ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ್ದು ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧ, ಡಿಕೆಶಿ ಪರ ಬಹಿರಂಗ ಹೇಳಿಕೆ ನೀಡಿದ್ದ ಮುಖಂಡ ಮಿಥುನ್ ರೈ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ 

ಮಂಗಳೂರು (ಡಿ.5): ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಗಳೂರು ಭೇಟಿ ವೇಳೆ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಮೊಳಗಿದ ಘೋಷಣೆ ಹೈಕಮಾಂಡಿನ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಮಿಥುನರಿಗೆ ನೋಟಿಸ್ ನೀಡಲಾಗಿದೆ.

'ಡಿಕೆಶಿ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?

ಎಐಸಿಸಿ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂಬ ಘೋಷಣೆ ಕೇಳಿ ಬಂದಿತ್ತು. ಈ ಘೋಷಣೆಯ ಕಿರಿಕಿರಿಗೆ ಸಿಟ್ಟಾದ ಕೆಸಿ ವೇಣುಗೋಪಾಲ್, ಅಲ್ಲಿಂದಲೇ ಡಿಕೆ ಶಿವಕುಮಾರ್‌ಗೆ ಕರೆ ಮಾಡಿದ್ದರು. ಅಲ್ಲದೆ ಈ ರೀತಿ ಘೋಷಣೆ ಕೂಗಿದ ಬಗ್ಗೆ ಸಿಟ್ಟು ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ವೇಣುಗೋಪಾಲ್ ಫೋನ್ ಕಾಲ್ ಗೆ ನೊಟೀಸ್ ನೀಡುವುದಾಗಿ ಡಿಕೆಶಿ ಉತ್ತರಿಸಿದ್ದರು.

ಡಿಕೆಶಿ ಸೂಚನೆ ಮೇರೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದಲ್ಲಿ ಡಿಕೆಶಿ ಪರ ಘೋಷಣೆ ಮೊಳಗಿದ ಬೆನ್ನಿಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕೂಡ ಡಿಕೆಶಿ ಮುಖ್ಯಮಂತ್ರಿ ಆಗಲೇಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದು ಮಾಧ್ಯಮಗಳಲ್ಲೂ ಪ್ರಚಾರ ಪಡೆದಿತ್ತು. ಅಷ್ಟರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರಬೇಕಾದರೆ ಸಿದ್ದು ಪೂರ್ಣಾವಧಿ ಸಿಎಂ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ಕಾರ್ಯಕರ್ತರು ಘೋಷಣೆ ಕೂಗಿದ್ದರು.