ಬ್ಯಾಂಕ್ ಹುದ್ದೆಗಳೂ ಕನ್ನಡಿಗರಿಗೆ ಮರೀಚಿಕೆ..!
ಪರೀಕ್ಷೆಯಲ್ಲಿ ಹಿಂದಿ, ಇಂಗ್ಲಿಷ್‌ಗೆ ಒತ್ತು: ಬಹುತೇಕ ಕೆಲಸ ಉತ್ತರ ಭಾರತೀಯರ ಪಾಲು, ಗ್ರಾಮೀಣ ಬ್ಯಾಂಕಲ್ಲೂ ಸಿಗುತ್ತಿಲ್ಲ ನೌಕರಿ
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ನ.02): ಬ್ಯಾಂಕ್‌ಗಳ ಉದ್ಯೋಗ ನೇಮಕಾತಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಣೆ ಹಾಕುತ್ತಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಹುದ್ದೆ ಬಹುಪಾಲು ಉತ್ತರ ಭಾರತೀಯರ ಪಾಲಾಗುತ್ತಿವೆ. ಹೋಗಲಿ, ಕರುನಾಡ ಬ್ಯಾಂಕ್‌ಗಳಿಗಾದರೂ ನಮ್ಮವರು ನೇಮಕವಾಗುತ್ತಿದ್ದಾರಾ ಎಂದು ನೋಡಿದರೆ ಅವೈಜ್ಞಾನಿಕ ನಿಯಮಗಳಿಂದಾಗಿ ಕನ್ನಡಿಗರೂ ಉದ್ಯೋಗ ವಂಚಿತರಾಗುತ್ತಿದ್ದಾರೆ. ಇನ್ಸ್‌ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಮೂಲಕವೇ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಹುದ್ದೆಗಳನ್ನು ದೇಶಾದ್ಯಂತ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಭಾರತೀಯ ಪ್ರಜೆಯಾದ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಪರೀಕ್ಷೆಗಳಲ್ಲಿ ಹಿಂದಿ, ಇಂಗ್ಲಿಷ್‌ಗೆ ಒತ್ತು ನೀಡಿರುವುದರಿಂದ ಹೆಚ್ಚು ಹುದ್ದೆಗಳಿರುವ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕನ್ನಡಿಗರು ನೇಮಕವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮತ್ತೊಂದೆಡೆ, ಇಲ್ಲಿನ ನೆಲದಲ್ಲೇ ಜನ್ಮ ತಾಳಿದ ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳ ಹುದ್ದೆಯನ್ನಾದರೂ ಕನ್ನಡಿಗರು ಉದ್ಯೋಗ ಪಡೆಯುತ್ತಿದ್ದಾರಾ ಎಂದು ನೋಡಿದರೆ ಅದೂ ಇಲ್ಲ. ಗಂಭೀರ ಪ್ರಶ್ನೆ ಪತ್ರಿಕೆ ತಯಾರು ಮಾಡದಿರುವುದು, ಕಠಿಣ ಸಂದರ್ಶನ ಏರ್ಪಡಿಸದಿರುವುದರಿಂದ ನೆರೆ ರಾಜ್ಯದವರು ಇಲ್ಲಿನ ಉದ್ಯೋಗ ಕಬಳಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವೆಂಬುದು ಮರೀಚಿಕೆಯಾಗಿದೆ. ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ರಾಜ್ಯದ ಸಂಸದರು ಸಂಸತ್‌ನಲ್ಲಿ ಧ್ವನಿ ಎತ್ತಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
BANK OF BARODA RECRUITMENT 2022: ಖಾಲಿ ಇರುವ ವಿವಿಧ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯದಲ್ಲಿ ಸ್ಥಾಪನೆಗೊಂಡ ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್‌ಗಳಲ್ಲಿ ದಶಕದ ಹಿಂದೆ ಉದ್ಯೋಗದಲ್ಲಿ ಸ್ಥಳೀಯರಿಗೇ ಆದ್ಯತೆ ನೀಡುತ್ತಿದ್ದರಿಂದ ಆಗ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗುತ್ತಿದ್ದರು. ಈಗ ಕೆನರಾ ಬ್ಯಾಂಕ್‌ವೊಂದನ್ನು ಹೊರತುಪಡಿಸಿ ಇನ್ನುಳಿದ ಮೂರೂ ಬ್ಯಾಂಕ್‌ಗಳನ್ನು ವಿಲೀನಗೊಳಿಸಿರುವುದರಿಂದ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯುವ ಕನ್ನಡಿಗರನ್ನು ಭೂತಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ಉಂಟಾಗಿದೆ.
