ನವದೆಹಲಿ[ಜೂ.11]: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಹೇಳಿರುವುದು ಹಲವು ಕ್ರಿಕೆಟಿಗರಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. 19 ವರ್ಷಗಳ ಕಾಲ ಕ್ರಿಕೆಟ್ ವೃತ್ತಿಜೀವನ ನಡೆಸಿದ್ದ ಯುವಿಗೆ ವಿದಾಯದ ಪಂದ್ಯ ಏರ್ಪಡಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಗ್ರಹ ಕೇಳಿ ಬಂದಿವೆ. 

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಕೂಡಾ ಟ್ವೀಟ್ ಮಾಡಿ, ಇದಕ್ಕಿಂತ ಒಳ್ಳೆಯ ವಿದಾಯಕ್ಕೆ ಅರ್ಹತೆಯಿತ್ತು ಎಂದು ಟ್ವೀಟ್ ಮಾಡಿದ್ದಾರೆ. ರೋಹಿತ್ ಟ್ವೀಟ್ ಮಾಡಿದ ಕೆಲ ಹೊತ್ತಿನಲ್ಲೇ #YuviDeservesProperFarewell ಎನ್ನುವ ಹ್ಯಾಷ್’ಟ್ಯಾಗ್ ಟ್ರೆಂಡಿಂಗ್ ಆಗಿತ್ತು. 

#BIGBREAKING ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಯುವಿ ಗುಡ್‌ಬೈ...!

2000ನೇ ಇಸವಿಯಲ್ಲಿ ಕೀನ್ಯಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ 304 ಏಕದಿನ, 40 ಟೆಸ್ಟ್ ಹಾಗೂ 58 ಟಿ20 ಪಂದ್ಯಗಳನ್ನಾಡಿ, ಒಟ್ಟಾರೆ 11,778 ರನ್ ಬಾರಿಸಿದ್ದಾರೆ. ಇದರಲ್ಲಿ 17 ಶತಕ ಹಾಗೂ 71 ಅರ್ಧಶತಕಗಳು ಸೇರಿವೆ.

ಒಂದು ವೇಳೆ ಯೋ-ಯೋ ಟೆಸ್ಟ್ ಪಾಸ್ ಮಾಡದಿದ್ದರೆ, ಒಂದು ವಿದಾಯದ ಪಂದ್ಯ ಆಯೋಜಿಸುವುದಾಗಿ ಯುವಿಗೆ ಬಿಸಿಸಿಐ ತಿಳಿಸಿತ್ತಂತೆ. ಆಗ ಯುವಿ, ಒಂದು ವೇಳೆ ನಾನು ಯೋ-ಯೋ ಟೆಸ್ಟ್ ಫೇಲಾದರೆ ಮನೆಗೆ ಹೋಗುತ್ತೇನೆ ಹೊರತು, ವಿದಾಯದ ಪಂದ್ಯ ಆಡುವುದಿಲ್ಲ ಎಂದಿದ್ದರಂತೆ. ವಿಪರ್ಯಾಸವೆಂದರೆ ಯುವಿ ಯೋ-ಯೋ ಟೆಸ್ಟ್ ಪಾಸ್ ಮಾಡಿದರು ತಂಡದಲ್ಲಿ ಸ್ಥಾನ ಸಿಗಲಿಲ್ಲ ಎನ್ನುವುದು ಕಟು ಸತ್ಯ.