ಪಂಜಾಬ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಯುವ ಕ್ರಿಕೆಟಿಗನೊಬ್ಬ ಆಟದ ಮಧ್ಯೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಸಿಕ್ಸರ್ ಹೊಡೆದ ಕೆಲವೇ ಕ್ಷಣಗಳಲ್ಲಿ ಆತ ಮೃತಪಟ್ಟಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಎಳೆ ಪ್ರಾಯದ ಯುವಕ ಯುವತಿಯರು ಹಠಾತ್ ಕುಸಿದು ಬಿದ್ದು, ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರತಿದಿನವೂ ಒಂದಲ್ಲ ಒಂದು ಕಡೆ ಇಂತಹ ಘಟನೆಗಳು ಕೇಳಿ ಬರುತ್ತಿದ್ದು, ಎಲ್ಲರೂ ಈ ಬದುಕಿ ಬಾಳಬೇಕಾದ ಎಳೆಪ್ರಾಯದ ಯುವಕ ಯುವತಿಯರ ಹಠಾತ್ ಸಾವು ಕಂಡು ದಿಗ್ಬ್ರಮೆ ಪಡುತ್ತಿದ್ದಾರೆ. ನಿನ್ನೆಯಷ್ಟೇ ಖ್ಯಾತ ನಟಿ ಶೆಫಾಲಿ ಜರಿವಾಲಾ ಹಠಾತ್ ನಿಧನ ಸಿನಿಮಾರಂಗವನ್ನು ಆಘಾತಕ್ಕೀಡು ಮಾಡಿದೆ. ಹೀಗಿರುವಾಗ ಯುವ ಕ್ರಿಕೆಟಿಗನೋರ್ವ ಮೈದಾನದಲ್ಲೇ ಆಟವಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಂಜಾಬ್‌ನ ಫಿರೋಜಾಪುರ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟರ್ ಸಾವಿಗೂ ಮೊದಲು ಬ್ಯಾಟ್ ಬೀಸಿ 6 ಹೊಡೆದಿದ್ದು, ಕ್ಷಣದಲ್ಲಿ ಆತ ಕುಸಿದು ಬಿದ್ದಿದ್ದು, ಆತನ ಜೀವವೇ ಹೊರಟು ಹೋಗಿದೆ. ವೀಡಿಯೋದಲ್ಲಿ ಬ್ಯಾಟ್ಸ್‌ಮನ್ ಆತ ವೇಗವಾಗಿ ಬರುತ್ತಿರುವ ಚೆಂಡನ್ನು ಬೀಸಿ ಹೊಡೆದಿದ್ದು, ಇದಾಗಿ ಕ್ಷಣಗಳಲ್ಲಿ ಆತ ಕುಸಿದು ಬಿದ್ದಿದ್ದಾನೆ. ಆತ ಅಲ್ಲೇ ಪ್ರಜ್ಞಾಶೂನ್ಯನಾಗಿದ್ದು, ಉಳಿದ ಆಟಗಾರರು ಆತನ ಬಳಿ ಓಡಿ ಬರುವುದನ್ನು ಕಾಣಬಹುದು. ಅಲ್ಲದೇ ಆತನಿಗೆ ಸಿಪಿಆರ್ ಕೂಡ ಮಾಡಿದ್ದಾರೆ. ಆದರೆ ಆತನಿಗೆ ಮರಳಿ ಪ್ರಜ್ಞೆ ಬಂದಿಲ್ಲ, ಆತ ಸ್ಥಳದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಸಂತ್ರಸ್ತ ಯುವಕನನ್ನು ಹರ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಫಿರೋಜಾಪುರ್‌ನ ಡಿಎವಿ ಸ್ಕೂಲ್‌ನಲ್ಲಿ ಕ್ರಿಕೆಟ್ ಮ್ಯಾಚ್ ಆಟವಾಡುತ್ತಿದ್ದ.
ಇದಕ್ಕೂ ಮೊದಲು, ಜೂನ್ 2024 ರಲ್ಲಿ, ಮುಂಬೈನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ 42 ವರ್ಷದ ವ್ಯಕ್ತಿಯೊಬ್ಬ ಕ್ರಿಕೆಟ್ ಪಂದ್ಯದ ಸಮಯದಲ್ಲಿಯೇ ಸಾವನ್ನಪ್ಪಿದ್ದರು. ನಗರದ ಕಾಶ್ಮೀರ ಪ್ರದೇಶದ ತೋಟದ ಮನೆಯಲ್ಲಿ ಕಂಪನಿಯೊಂದು ಆಯೋಜಿಸಿದ್ದ ಪಂದ್ಯದಲ್ಲಿ ಸಿಕ್ಸರ್ ಹೊಡೆದ ನಂತರ ರಾಮ್ ಗಣೇಶ್ ತೇವರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ತಕ್ಷಣವೇ ಕುಸಿದು ಬಿದ್ದಿದ್ದರು. ಕೂಡಲೇ ತೇವರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರು ಅಲ್ಲಿಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ಹೃದಯಾಘಾತದಿಂದ ಜನರು ಸಾವನ್ನಪ್ಪಿದ ಹಲವಾರು ಘಟನೆಗಳು ವರದಿಯಾಗಿವೆ. 20 ರ ಹರೆಯದ ಜನರು ಸಹ ಇದೇ ರೀತಿಯ ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ್ದಾರೆ. ಹೀಗಾಗಿ ಯುವ ಸಮೂಹದ ಜನರು ಕೂಡ ಸಾವು ಯಾವಾಗ ಬೇಕಾದರೂ ಸಂಭವಿಸಬಹುದು ಎಂದು ಆತಂಕದಲ್ಲೇ ಬದುಕುವಂತಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅರ್ಹ ವೈದ್ಯರ ಸಮಾಲೋಚನೆ ಪಡೆಯಲು ನಿಯಮಿತವಾಗಿ ಪೂರ್ಣ ದೇಹದ ತಪಾಸಣೆಗೆ ಒಳಗಾಗುವುದು ಸೂಕ್ತವಾಗಿದೆ.