ಕೇಂದ್ರ ಕ್ರಮ ಕೈಗೊಳ್ಳಲಿ- ನಾರಾಯಣಗೌಡ:
ಬ್ಯಾಂಕ್‌ಗೆ ಹುದ್ದೆಗಳಿಗೆ ನೇಮಕ ಮಾಡುವಾಗ ಕನ್ನಡ ಕಡೆಗಣಿಸುತ್ತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಮೊದಲೆಲ್ಲಾ ಬ್ಯಾಂಕ್‌ಗಳಲ್ಲಿ ಸ್ಥಳೀಯರಿಗೇ ಉದ್ಯೋಗಾವಕಾಶ ಲಭಿಸುತ್ತಿತ್ತು. ಆದರೆ ಈಗ ದೇಶಾದ್ಯಂತ ಏಕ ರೂಪದಲ್ಲಿ ಹುದ್ದೆ ಭರ್ತಿ ಮಾಡಿಕೊಳ್ಳುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಆಗಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘2008ರಲ್ಲಿ ರೈಲ್ವೆಯ ‘ಡಿ’ ಗ್ರೂಪ್ ನೇಮಕಾತಿಗೆ ಅರ್ಜಿ ಆಹ್ವಾನಿಸಿದಾಗ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಿರಲಿಲ್ಲ. ನಾವು 42 ದಿವಸ ಪರೀಕ್ಷೆ ನಡೆಸಲು ಅವಕಾಶ ನೀಡಿರಲಿಲ್ಲ. ಆಗ ನಮ್ಮ ಹೋರಾಟಕ್ಕೆ ಮಣಿದು ಸ್ಥಳೀಯರಿಗೆ ಆದ್ಯತೆ ನೀಡಲಾಯಿತು. 4701 ಹುದ್ದೆಯಲ್ಲಿ 3882 ಹುದ್ದೆಗೆ ಕನ್ನಡಿಗರು ಆಯ್ಕೆಯಾದರು’ ಎಂದು ಸ್ಮರಿಸಿದರು.
‘ಆಯಾ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡುವಾಗ ಸ್ಥಳೀಯರನ್ನೇ ಪರಿಗಣಿಸಬೇಕು. ಇದಕ್ಕೆ ಕೇಂದ್ರ ಸರ್ಕಾರ ನಿಯಮ ರೂಪಿಸಬೇಕು. ರಾಜ್ಯದ ಸಂಸದರು ಒಗ್ಗಟ್ಟಾಗಿ ಹೋರಾಟ ನಡೆಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿನ ಉದ್ಯೋಗಕ್ಕೆ ಆಂಧ್ರದಲ್ಲಿ ಕನ್ನಡ ಟ್ಯೂಷನ್!
ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆದುಕೊಳ್ಳಲೇಬೇಕು ಎಂದು ನಿರ್ಧರಿಸುವ ಉದ್ಯೋಗಾಕಾಂಕ್ಷಿಗಳಿಗಾಗಿಯೇ ಸೀಮಾಂಧ್ರ ಮತ್ತು ತೆಲಂಗಾಣದಲ್ಲಿ 6 ತಿಂಗಳು ‘ಕನ್ನಡ ಟ್ಯೂಷನ್’ ತರಬೇತಿ ನೀಡಲಾಗುತ್ತದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
SBI CBO Recruitment 2022: ಎಸ್‌ಬಿಐನಲ್ಲಿ 1422 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗಕ್ಕೆ ಪ್ರಾಥಮಿಕ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕು. ಇದರಲ್ಲಿ ಉತ್ತೀರ್ಣರಾದವರಿಗೆ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಲಾಗುತ್ತಿದ್ದು ಅಷ್ಟೇನೂ ಕಠಿಣ ಪ್ರಶ್ನೆಗಳು ಇರುವುದಿಲ್ಲ. ಉದ್ಯೋಗ ಪಡೆಯಲು ಕರ್ನಾಟಕವನ್ನೇ ಗುರಿಯಾಗಿಸಿಕೊಂಡು ಪಕ್ಕದ ಸೀಮಾಂಧ್ರ ಮತ್ತು ತೆಲಂಗಾಣದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಉತ್ತೀರ್ಣವಾಗುವುದಕ್ಕೆ ಮಾತ್ರ ಸೀಮಿತವಾಗಿ 6 ತಿಂಗಳು ಕನ್ನಡ ಹೇಳಿಕೊಡುವ ಕೋಚಿಂಗ್ ಸೆಂಟರ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಮುಖ್ಯ ಪರೀಕ್ಷೆಯಲ್ಲಿ ಕನ್ನಡದಲ್ಲಿ ಕೇಳುವ ಪ್ರಶ್ನೆಗಳಿಗೆ ಅಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇದೂ ಸಹ ಕನ್ನಡಿಗರ ನೇಮಕಾತಿಗೆ ಖೋತಾ ಉಂಟು ಮಾಡುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬ್ಯಾಂಕ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ನಡಿಗರಿಗೆ ತರಬೇತಿ ಕೊಡಿ
ಸಂಘ-ಸಂಸ್ಥೆಗಳು ಬ್ಯಾಂಕ್ ಉದ್ಯೋಗಾಕಾಂಕ್ಷಿ ಕನ್ನಡಿಗರಿಗೆ ಉಚಿತವಾಗಿ ತರಬೇತಿ ನೀಡಿ ಪರೀಕ್ಷೆಗೆ ಸಜ್ಜುಗೊಳಿಸಲು ಮುಂದಾಗಬೇಕು. ಬೇರೆ ರಾಜ್ಯದವರು ನಮ್ಮಲ್ಲಿನ ಗ್ರಾಮೀಣ ಬ್ಯಾಂಕ್‌ಗಳ ಉದ್ಯೋಗವನ್ನು ಕಬಳಿಸುತ್ತಿರುವುದು ಆತಂಕಕಾರಿ. ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕು ಅಂತ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ದಿವ್ಯಾ ತಿಳಿಸಿದ್ದಾರೆ.