- Home
- Jobs
- State Government Jobs
- Govt Jobs: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 6 ತಿಂಗಳಲ್ಲಿ 72,186 ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ!
Govt Jobs: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: 6 ತಿಂಗಳಲ್ಲಿ 72,186 ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶ!
ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದೇಶಿಸಿದೆ. ಈ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಕಾಲಮಿತಿ ನಿಗದಿಪಡಿಸಲಾಗಿದೆ.

ಬೆಂಗಳೂರು (ಜೂ.25): ಸರ್ಕಾರಿ ಕೆಲಸಕ್ಕಾಗಿ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,186 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮುಂದಿನ 6 ತಿಂಗಳೊಳಗೆ ಭರ್ತಿ ಮಾಡುವಂತೆ ಆದೇಶ ಹೊರಡಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಮೇಲುಸ್ತುವಾರಿ ಜವಾಬ್ದಾರಿಯನ್ನು ನೀಡಲಾಗಿದೆ.
ಹುದ್ದೆಗಳ ವಿವರ ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ:
ಸರ್ಕಾರದ ನಡವಳಿಗಳ ಪ್ರಕಾರ, 2023-24ನೇ ಸಾಲಿನಿಂದ ಇಲ್ಲಿಯವರೆಗೆ ಖಾಲಿ ಇರುವ ಹುದ್ದೆಗಳ ಪೈಕಿ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಈಗಾಗಲೇ ಸಹಮತಿ ನೀಡಿದೆ. ಅಲ್ಲದೆ, ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32,177 ಹುದ್ದೆಗಳ ಪೈಕಿ ಶೇಕಡಾ 80ರಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಹಸಿರು ನಿಶಾನೆ ಸಿಕ್ಕಿದೆ.
ಟೈಮ್‌ಲೈನ್ ಫಿಕ್ಸ್: 6 ತಿಂಗಳಲ್ಲಿ ಕೈಗೆ ಸಿಗುತ್ತೆ ಅಪಾಯಿಂಟ್‌ಮೆಂಟ್ ಆರ್ಡರ್!
ನೇಮಕಾತಿಯಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಡೆಡ್‌ಲೈನ್ ನೀಡಿದೆ:
ಮುಂದಿನ 2 ತಿಂಗಳಲ್ಲಿ: ಎಲ್ಲಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ (Notification) ಹೊರಡಿಸಬೇಕು.
ಮುಂದಿನ 4 ತಿಂಗಳಲ್ಲಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಬೇಕು.
ಮುಂದಿನ 6 ತಿಂಗಳಲ್ಲಿ: ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 'ನೇಮಕಾತಿ ಆದೇಶ' (Appointment Order) ನೀಡಬೇಕು.
ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ:
ಒಟ್ಟು 51 ಇಲಾಖೆಗಳಲ್ಲಿ ಈ ನೇಮಕಾತಿ ನಡೆಯಲಿದ್ದು, ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ 17 ಇಲಾಖೆಗಳ ಜವಾಬ್ದಾರಿಯನ್ನು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಇನ್ನುಳಿದ ಗೃಹ, ಶಿಕ್ಷಣ, ಆರೋಗ್ಯ, ಅರಣ್ಯ ಸೇರಿದಂತೆ 34 ಇಲಾಖೆಗಳ ಜವಾಬ್ದಾರಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.
ಚುನಾವಣೆಗಳು ಮುಗಿದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ಸರ್ಕಾರ, ನಿರುದ್ಯೋಗ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದೆ. ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಇಂದಿನಿಂದಲೇ ಸಿದ್ಧತೆ ಆರಂಭಿಸುವುದು ಉತ್ತಮ.

