ಪ್ರಮಾಣಪತ್ರಗಳ ತಾಂತ್ರಿಕ ವಿವಾದದಿಂದ ನೇಮಕಾತಿ ವಂಚಿತರಾಗಿದ್ದ 341 ವಿವಾಹಿತ ಮಹಿಳಾ ಶಿಕ್ಷಕಿಯರಿಗೆ ಹೈಕೋರ್ಟ್ ಮಧ್ಯಂತರ ಆದೇಶದಿಂದ ರಿಲೀಫ್ ಸಿಕ್ಕಿದೆ. ಶಾಲಾ ಶಿಕ್ಷಣ ಇಲಾಖೆಯು ಷರತ್ತುಬದ್ಧ ಅನುಮತಿಯೊಂದಿಗೆ ಇವರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ.

ಬೆಂಗಳೂರು (ಜು.6): ಸರ್ಕಾರಿ ಶಾಲೆಗಳ 6 ರಿಂದ 8ನೇ ತರಗತಿಗಳ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದರೂ, ಪ್ರಮಾಣಪತ್ರಗಳ ತಾಂತ್ರಿಕ ವಿವಾದದಿಂದಾಗಿ ನೇಮಕಾತಿ ವಂಚಿತರಾಗಿದ್ದ 481 ವಿವಾಹಿತ ಮಹಿಳಾ ಅಭ್ಯರ್ಥಿಗಳ ಪೈಕಿ 341 ಅಭ್ಯರ್ಥಿಗಳಿಗೆ ಕೊನೆಗೂ ದೊಡ್ಡ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ನೀಡಿರುವ ಇತ್ತೀಚಿನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ಈ 341 ಶಿಕ್ಷಕಿಯರು ಶಾಲೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2026 ಜೂನ್ 24ರಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆಯು ಈ ಪ್ರಕಟಣೆ ಹೊರಡಿಸಿದೆ. ನೇಮಕಾತಿ ಆದೇಶ ಪಡೆದು ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ್ದ 341 ಒಬಿಸಿ (OBC) ಮಹಿಳಾ ಅಭ್ಯರ್ಥಿಗಳಿಗೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಇಲಾಖೆ ಸಮ್ಮತಿಸಿದೆ. ಆದರೆ, "ಈ ನೇಮಕಾತಿಯು ಪ್ರಸ್ತುತ ನ್ಯಾಯಾಲಯದ ಮುಂದೆ ಬಾಕಿ ಇರುವ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ" ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಇದೇ ವೇಳೆ, ಕೌನ್ಸೆಲಿಂಗ್ ತಡೆಹಿಡಿಯಲಾದ ಉಳಿದ 140 ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಹೊಸದಾಗಿ ಯಾವುದೇ ನೇಮಕಾತಿ ಆದೇಶಗಳನ್ನು ಸೃಷ್ಟಿಸಬಾರದು ಅಥವಾ ನೀಡಬಾರದು ಎಂದು ಶಿಕ್ಷಣ ಇಲಾಖೆ ಕಮಿಷನರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದು ತಂದೆ ಮತ್ತು ಗಂಡನ ಆದಾಯ ಪ್ರಮಾಣಪತ್ರ!

ಈ ಇಡೀ ವಿವಾದದ ಮೂಲ ಇರುವುದು ಅಭ್ಯರ್ಥಿಗಳು ಸಲ್ಲಿಸಿದ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ (Caste and Income Certificate). ನೇಮಕಾತಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಒಬಿಸಿ ಮಹಿಳಾ ಅಭ್ಯರ್ಥಿಗಳು ಅವಿವಾಹಿತರಾಗಿದ್ದರು. ಹಾಗಾಗಿ ಅವರು ತಮ್ಮ ತಂದೆಯ ಹೆಸರಿನಲ್ಲಿರುವ ಪ್ರಮಾಣಪತ್ರಗಳನ್ನು ಲಗತ್ತಿಸಿದ್ದರು. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಮುಗಿದು, ಶಾರ್ಟ್‌ಲಿಸ್ಟ್ ಪ್ರಕಟವಾಗಿ, ದಾಖಲಾತಿ ಪರಿಶೀಲನೆ (Document Verification) ನಡೆಯುವ ವೇಳೆಗೆ ಇವರಲ್ಲಿ ಹಲವರಿಗೆ ಮದುವೆಯಾಗಿತ್ತು. ಇಲಾಖೆಯು ದಾಖಲಾತಿ ಪರಿಶೀಲನೆ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿವಾಹಿತ ಒಬಿಸಿ ಮಹಿಳೆಯರು ಕಡ್ಡಾಯವಾಗಿ ತಮ್ಮ ‘ಗಂಡನ’ ಹೆಸರಿನಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಬೇಕು ಎಂದು ಪಟ್ಟು ಹಿಡಿಯಿತು. ಇದು ಸಾಧ್ಯವಾಗದಿದ್ದಾಗ 481 ಅಭ್ಯರ್ಥಿಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಇಲಾಖೆ ತಡೆಹಿಡಿದು, ಉಳಿದ ಅಭ್ಯರ್ಥಿಗಳ ನೇಮಕಾತಿಯನ್ನು ಪೂರ್ಣಗೊಳಿಸಿತ್ತು.

