ಕೆಎಎಸ್ ಮರುಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ 50% ದೋಷ!
ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಬೋಧಕರು ಪತ್ರಿಕೆ-1ರಲ್ಲಿ 32 ತಪ್ಪುಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ 23 ಗಂಭೀರ ದೋಷಗಳಿದ್ದರೆ, 9 ಲಘು ಪ್ರಮಾಣದಲ್ಲಿವೆ. ಈ ತಪ್ಪುಗಳಿಂದ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಅಥವಾ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗೆ ಮುಖ್ಯ ಪರೀಕ್ಷೆಗೆ ಅರ್ಹತೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಬೆಂಗಳೂರು(ಜ.10): ಕೆಎಎಸ್ 384 ಹುದ್ದೆ ನೇಮಕಕ್ಕೆ ಕೆಪಿಎಸ್ಸಿ ನಡೆಸಿದ ಪೂರ್ವ ಭಾವಿ ಮರು ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಶೇ.45ರಿಂದ 50ರಷ್ಟು ಲೋಪ-ದೋಷ ಇರುವುದನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಗುರುತಿಸಿದೆ.
ಮತ್ತೊಂದೆಡೆ ವಿದ್ಯಾರ್ಥಿ ಸಂಘಟನೆಯಿಂದ ಬೋಧಕರ ಮೂಲಕ ಪರಿಶೀಲಿಸಲಾಗಿದ್ದು, ಪ್ರಶ್ನೆಗಳನ್ನು ಪರಿಗಣಿಸಿ 23 ಗಂಭೀರ ದೋಷ ಹಾಗೂ ಲಘುಪ್ರಮಾಣದ ದೋಷ ಸೇರಿ 32 ದೋಷಗ ಳನ್ನು ಪತ್ತೆ ಹಚ್ಚಲಾಗಿದೆ. ಪತ್ರಿ ಕೆಯ ಕನ್ನಡ ಅನುವಾದವನ್ನು ವಿಷಯ ತಜ್ಞರು ಮಾಡಿದ್ದರೆ ಇಷ್ಟೊಂದು ಪ್ರಮಾದಗಳು ಆಗುತ್ತಿರಲಿಲ್ಲ.
ಕೆಎಎಸ್ ಎಡವಟ್ಟು: ಮರುಪರೀಕ್ಷೆ ಅಭ್ಯರ್ಥಿಗಳಿಗೆ ಕೃಪಾಂಕ?
ಭಾಷೆ ಬಗ್ಗೆ ಸೀಮಿತ ಜ್ಞಾನ ಇರುವವರು ಅನುವಾದ ಮಾಡಿರ ಬಹುದು. ಪ್ರಶ್ನೆಪತ್ರಿಕೆ ಸಿದ್ದಪಡಿಸುವಾಗ ಅಗತ್ಯವಾಗಿ ಬೇಕಾಗುವ ಶಬ್ದಕೋಶಗಳನ್ನು ಬಳಸಿಕೊಳ್ಳಬಹುದಿತ್ತು ಎಂದು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಿ. ಡೊಮಿನಿಕ್ ಹೇಳಿದರು.
ಇನ್ನು ಕನ್ನಡನಾಡಿನಲ್ಲಿ, ಕನ್ನಡಿಗರ ಸೇವೆ ಮಾಡುವ ಅಧಿಕಾರಿಗಳ ನೇಮಕಕ್ಕೆ ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷಿನಲ್ಲಿ ಸಿದ್ದಪಡಿಸಿ ನಂತರ ಕನ್ನಡಕ್ಕೆ ಅನುವಾದ ಮಾಡುವ ಅಗತ್ಯವಾದರೂ ಏನಿದೆ? ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಸಿದ್ದಪಡಿಸಿ ಇಂಗ್ಲಿಷಿಗೆ ಅನುವಾದಿಸಬಹುದು. ಕನ್ನಡದ ಶಬ್ದಕೋಶ ದೊಡ್ಡದಿದೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಅವಕಾಶ ಇದೆ ಎಂದು ಡೊಮಿನಿಕ್ ಹೇಳಿದರು. ಅನೇಕ ಇಂಗ್ಲಿಷ್ ಪ್ರಶ್ನೆ ಹಾಗೂ ಕನ್ನಡ ಪ್ರಶ್ನೆಯಲ್ಲಿ ಅರ್ಥ ವ್ಯತ್ಯಾಸವಿದೆ. ಕೆಲವು ಅರ್ಥವಾಗುವುದೇ ಇಲ್ಲ. ಪಾರಿಭಾಷಿಕ ಪದ ಬಳಕೆಯಲ್ಲಿ ಎಡವಲಾಗಿದೆ. ಅವುಗಳನ್ನು ಬಳಸಿ ವಾಕ್ಯ ರಚಿಸುವಲ್ಲಿಯೂ ತಪ್ಪುಗಳಾಗಿವೆ. ಕೆಲ ವಾಕ್ಯಗಳ ರಚನೆಯೇ ಸರಿ ಇಲ್ಲ. ತೀರ್ಪನ್ನು ತೀರ್ಮಾನವೆಂದು, ಭೂಪ್ರದೇಶವನ್ನು ಸ್ಥಳ ಪ್ರದೇಶವೆಂದು ಬರೆಯಲಾಗಿದೆ. ಪತ್ರಿಕೆಯಲ್ಲಿನ ತಪ್ಪುಗ ಳನ್ನು ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ ಎಂದು ಸಂಶೋಧನಾ ವಿದ್ಯಾರ್ಥಿ ಎನ್.ಮಹೇಶ್ ಅಭಿಪ್ರಾಯಪಟ್ಟರು.
KPSC ಮರು ಪರೀಕ್ಷೆಯಲ್ಲೂ ಮತ್ತೆ ಯಡವಟ್ಟು: ಪರೀಕ್ಷಾರ್ಥಿಗಳು ಆಕ್ರೋಶ
32 ದೋಷಗಳು, 16ಕ್ಕೆ ಪ್ರತಿಭಟನೆ
ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಬೋಧಕರು ಪತ್ರಿಕೆ-1ರಲ್ಲಿ 32 ತಪ್ಪುಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ 23 ಗಂಭೀರ ದೋಷಗಳಿದ್ದರೆ, 9 ಲಘು ಪ್ರಮಾಣದಲ್ಲಿವೆ. ಈ ತಪ್ಪುಗಳಿಂದ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಅಥವಾ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗೆ ಮುಖ್ಯ ಪರೀಕ್ಷೆಗೆ ಅರ್ಹತೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ. ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯ ಮತ್ತು ಕೆಪಿಎಸ್‌ಸಿಯಲ್ಲಿ ಸುಧಾರಣೆ ಸೇರಿ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.16ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ಕನ್ನಡ ಶಬ್ದಕೋಶ ಸಾಕಷ್ಟು ದೊಡ್ಡದಿದೆ. ಆಯಾ ವಿಷಯ ತಜ್ಞರಿಂದ ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಇಂಗ್ಲಿಷಿಗೆ ಅನುವಾದಿಸಬೇಕು. ಕನ್ನಡನಾಡಿನಲ್ಲಿ ಸೇವೆ ಮಾಡುವವರ ನೇಮಕಾತಿಗೆ ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆಪತ್ರಿಕೆ ನೀಡುವುದು ಏಕೆ? ಎಂದು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಿ.ಡೊಮಿನಿಕ್ ತಿಳಿಸಿದ್ದಾರೆ.