Asianet Suvarna News Asianet Suvarna News

ರಾಜ್ಯ ನೌಕರರ ನೇಮಕಕ್ಕೂ ಕೇಂದ್ರ ಪರೀಕ್ಷೆ?: ಕನ್ನಡಿಗ ಉದ್ಯೋಗಾಕಾಂಕ್ಷಿಗಳಲ್ಲಿ ಹೆಚ್ಚಿದ ಆತಂಕ..!

‘ಬಿ’, ‘ಸಿ’ ದರ್ಜೆ ಹುದ್ದೆ ನೇಮಕಕ್ಕೆ ಕೇಂದ್ರದಿಂದ ಸಿಇಟಿ, ಕೇಂದ್ರದ ಸಲಹೆಯನ್ನು ರಾಜ್ಯ ತಿರಸ್ಕರಿಸಿಲ್ಲ, ಹೀಗಾಗಿ ಯಾವುದೇ ಕ್ಷಣದಲ್ಲಿ ಕೇಂದ್ರದ ಘೋಷಣೆ ಭೀತಿ. 

CET from the Central Government for Recruitment of B and C Grade Posts in Karnataka grg
Author
First Published Nov 5, 2022, 10:00 AM IST

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ನ.05):   ಕನ್ನಡಿಗರ ಉದ್ಯೋಗವಕಾಶಗಳು ವ್ಯವಸ್ಥಿತವಾಗಿ ಪರಭಾಷಿಕರ ಪಾಲಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರದ ‘ಬಿ’ ಹಾಗೂ ‘ಸಿ’ ದರ್ಜೆ ಹುದ್ದೆಗಳ ನೇಮಕಾತಿಗೂ ಕೇಂದ್ರದಿಂದಲೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ನ್ಯಾಷನಲ್‌ ರಿಕ್ರೂಟ್‌ಮೆಂಟ್‌ ಏಜೆನ್ಸಿ ಸ್ಥಾಪಿಸಿ ಕೇಂದ್ರದ ವಿವಿಧ ನೇಮಕಾತಿ ಸಂಸ್ಥೆಗಳಾದ ಎಸ್‌.ಎಸ್‌.ಸಿ, ಆರ್‌ಆರ್‌ಬಿ, ಐಬಿಪಿಎಸ್‌ನ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.

ಇದಕ್ಕೂ ಮೊದಲೇ 2020ರ ಡಿ.2 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಕೇಂದ್ರ ಮಟ್ಟದಲ್ಲಿ ನಡೆಸುವ ಸಿಇಟಿ ಫಲಿತಾಂಶವನ್ನೇ ರಾಜ್ಯದ ನೇಮಕಾತಿಗಳಿಗೂ ಪರಿಗಣಿಸುವಂತೆ ಸಲಹೆ ನೀಡಿತ್ತು. ಈ ಬಗ್ಗೆ ರಾಜ್ಯ ಸರ್ಕಾರದ ಅಭಿಪ್ರಾಯ ಕೋರಿತ್ತು. ಕೇಂದ್ರ ಸರ್ಕಾರದ ಈ ಸಲಹೆಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಿಲ್ಲ. ಈ ಬಗ್ಗೆ ಪರಿಶೀಲಿಸಿ ಅಭಿಪ್ರಾಯ ತಿಳಿಸುವುದಾಗಿ ಮಾತ್ರ ತಿಳಿಸಿದೆ. ಬಳಿಕ ಈ ಬಗ್ಗೆ ವ್ಯಕ್ತವಾದ ಆಕ್ಷೇಪಗಳಿಂದಾಗಿ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದೆ. ಈ ಗುಮ್ಮ ಇನ್ನೂ ಜೀವಂತವಾಗಿದ್ದು, ಯಾವುದೇ ಕ್ಷಣದಲ್ಲೂ ಕೇಂದ್ರ ಸರ್ಕಾರ ಈ ನಿಯಮವನ್ನು ಹೇರಬಹುದು ಎಂದು ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆ ವಯೋಮಿತಿ 2 ವರ್ಷ ಹೆಚ್ಚಳ