ಸುಪ್ರೀಂ ಕೋರ್ಟ್ ಮತ್ತು ಕೆಎಸ್‌ಎಟಿ ಮೆಟ್ಟಿಲೇರಿದ್ದ ಅಭ್ಯರ್ಥಿಗಳು

ಇಲಾಖೆಯ ಈ ಹಠಾತ್ ನಿರ್ಧಾರವನ್ನು ಪ್ರಶ್ನಿಸಿ ನೊಂದ ಮಹಿಳಾ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KSAT), ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವರೆಗೂ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ವಿವಾದವನ್ನು ಕೆಎಸ್‌ಎಟಿ (KSAT) ನಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಅಂತಿಮ ಆದೇಶ ನೀಡಿತ್ತು. ಅದರಂತೆ ಸುದೀರ್ಘ ವಿಚಾರಣೆ ನಡೆಸಿದ ಕೆಎಸ್‌ಎಟಿ, 2026 ಏಪ್ರಿಲ್ 30 ರಂದು ಶಿಕ್ಷಕಿಯರ ಪರವಾಗಿ ಮಹತ್ವದ ತೀರ್ಪು ನೀಡಿತು ಹಾಗೂ ತಡೆಹಿಡಿಯಲಾದ ಅಭ್ಯರ್ಥಿಗಳ ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಿತು.

ಕೆಎಸ್‌ಎಟಿ ತೀರ್ಪನ್ನು ಅನುಸರಿಸಿ, ಶಾಲಾ ಶಿಕ್ಷಣ ಇಲಾಖೆಯು 2026 ಮೇ 16ರಂದು ಈ 481 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಈ ಅಂತಿಮ ಆಯ್ಕೆ ಪಟ್ಟಿಯನ್ನು ವಿರೋಧಿಸಿ ಮತ್ತೆ ಕೆಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ಮೇಲೆ ‘ಯಥಾಸ್ಥಿತಿ’ (Status Quo) ಕಾಯ್ದುಕೊಳ್ಳುವಂತೆ ಆದೇಶ ನೀಡಿತು. ಕೋರ್ಟ್‌ನ ಈ ಆದೇಶಕ್ಕೆ ಗೌರವ ನೀಡಿ ಇಲಾಖೆಯು ತಾನು ನೀಡಿದ್ದ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿತ್ತು.

15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಸುದೀರ್ಘ ಇತಿಹಾಸ

ಈ ಇಡೀ ವಿವಾದದ ಹಿನ್ನೆಲೆ ನೋಡುವುದಾದರೆ, ರಾಜ್ಯ ಸರ್ಕಾರವು 2022-23ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗಾಗಿ ಒಟ್ಟು 15,000 ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ಬೃಹತ್ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಇಲಾಖೆಯು ಒಟ್ಟು 13,352 ಅಭ್ಯರ್ಥಿಗಳನ್ನು ಯಶಸ್ವಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ಈ 481 ಅಭ್ಯರ್ಥಿಗಳ ಪ್ರಮಾಣಪತ್ರದ ಗೊಂದಲದಿಂದಾಗಿ ಇಡೀ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇದೀಗ ಹೈಕೋರ್ಟ್‌ನ ತಾತ್ಕಾಲಿಕ ಮಧ್ಯಂತರ ಆದೇಶದ ಮೇರೆಗೆ 341 ಶಿಕ್ಷಕಿಯರು ಕೊನೆಗೂ ಶಾಲೆಗೆ ಪ್ರವೇಶಿಸುವಂತಾಗಿದ್ದು, ಇಲಾಖೆಯ ಅಂತಿಮ ತೀರ್ಪಿನ ಮೇಲೆ ಇವರ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.