ ಏಜೆನ್ಸಿಗೆ ಹಣ ಕೊಟ್ಟು ಮೋಸ ಹೋಗಿದ್ದೀರಾ, ನಿಮ್ಮ ಹಣ ವಾಪಸ್‌ ಪಡೆಯಲು ಇಲ್ಲಿದೆ ಮಾರ್ಗ. 

Karnataka Govt job lure scam case handed over to CID demand Dharwad Basavaraj Koravar sat
Author
First Published Jul 20, 2023, 8:19 PM IST

ವರದಿ : ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಜು.20): ರಾಜ್ಯದಲ್ಲಿ ಸಾವಿರಾರು ಯುವಜನರು ಸರ್ಕಾರದ ಸಂಸ್ಥೆಗಳಿಂದ ನಡೆಸಲಾಗುವ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಎದುರಿಸಲಾಗದೇ ವಾಮ ಮಾರ್ಗದಿಂದ ನೌಕರಿ ಪಡೆದುಕೊಳ್ಳಲು ಲಕ್ಷಾಂತರ ರೂ. ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ. ಅಂಥ ಯುವಜನರು ಈಗ ಹಣ ಪಡೆದ ವ್ಯಕ್ತಿ, ಏಜೆಂಟರು ಹಾಗೂ ಸಂಸ್ಥೆಗಳಿಂದ ಹಣ ವಾಪಸ್‌ ಪಡೆಯಲು ಈಗ ಹೋರಾಟ ನಡೆಯುತ್ತಿದ್ದು, ಅದರಲ್ಲಿ ನೀವೂ ಭಾಗವಹಿಸುವ ಮೂಲಕ ನಿಮ್ಮ ಹಣವನ್ನು ವಾಪಸ್‌ ಪಡೆಯಬಹುದು.

ಧಾರವಾಡ ಎಂದರೆ ರಾಜ್ಯದ ಮೊದಲ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಿದ ಕೀರ್ತಿ ಹೊಂದಿದೆ. ಇಲ್ಲಿ ಲಕ್ಷಾಂತರ ಯುವಕರು ಪದವಿ ಪೂರ್ಣಗೊಳಿಸಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಈಗ ಬೆಂಗಳೂರು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಬೆಂಗಳೂರು ಕೂಡ ಪ್ರಸಿದ್ಧಿಯಾಗಿದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲಾಗದೇ ವಾಮ ಮಾರ್ಗದಲ್ಲಿ ಹಣ ಕೊಟ್ಟು ಹುದ್ದೆ ಗಿಟ್ಟಿಸಿಕೊಳ್ಳುವ ಆಸೆಯಿಂದ ಸಾವಿರಾರು ಅಭ್ಯರ್ಥಿಗಳು, ಧಾರವಾಡ, ಬೆಂಗಳೂರು, ಮಂಗಳೂರು, ಮಂಡ್ಯ, ಹಾಸನ, ಕಲಬುರಗಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ವಂಚಕರಿಗೆ ಹಣ ಕೊಟ್ಟು ಮೋಸ ಹೋಗಿದ್ದಾರೆ. ಈಗ ನೌಕರಿಯೂ ಸಿಗದೇ, ಹಣವೂ ವಾಪಸ್‌ ಸಿಗದೇ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಅಂಥವರ ಪರವಾಗಿ ಧಾರವಾಡದಲ್ಲಿ ಒಂದು ಹೋರಾಟ ಶುರುವಾಗಿದೆ.