ಒಂದು ವೇಳೆ ರಾಜ್ಯದಿಂದ ಇದಕ್ಕೆ ಅಂಗೀಕಾರ ದೊರೆತರೆ ರಾಜ್ಯದ ಉದ್ಯೋಗಗಳ ನೇಮಕಾತಿ ಜುಟ್ಟು ಕೇಂದ್ರದ ಕೈಗೆ ಹೋಗಲಿದೆ. ತನ್ಮೂಲಕ ರಾಜ್ಯದ ಉದ್ಯೋಗಗಳೂ ಪರ ರಾಜ್ಯದವರ ಪಾಲಾಗುವ ಭೀತಿ ಎದುರಾಗಿದೆ.

ಏನಿದು ಕೇಂದ್ರದ ನಡೆ?:

ಎಲ್ಲಾ ರಾಜ್ಯಗಳ ‘ಬಿ’ ಹಾಗೂ ‘ಸಿ’ ದರ್ಜೆ ಹುದ್ದೆಗಳ ನೇಮಕಾತಿಗೆ ಅಗತ್ಯ ಸಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೇಂದ್ರ ಸರ್ಕಾರದ ವತಿಯಿಂದಲೇ ನಡೆಸಲು ಕೇಂದ್ರ ಮಟ್ಟದ ಸಿಇಟಿ ಏಜೆನ್ಸಿ ಸ್ಥಾಪಿಸಲು ಚಿಂತನೆ ನಡೆಸಿದೆ. ಈ ಬಗ್ಗೆ 2020ರ ಡಿ.2 ರಂದು ರಾಜ್ಯಕ್ಕೂ ಪ್ರಸ್ತಾವನೆ ಬಂದಿತ್ತು.

ಕೇಂದ್ರ ಮಟ್ಟದಲ್ಲಿ ಸ್ಥಾಪಿಸಲ್ಪಡುವ ಸಿಇಟಿ ಏಜೆನ್ಸಿಯೊಂದಿಗೆ ರಾಜ್ಯ ಸರ್ಕಾರಗಳು ಒಡಂಬಡಿಕೆ (ಎಂಒಯು) ಮಾಡಿಕೊಳ್ಳಬೇಕು. ಒಂದು ವೇಳೆ ಒಪ್ಪಂದಕ್ಕೆ ಸಹಿ ಹಾಕಿದರೆ ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗೆ ಅಗತ್ಯವಿರುವ ಸಿಇಟಿ ಪರೀಕ್ಷೆಯನ್ನು ಕೇಂದ್ರದ ಸಿಇಟಿ ಏಜೆನ್ಸಿ ನಡೆಸುತ್ತದೆ.

ಈ ಸಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳು ಮೂರು ವರ್ಷದವರೆಗೆ ಚಾಲ್ತಿಯಲ್ಲಿರುತ್ತವೆ. ಈ ಅವಧಿಯಲ್ಲಿ ರಾಜ್ಯ ಸರ್ಕಾರಗಳು ಸರ್ಕಾರಿ ಹಾಗೂ ತತ್ಸಮಾನ ಹುದ್ದೆಗಳ ನೇಮಕಕ್ಕೆ ಕೇಂದ್ರ ಸಿಇಟಿಯಲ್ಲಿ ಅಭ್ಯರ್ಥಿ ಪಡೆದ ಅಂಕಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಹೇಳಿತ್ತು.

ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯ:

ಈ ಮೂಲಕ ‘ಬಿ’ ಹಾಗೂ ‘ಸಿ’ ದರ್ಜೆಯ ಎಲ್ಲಾ ಹುದ್ದೆಗಳ ನೇಮಕಾತಿಯಲ್ಲೂ ಕೇಂದ್ರ ಸರ್ಕಾರ ನೇರ ಹಸ್ತಕ್ಷೇಪ ಮಾಡುವ ಬಯಕೆ ಹೊಂದಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಿಇಟಿ ಪರೀಕ್ಷೆಯಲ್ಲಿ ಯಾವುದೇ ರಾಜ್ಯದ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿರುವುದರಿಂದ ರಾಜ್ಯದ ಹುದ್ದೆಗಳು ಬೇರೆ ರಾಜ್ಯಗಳ ಜನರ ಪಾಲಾಗುವ ಆತಂಕವನ್ನು ಹೋರಾಟಗಾರರ ವ್ಯಕ್ತಪಡಿಸಿದ್ದಾರೆ. ಇದನ್ನು ಸ್ಪಷ್ಟವಾಗಿ ವಿರೋಧಿಸಿ ಈವರೆಗೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿಲ್ಲ ಎಂಬುದು ಕನ್ನಡಿಗರ ಆತಂಕಕ್ಕೆ ಕಾರಣವಾಗಿದೆ.

ಬ್ಯಾಂಕ್‌ ಹುದ್ದೆಗಳೂ ಕನ್ನಡಿಗರಿಗೆ ಮರೀಚಿಕೆ..!

ಉದ್ಯೋಗಗಳು ಪರಭಾಷಿಕರ ಪಾಲು:

ದೇಶದ ಶೇ.5 ರಷ್ಟುಜನಸಂಖ್ಯೆ ಹೊಂದಿರುವ ಕರ್ನಾಟಕ ರಾಜ್ಯವು ದೇಶದ ಒಟ್ಟು ಸಾಂಪ್ರದಾಯಿಕ ಉದ್ಯೋಗಗಳಲ್ಲಿನ ಶೇ.10 ರಷ್ಟುಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಸರಾಸರಿಗೆ ಹೋಲಿಸಿದರೆ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ದುಪ್ಪಟ್ಟು ಅವಕಾಶಗಳು ಇರಬೇಕು. ಆದರೆ, ಹಲವು ಮಂದಿ ಈಗಲೂ ನಿರುದ್ಯೋಗಿಗಳಾಗಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ಎರಡೂ ಉದ್ಯೋಗಗಳು ಪರಭಾಷಿಕರ ಪಾಲಾಗುತ್ತಿರುವುದು ಇದಕ್ಕೆ ಕಾರಣ ಎಂದು ಉಜ್ವಲ ಅಕಾಡೆಮಿ ಸಂಸ್ಥಾಪಕ ಹಾಗೂ ನಿರ್ದೇಶಕ ಕೆ.ಯು. ಮಂಜುನಾಥ್‌ ಹೇಳಿದ್ದಾರೆ.

ಕೇಂದ್ರದ ವಾದವೇನು?

ಪ್ರಸ್ತುತ ರಾಜ್ಯ ಸರ್ಕಾರಗಳ ಪ್ರತಿ ಹುದ್ದೆಯ ನೇಮಕಾತಿಗೂ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಳೆದ ವರ್ಷ 1.25 ಲಕ್ಷ ಖಾಲಿ ಹುದ್ದೆಗಳಿಗೆ 2.5 ಕೋಟಿ ಮಂದಿ ಪರೀಕ್ಷೆ ಬರೆದಿದ್ದಾರೆ. ತತ್ಸಮಾನ ಹುದ್ದೆಗಳಿಗೆ ಪದೇ ಪದೇ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಸಿಇಟಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಇದರಿಂದ ಪರೀಕ್ಷಾ ಶುಲ್ಕ, ಸಾರಿಗೆ ವೆಚ್ಚ ಉಳಿತಾಯವಾಗಲಿದೆ ಎಂದು ತನ್ನ ಸಮರ್ಥನೆಗಳನ್ನು ಕೇಂದ್ರ ಸರ್ಕಾರ ನೀಡಿದೆ.
 

Follow Us:
Download App:
  • android
  • ios