60 ವರ್ಷ ದಾಟಿದ ಅಡುಗೆ ಸಿಬ್ಬಂದಿಯ ಏಕಾಏಕಿ ಕೈಬಿಟ್ಟ ಸರ್ಕಾರ: ಕಣ್ಣೀರಿಡುತ್ತಿರೋ ವೃದ್ದ ಜೀವಗಳು
ಸರ್ಕಾರಿ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ 60 ವರ್ಷ ದಾಟಿದ ಸಿಬ್ಬಂದಿಯನ್ನು ಸರ್ಕಾರ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು, ಇದರಿಂದ ಹಿರಿಯ ಜೀವಗಳು ದಿಕ್ಕು ಕಾಣದೆ ಕಣ್ಣೀರಿಡುತ್ತಿವೆ.
ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ: ಅವರೆಲ್ಲಾ ಸರ್ಕಾರದ ಶಾಲೆಯಲ್ಲಿದ್ದ ಅಡುಗೆ ತಯಾರಿಕಾ ಸಿಬ್ಬಂದಿ, ಅವರಲ್ಲಿ 60 ವರ್ಷ ವಯಸ್ಸಾದವರಿಗೆ ಮುಂದಿನ ಜೀವನೋಪಾಯಕ್ಕೆ ಏನು ನೀಡದೇ ಸರ್ಕಾರ ಅವರನ್ನು ತೆಗೆದು ಹಾಕಿದೆ, ಇದರಿಂದ ನಿತ್ಯ ಕಣ್ಣೀರಿಡುತ್ತಿರೋ ವೃದ್ದಜೀವಗಳು, ನಮ್ಮನ್ನು ನೋಡುವವರು ಯಾರೂ ಇಲ್ಲ, ನಮಗೆ ಪರಿಹಾರಿ ಕೊಡಿ, ಇಲ್ಲವೆ ಇಲ್ಲಿಯೇ ಸಾಯಲು ಬಿಡಿ ಅಂತ ಅತ್ಯಂತ ನೋವಿನ ಮಾತುಗಳನ್ನಾಡಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಹಾಗಾದರೆ ಇಲ್ಲಿ ಸಮಸ್ಯೆ ಆಗಿದ್ದಾದರೂ ಏನು? ಅಂತೀರಾ. ಈ ಕುರಿತ ವರದಿ ಇಲ್ಲಿದೆ...
ಒಂದೆಡೆ ವಯಸ್ಸು 60 ಎನ್ನುವ ಕಾರಣಕ್ಕೆ ಏನು ಪರಿಹಾರ ಇಲ್ಲದೆ ಕೆಲಸದಿಂದ ಹೊರಹಾಕಿರೋ ರಾಜ್ಯ ಸರ್ಕಾರ, ಮತ್ತೊಂದೆಡೆ ತಮ್ಮ ತಮ್ಮ ಪರಿಸ್ಥಿತಿ ನೆನೆದು ನಿತ್ಯ ಕಣ್ಣೀರಿಡುತ್ತಿರೋ ಅಡುಗೆ ಸಿಬ್ಬಂದಿ, ಇವರ ಮಧ್ಯೆ ಸರ್ಕಾರದ ನಡೆಯ ವಿರುದ್ದ ಬೀದಿಗಿಳಿದು ಪ್ರತಿಭಟನಾ ಹೋರಾಟಕ್ಕೆ ಮುಂದಾಗಿರೋ ಅಡುಗೆ ಸಿಬ್ಬಂದಿ. ಅಂದಹಾಗೆ ಇಂತಹವೊಂದು ಪರಿಸ್ಥಿತಿ ಎದುರಾಗಿರೋದು ಬಾಗಲಕೋಟೆ ಜಿಲ್ಲೆಯಲ್ಲಿ. ರಾಜ್ಯ ಸರ್ಕಾರ ಅಕ್ಷರ ದಾಸೋಹ ಯೋಜನೆಯಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು.
Bomb Hoax Call: ಎಂಥವ್ರೆಲ್ಲಾ ಇರ್ತಾರಪ್ಪ... ಅಡುಗೆ ಸಿಬ್ಬಂದಿ ಜೊತೆ ಕಿತ್ತಾಡಿ ರೈಲು ನಿಲ್ಲುವಂತೆ ಮಾಡಿದ ಕಿಡಿಗೇಡಿ
ಆದರೆ ಇತ್ತೀಚಿಗೆ 60 ವರ್ಷ ವಯೋಮಾನದ ಅಡುಗೆ ಸಿಬ್ಬಂದಿಯನ್ನ ಏಕಾಏಕಿ ತೆಗೆದು ಹಾಕಿದೆಯಂತೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಬರೋಬ್ಬರಿ 35 ರಿಂದ 40 ಜನ ಅಡುಗೆ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರಿಗೆ ವಯಸ್ಸು 60 ಅಂತ ಹೇಳಿ ಅವರಿಗೊಂದು ಪಿಂಚಣಿ ಇಲ್ಲವೆ ಇಡಗಂಟು ಮೂಲಕ ಪರಿಹಾರ ರೂಪಿಸಿ ಅವರನ್ನ ಗೌರವಯುತವಾಗಿ ಕಳುಹಿಸಬಹುದಿತ್ತು. ಆದರೆ ಅದ್ಯಾವುದು ಸದ್ಯಕ್ಕೆ ಆಗಿಲ್ಲ. ಹೀಗಾಗಿ ಅತಂತ್ರವಾಗಿರೋ ವೃದ್ದ ಅಡುಗೆ ಸಿಬ್ಬಂದಿ ಪ್ರತಿಭಟನೆ ಮಾಡುವುದರ ಮೂಲಕ ಕಣ್ಣೀರಿಡುತ್ತಿದ್ದಾರೆ. ಮನೆಯಲ್ಲಿ ಮಗ ಕೆಲಸ ಮಾಡೋದಿಲ್ಲ, ಮನೆ ನಡೆಸೋದು ದುಸ್ತರವಾಗಿದೆ, ಹೀಗಿರುವಾಗ ಮನೆ ನಡೆಸೋದು ಹೇಗೆ ಅಂತಾ ವೃದ್ಧೆ ದಾದಿಬಿ ಕಣ್ಣೀರು ಹಾಕುತ್ತಿದ್ದಾಳೆ.