ಗೃಹಲಕ್ಷ್ಮಿ ಯೋಜನೆಗೆ 10 ನಕಲಿ ಆ್ಯಪ್‌ಗಳ ಹಾವಳಿ: ಡೌನ್ಲೋಡ್‌ ಮಾಡಿದ್ರೆ ಹಣ ಖೋತಾ

ಸರ್ಕಾರಿ ನೌಕರಿಗೆ ಹಣ ಕೊಟ್ಟು ಮೋಸ ಹೋದ ಅಭ್ಯರ್ಥಿಗಳ ಪರವಾಗಿ ಜನಜಾಗೃತಿ ಸಂಘದ ಅದ್ಯಕ್ಷ ಬಸವರಾಜ ಕೊರವರ ಅವರು, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಜೊತೆಗೆ, ಯುವಜನರಿಗೆ ನೌಕರಿ ಕೊಡಿಸಿದ ಸಂಸ್ಥೆಗಳು ಹಾಗೂ ಏಜೆಂಟರ ಅಕ್ರಮದ ಪ್ರಕರಣವನ್ನು ಸಿಐಡಿ/ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನೌಕರಿ ಸಿಗದೇ ಹಣ ಕಳೆದುಕೊಮಡು ಪರದಾಡುತ್ತಿರುವ ಯುವಕರ ಪರವಾಗಿ ಹೋರಾಟ ಮಾಡಲು ನಿರ್ಧರಿಸಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂತ್ರಸ್ಥ ಯುವಕರಿಂದ ದೂರು ಸ್ವೀಕಾರ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಗುರುವಾರ ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಜನಜಾಗೃತಿ ಸಂಘದ ಅದ್ಯಕ್ಷ ಬಸವರಾಜ ಕೊರವರ, ಧಾರವಾಡದ ಎಸ್‌ಜಿಎಸ್‌ಎಸ್‌ಎಚ್‌ಆರ್‌ ಕನ್ಸಲ್ಟನ್ಸಿಯ ರಾಘವೇಂದ್ರ ಕಟ್ಟಿ ಎಂಬಾತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ಸಂಸ್ಥೆಗಳನ್ನು ಹುಟ್ಟು ಹಾಕಿ ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸಾವಿರಾರು ಯುವಕರಿಗೆ ಪಂಗನಾಮ ಹಾಕಿದ್ದಾನೆ. ಒಬ್ಬೊಬ್ಬರಿಂದಲೂ ಲಕ್ಷಗಟ್ಟಲೆ ಹಣ ಪಡೆದು ಇದೀಗ ಹಣವನ್ನು ಮರಳಿಸದೆ ವಂಚನೆ ಮಾಡಿರುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ, ಈ ಪ್ರಕರಣವನ್ನು ತಕ್ಷಣವೇ ಸಿಐಡಿ ತನಿಖೆಗೆ ನೀಡಬೇಕು. ಈ ಬಗ್ಗೆ ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ, ನಿರ್ಲಕ್ಷ್ಯ ತೋರಿದ್ದರು. ಈ ಕುರಿತು ಧಾರವಾಡದ ಉಪನಗರ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದರು. 

