ಹಾಸನದ ಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ವರ್ಗಾವಣೆಗೊಂಡ ಅಧಿಕಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮರಳಿದ್ದಾರೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮತ್ತು ಹಿಂದಿನ ಅಧಿಕಾರಿಯ ನಡುವೆ ಒಂದೇ ಕುರ್ಚಿಗಾಗಿ ಜಿದ್ದಾಜಿದ್ದಿ ನಡೆದಿದೆ.

ಹಾಸನ (ಮೇ 01): ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಹೇಮಾವತಿ ಜಲಾಶಯ ಯೋಜನೆಯ (HRP) ವಿಶೇಷ ಭೂಸ್ವಾಧೀನಾಧಿಕಾರಿ (SLAO) ಕಚೇರಿ ಈಗ ಹೈಡ್ರಾಮಾದ ಕೇಂದ್ರಬಿಂದುವಾಗಿದೆ. ಒಂದೇ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ಕಣ್ಣರಳಿಸಿ ನೋಡುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ಕಳೆದ ಒಂದು ವಾರದ ಹಿಂದೆಯಷ್ಟೇ ಹೇಮಾವತಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಜಾಗಕ್ಕೆ ಮಹೇಶ್ ಎಂಬ ಅಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದಂತೆ ನೂತನ ಅಧಿಕಾರಿ ಮಹೇಶ್ ಅವರು ಈಗಾಗಲೇ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿ, ಅಧಿಕಾರಿಯ ಕುರ್ಚಿಯ ಮೇಲೆ ಕುಳಿತಿದ್ದಾರೆ.

ಕೆಎಟಿ ಮೊರೆ ಹೋದ ಮಂಜುನಾಥ್:

ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಹಿಂದಿನ ಅಧಿಕಾರಿ ಮಂಜುನಾಥ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದರು. ಮಂಜುನಾಥ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮಂಡಳಿಯು ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ (Stay) ನೀಡಿದೆ. ನ್ಯಾಯಾಲಯದಿಂದ ಸ್ಟೇ ತಂದ ಬೆನ್ನಲ್ಲೇ ಮಂಜುನಾಥ್ ಅವರು ಕಚೇರಿಗೆ ಹಾಜರಾಗಿದ್ದಾರೆ.

ಚೇರ್ ಮೇಲೆ ಹೊಸಬರು, ಪಕ್ಕದಲ್ಲೇ ನಿಂತ ಹಳಬರು!

ಸದ್ಯ ಕಚೇರಿಯಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಮಹೇಶ್ ಅವರು ಅಧಿಕೃತವಾಗಿ ಕುರ್ಚಿಯ ಮೇಲೆ ಕುಳಿತಿದ್ದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಂಜುನಾಥ್ ಅವರು ಪಕ್ಕದಲ್ಲೇ ನಿಂತು ತಮಗೆ ಕುರ್ಚಿ ಬಿಟ್ಟುಕೊಡುವಂತೆ ಆಗ್ರಹಿಸುತ್ತಿದ್ದಾರೆ. "ನನ್ನ ವರ್ಗಾವಣೆಗೆ ಕೋರ್ಟ್ ತಡೆ ನೀಡಿದೆ, ಹಾಗಾಗಿ ಈ ಸ್ಥಾನ ನನಗೆ ಸೇರಬೇಕು" ಎಂಬುದು ಮಂಜುನಾಥ್ ವಾದ. ಆದರೆ, "ನಾನು ಸರ್ಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ" ಎನ್ನುವುದು ಮಹೇಶ್ ಅವರ ನಿಲುವು.

ಗೊಂದಲದಲ್ಲಿ ಕಚೇರಿ ಸಿಬ್ಬಂದಿ:

ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಪಟ್ಟು ಹಿಡಿದಿರುವುದರಿಂದ ಕಚೇರಿಯ ಕಡತಗಳ ವಿಲೇವಾರಿ ಮತ್ತು ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಿದೆ. ಯಾವ ಅಧಿಕಾರಿಯ ಆದೇಶ ಪಾಲಿಸಬೇಕು ಎಂಬ ಗೊಂದಲದಲ್ಲಿ ಸಿಬ್ಬಂದಿ ವರ್ಗದವರಿದ್ದಾರೆ. ಹೇಮಾವತಿ ಜಲಾಶಯ ಯೋಜನೆಯಂತಹ ಪ್ರಮುಖ ವಿಭಾಗದಲ್ಲಿ ಈ ರೀತಿ ಅಧಿಕಾರಿಗಳ ನಡುವಿನ ಕಿತ್ತಾಟ ಸಾರ್ವಜನಿಕರ ಟೀಕೆಗೂ ಗುರಿಯಾಗಿದೆ.

ಸದ್ಯ ಈ ಕುರ್ಚಿ ಸಮರ ಜಿಲ್ಲಾಡಳಿತದ ಅಂಗಳ ತಲುಪಿದ್ದು, ಈ ಹಗ್ಗಜಗ್ಗಾಟಕ್ಕೆ ಯಾರು ಬ್ರೇಕ್ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.