ಕಣ್ಣೀರಿಡುತ್ತಿರುವ ವೃದ್ಧ ಜೀವಗಳು, ನಿಲ್ಲದ ಬೀದಿ ಹೋರಾಟ
ಇನ್ನು ಬಾಗಲಕೋಟೆ ಜಿಲ್ಲೆಯಾದ್ಯಂತ ಅಡುಗೆ ಸಿಬ್ಬಂದಿ ಪ್ರತಿಭಟನಾ ಹೋರಾಟಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ ವಯಸ್ಸಾಗಿರೋದರಿಂದ ಅತ್ತ ಸರ್ಕಾರ ತಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದು ನಿಜ, ಆದರೆ ತಮಗೆ ಇಷ್ಟು ವರ್ಷ ದುಡಿದಿದ್ದಕ್ಕೆ ಪಿಂಚಣಿ ನೀಡಬಹುದಾಗಿತ್ತು, ಇಲ್ಲವೆ ತಮ್ಮ ನಿವೃತ್ತಿ ಬಳಿಕ ತಮ್ಮ ಕುಟುಂಬದ ಒಬ್ಬ ಸದಸ್ಯರನ್ನ ನೇಮಕ ಮಾಡಿಕೊಂಡಿದ್ದರೆ ಆಗ ಕುಟುಂಬ ನಿರ್ವಹಣೆಯಾದರೂ ಆಗುತ್ತಿತ್ತು. ಆದ್ರೆ ಹಾಗಾಗಿಲ್ಲ ಏಕಾಏಕಿ ಕೆಲಸದಿಂದ ತೆಗೆದು ಹಾಕಿರೋದು ತೀವ್ರ ನೋವು ತಂದಿದೆ ಎಂದಿದ್ದಾರೆ. ಇನ್ನು ಈ ಮಧ್ಯೆ ಪ್ರತಿಭಟನೆಯಲ್ಲಿ ಕುಳಿತಿದ್ದ ಅಜ್ಜಿ ಲಕ್ಕವ್ವ, ತನ್ನ ಗಂಡ ಬಿಟ್ಟು ಹೋಗಿದ್ದಾನೆ, ಮನೆಯಲ್ಲಿ ಮಕ್ಕಳ ಸಮೇತ ಇದ್ದೇನೆ, ಆದರೆ ಈಗ ನಮ್ಮನ್ನು ಕೆಲಸದಿಂದ ತೆಗೆದು ಹಾಕಿದರೆ ನನ್ನ ಗತಿಯೇನು ಅಂತ ಕಣ್ಣೀರಿಟ್ಟು ಗೋಗರೆದಿದ್ದಾಳೆ.
25 ಲಕ್ಷ ರೂ. ನಿವೃತ್ತಿ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ದಾನ ಮಾಡಿದ ಶಿಕ್ಷಕ, ಶ್ಲಾಘಿಸಿದ ಮೋದಿ
ರಾಜ್ಯಾದ್ಯಂತ ಸಮಸ್ಯೆ, ಕಣ್ತೆರೆಯದ ಸರ್ಕಾರ
ಈ ಸಮಸ್ಯೆ ಕೇವಲ ಬಾಗಲಕೋಟೆ ಜಿಲ್ಲೆಗೆ ಸೀಮಿತವಾಗಿಲ್ಲ, ಬದಲಾಗಿ ಇಡೀ ರಾಜ್ಯದಲ್ಲಿಯೇ ಈ ತೆರನಾದ ಸಮಸ್ಯೆ ಎದುರಾಗಿದ್ದು, ರಾಜ್ಯಾದ್ಯಂತ 60 ವರ್ಷ ವಯೋಮಾನದ ವೃದ್ದ ಅಡುಗೆ ಸಿಬ್ಬಂದಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಏನಾದರೂ ಮಾಡಿ ಸರ್ಕಾರ ನಮ್ಮ ಮುಪ್ಪಿನ ಜೀವನಕ್ಕೆ ಪರಿಹಾರ ನೀಡುವಂತಾಗಲಿ ಅಂತ ಗೋಗರೆಯುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ 60 ವರ್ಷ ವಯೋಮಾನವಾಗಿರೋ ಅಡುಗೆ ಸಿಬ್ಬಂದಿಯನ್ನ ಏಕಾಏಕಿ ತೆಗೆದು ಹಾಕಿರೋದು ಸಿಬ್ಬಂದಿಯ ಕಣ್ಣೀರಿಗೆ ಕಾರಣವಾಗಿದ್ದು, ಸರ್ಕಾರ ಇವರತ್ತ ಗಮನಹರಿಸಿ ಪಿಂಚಣಿ ರೂಪದಲ್ಲಿ ಅವರ ಬದುಕಿಗೆ ದಾರಿ ಮಾಡಿ ಕೊಡುವುದೇ ಅಂತ ಕಾದು ನೋಡಬೇಕಿದೆ..