ಈ ಪ್ರಕರಣ ಸಂಬಂಧ ರಾಘವೇಂದ್ರ ಕಟ್ಟಿಯನ್ನು ಅಂದು ಉಪನಗರ ಪೊಲೀಸರು ವಶಕ್ಕೆ ಪಡೆದುಕೊಂಡಾಗ ಎದೆ ನೋವು ನೆಪ ಹೇಳಿ ಹುಬ್ಬಳಿಯ ಕಿಮ್ಸ್ ಗೆ ದಾಖಲಾಗಿ ಆನಂತರ ನಿರೀಕ್ಷಣಾ ಜಾಮೀನು ಪಡೆದು ಬಳಿಕ ಹೈಕೋರ್ಟ್ ಮೊರೆ ಹೋಗಿ ಎಲ್ಲಾ ಪ್ರಕರಣಗಳಿಗೆ ವಿಚಾರಣೆ ನಡೆಸದಂತೆ ತಡೆಯಾಜ್ಞೆ ಪಡೆದಿದ್ದ ಆ ನಂತರ ಹೈಕೋರ್ಟ್ ನಲ್ಲಿ ರಾಜಿ ಸಂಧಾನಕ್ಕೆ ಮುಂದಾಗಿದ್ದನು. ಆನಂತರ ಪ್ರಕರಣ ಇರ್ತಥ್ಯ ಮಾಡಿಕೊಂಡಿಲ್ಲ. ಆದ್ದರಿಂದ ಈ ಅರ್ಜಿಯನ್ನು ಹೈಕೋರ್ಟ್ ಜೂನ್ 7ರಂದು ವಜಾಗೊಳಿಸಿದೆ. ಆದರೆ ಈವರೆಗೆ ಸ್ಥಳೀಯ ಪೊಲೀಸರು ವಿಚಾರಣೆ ಆರಂಭಿಸಿಲ್ಲ. ಇದಾದ ಬಳಿಕ ಹಲವರು ಪ್ರಕರಣ ದಾಖಲಿಸಲು ಪ್ರಯತ್ನಿಸಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಈ ಪ್ರಕರಣದಲ್ಲಿ ಉಪನಗರ ಪೊಲೀಸರು ಮೀನಾಮೇಷ ಎಣಿಸುತ್ತಿರುವುದರಿಂದ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಸಿ ಐ ಡಿ ತನಿಖೆ ಗೆ ನೀಡಲೇಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದರ ಫ್ರಾಂಚೈಸಿ ತೆರೆದು ಅದರ ಮೂಲಕ ಹಾಗೂ ತಮ್ಮ ಹತ್ತಾರು ಎಜೆಂಟ್ ಗಳ ಮೂಲಕ ಸಾವಿರಾರು ಯುವಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಲಾಗಿದೆ. ಈಗ ಎಜೆಂಟ್ ಗಳಾದ ಪ್ರೇಮಾ ಹಾಗೂ ಉಮೇಶ ಕಳಸದ ಸೇರಿದಂತೆ ಹಲವಾರು ಜನ ನಮಗೆ ನ್ಯಾಯ ಕೊಡಿಸುವಂತೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆಗೆದು ದೂರುಗಳನ್ನು ಸ್ವೀಕರಿಸಬೇಕು. ಮಂಗಳೂರು, ಗದಗ, ಹಾವೇರಿ, ವಿಜಯಪುರ, ಕಲಬುರಗಿ, ಬಾಗಲಕೋಟ ಜಿಲ್ಲೆಯ ಅನೇಕರು ದೂರು ನೀಡಲು ಸಿದ್ಧರಿದ್ದಾರೆ. ಯಾರಿಗೆ ದೂರು ನೀಡಬೇಕು ಎಂಬುದು ಗೊತ್ತಾಗದೆ ಪರದಾಡುತ್ತಿದ್ದಾರೆ. ಧಾರವಾಡ ಉಪನಗರ ಪೊಲೀಸರು ಅವರನ್ನು ದೂರು ಸ್ವೀಕರಿಸದೆ, ಸಾಗ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅನೇಕರಿಗೆ ಪ್ರಕರಣದ ತಡೆಯಾಜ್ಞೆ ಇದೆ ಎಂದು ದೂರು ಸ್ವೀಕರಿಸದೆ ವಾಪಾಸ್ ಕಳುಹಿಸಿದರೆ, ಇನ್ನು ಕೆಲವರಿಗೆ ಹಣ ಮರಳಿಸಿ ಪ್ರಕರಣವನ್ನೇ ಬಿ ಫಾಲ್ಸ್ ಮಾಡಿಸಿದ್ದಾರೆ. ಹೀಗಾಗಿ ನಮಗೆ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ, ವಿಶ್ವಾಸ ಉಳಿದಿಲ್ಲ. ಹಣ ಕಳೆದುಕೊಂಡು ಅನ್ಯಾಯವಾದವರ ಮೇಲೆಯೇ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಸಿಐಡಿ ತನಿಖೆ ನಡೆಸಿ ಅವರ ಕೋಟ್ಯಾಂತರ ರೂ. ಮೊತ್ತದ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನೊಂದ ಸಾವಿರಾರು ಕುಟುಂಬಗಳಿಗೆ ನ್ಯಾಯಕೊಡಿಸಬೇಕು ಎಂದು ಜನಜಾಗೃತಿ ಸಂಘದ ಅದ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದ್ದಾರೆ.

Follow Us:
Download App:
  • android
  • ios