13,351 ಪದವೀಧರ ಶಿಕ್ಷಕರ ನೇಮಕ ಪಟ್ಟಿ ಪ್ರಕಟ
ಜೂನ್ ವೇಳೆಗೆ ಹೊಸ ಶಿಕ್ಷಕರು ಕರ್ತವ್ಯಕ್ಕೆ, 8376 ಮಹಿಳೆಯರು, 4973 ಪುರುಷರ ನೇಮಕ, ಮೂವರು ಲಿಂಗತ್ವ ಅಲ್ಪಸಂಖ್ಯಾತರಿಗೂ ನೌಕರಿ.
ಬೆಂಗಳೂರು(ಮಾ.09): ಸರ್ಕಾರಿ ಶಾಲೆಗಳಿಗೆ ಪದವೀಧರ (6ರಿಂದ 8ನೇ ತರಗತಿ) ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ 4,193 ಮಂದಿ ಸೇರಿದಂತೆ ಒಟ್ಟು 13,351 ಶಿಕ್ಷಕರ ಅಂತಿಮ ಆಯ್ಕೆ ಪಟ್ಟಿಯನ್ನು ಬುಧವಾರ ಶಿಕ್ಷಣ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಪೈಕಿ 8376 ಮಹಿಳೆಯರು, 4973 ಪುರುಷರು ಮತ್ತು ಮೂವರು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಈ ಎಲ್ಲ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಕರ್ತವ್ಯಕ್ಕೆ ನಿಯೋಜಿಸಲು ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ನಾಳೆಯಿಂದ 2ND PU EXAM: 7.26 ಲಕ್ಷ ವಿದ್ಯಾರ್ಥಿಗಳ ನೋಂದಣಿ
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಚ್ ಆದೇಶದಂತೆ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ಮಹಿಳಾ ಅಭ್ಯರ್ಥಿಗಳನ್ನೂ ಪರಿಗಣಿಸಿ ಫೆ.27ರಂದು ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ನಂತರ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಇದೀಗ 13,351 ಮಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ಎಲ್ಲ ಮೂಲ ದಾಖಲೆಗಳ ಪರಿಶೀಲನೆ ಸೇರಿದಂತೆ ಇನ್ನಿತರೆ ಪ್ರಕ್ರಿಯೆಗಳನ್ನೂ ಆದಷ್ಟುಬೇಗ ಪೂರ್ಣಗೊಳಿಸಿ ಮೇ-ಜೂನ್‌ನಿಂದ ಆರಂಭವಾಗುವ ಮುಂದಿನ ಶೈಕ್ಷಣಿಕ ಸಾಲಿನ ವೇಳೆಗೆ ಶಾಲೆಗಳಿಗೆ ಕರ್ತವ್ಯಕ್ಕೆ ನಿಯೋಜಿಸಲು ಕ್ರಮ ವಹಿಸಲಾಗುವುದು ಎಂದರು.
ಕಳೆದ ವರ್ಷವೇ ಪ್ರಕಟಿಸಿದ್ದ ತಾತ್ಕಾಲಿಕ ಪಟ್ಟಿಯಲ್ಲಿ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ಪರಿಗಣಿಸಿರಲಿಲ್ಲ. ಹಾಗಾಗಿ ಆ ಅಭ್ಯರ್ಥಿಗಳು ಹೈಕೋರ್ಚ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಆ ಮಹಿಳಾ ಅಭ್ಯರ್ಥಿಗಳನ್ನೂ ತಾತ್ಕಾಲಿಕ ಪಟ್ಟಿಗೆ ಪರಿಗಣಿಸುವಂತೆ ಆದೇಶಿಸಿ ಹಿಂದಿನ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿತ್ತು. 15 ಸಾವಿರ ಶಿಕ್ಷಕ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ 13,351 ಮಾತ್ರ ನೇಮಕವಾಗಿದ್ದಾರೆ. ಉಳಿದ 1649 ಹುದ್ದೆಗಳು ಖಾಲಿ ಉಳಿದಿದ್ದು, ಅವುಗಳಿಗೆ ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಭರ್ತಿ ಮಾಡಬೇಕಾಗಿದೆ.