Asianet Suvarna News Asianet Suvarna News

6 ರೆಸ್ಲರ್ಸ್‌ಗೆ ಸ್ಪೆಷಲ್‌ ಎಂಟ್ರಿ: ಯೋಗೇಶ್ವರ್‌ ದತ್‌ ಕಿಡಿ!

6 ಕುಸ್ತಿಪಟುಗಳ ಮೇಲೆ ತಿರುಗಿಬಿದ್ದ ಯೋಗೇಶ್ವರ್ ದತ್
ಏಷ್ಯನ್‌ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್‌ನಿಂದ 6 ಕುಸ್ತಿಪಟುಗಳಿಗೆ ವಿನಾಯಿತಿ
ಇದು ಅನ್ಯಾಯ, ಈ ಬಗ್ಗೆ ಇತರರು ಧ್ವನಿ ಎತ್ತಬೇಕು ಎಂದು ದತ್ ಕರೆ

Yogeshwar Dutt opposes Olympic panels decision on trials for six protesting wrestlers kvn
Author
First Published Jun 24, 2023, 8:49 AM IST

ನವದೆಹಲಿ(ಜೂ.24): ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಹೋರಾಟ ನಡೆಸುತ್ತಿದ್ದ 6 ಪ್ರಮುಖ ಕುಸ್ತಿಪಟುಗಳಿಗೆ ಏಷ್ಯನ್‌ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿರುವುದಕ್ಕೆ ಮತ್ತಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್‌ ದತ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದರ ವಿರುದ್ಧ ಧ್ವನಿ ಎತ್ತುವಂತೆ ಇತರ ಕುಸ್ತಿಪಟುಗಳಿಗೆ ಕರೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್ ಫೋಗಟ್, ಭಜರಂಗ್, ಸಾಕ್ಷಿ ಮಲಿಕ್, ಸಂಗೀತಾ ಫೋಗಟ್, ಸತ್ಯವರ್ತ್ ಕಡಿಯಾನ್ ಹಾಗೂ ಜಿತೇಂದರ್ ಕಿನ್ಹಗೆ ಗುರುವಾರ ಡಬ್ಲ್ಯುಎಫ್‌ಐ ತಾತ್ಕಾಲಿಕ ಆಡಳಿತ ಸಮಿತಿಯು ಪ್ರಾಥಮಿಕ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿತ್ತು. ಅಲ್ಲದೆ ಟ್ರಯಲ್ಸ್‌ನ ವಿಜೇತರ ವಿರುದ್ಧ ಗೆದ್ದರೆ ಸಾಕು ಎರಡೂ ಕೂಟಕ್ಕೆ ಅರ್ಹತೆ ನೀಡುವುದಾಗಿ ಘೋಷಿಸಿತ್ತು. ಇದನ್ನು ವಿರೋಧಿಸಿರುವ ದತ್‌, "ತಾತ್ಕಾಲಿಕ ಸಮಿತಿ ಯಾವ ಮಾನದಂಡವನ್ನಿಟ್ಟು 6 ಕುಸ್ತಿಪಟುಗಳಿಗೆ ಈ ಸವಲತ್ತು ನೀಡಿದೆ ಎಂದು ಗೊತ್ತಾಗುತ್ತಿಲ್ಲ. ರವಿ ದಹಿಯಾ, ದೀಪಕ್‌ ಪೂನಿಯಾ, ಅನ್ಶು ಮಲಿಕ್‌, ಸೋನಂ ಮಲಿಕ್‌ ಸೇರಿ ಹಲವು ಸಾಧಕರಿದ್ದಾರೆ. ಆದರೆ ಈ 6 ಮಂದಿಗೆ ಮಾತ್ರ ವಿನಾಯಿತಿ ಏಕೆ?. ಇದು ಖಂಡಿತಾ ತಪ್ಪು. ಈ ಮೊದಲು ಇಂತದ್ದು ನಡೆದಿರಲಿಲ್ಲ" ಎಂದು ವಿಡಿಯೋ ಮೂಲಕ ಕಿಡಿಕಾರಿದ್ದಾರೆ.

"ಈ ಪಕ್ಷಪಾತದ ಬಗ್ಗೆ ಇತರೆಲ್ಲಾ ಕುಸ್ತಿಪಟುಗಳು ಈಗ ಪ್ರತಿಭಟನೆ ನಡೆಸಬೇಕು. ಪ್ರಧಾನಿ, ಗೃಹ ಸಚಿವ, ಕ್ರೀಡಾ ಸಚಿವರಿಗೆ ಪತ್ರ ಬರೆಯಬೇಕು. ಭಾರತದ ಕುಸ್ತಿ ಇತಿಹಾಸದಲ್ಲೇ ಈ ರೀತಿ ನಡೆದಿರಲಿಲ್ಲ. ಮೊದಲೆಲ್ಲಾ ವಿಶೇಷ ಸಾಧಕರಿಗೆ ವಿನಾಯಿತಿ ನೀಡುತ್ತಿದ್ದರೂ ಹೀಗೆ ಎಲ್ಲರಿಗೂ ಸಿಗುತ್ತಿರಲಿಲ್ಲ. ಕುಸ್ತಿಪಟುಗಳ ಪ್ರತಿಭಟನೆ ಲೈಂಗಿಕ ಕಿರುಕುಳದ ವಿರುದ್ಧವಾಗಿತ್ತೋ ಅಥವಾ ಇಂತಹ ವಿನಾಯಿತಿಗಾಗಿತ್ತೋ" ಎಂದು ದತ್‌ ಪ್ರಶ್ನಿಸಿದ್ದಾರೆ.

ಯೋಗೇಶ್ವರ್‌ ದತ್‌ ಬ್ರಿಜ್‌ಭೂಷಣ್‌ರ ಚಮಚ: ವಿನೇಶ್‌ ಕಿಡಿ!

ಕುಸ್ತಿಪಟುಗಳ ಟ್ರಯಲ್ಸ್‌ ವಿನಾಯಿತಿಯನ್ನು ಟೀಕಿಸಿರುವ ಯೋಗೇಶ್ವರ್‌ ವಿರುದ್ಧ ವಿನೇಶ್‌ ಪೋಗಟ್‌ ಹರಿಹಾಯ್ದಿದ್ದು, ಯೋಗೇಶ್ವರ್ ಯಾವತ್ತೂ ಬ್ರಿಜ್‌ಭೂಷಣ್‌ರ "ಚಮಚ" ಆಗೇ ಉಳಿಯಲಿದ್ದಾರೆ ಎಂದು ಕೀಳು ಪದಗಳ ಬಳಕೆ ಮಾಡಿದ್ದಾರೆ.

"ಯೋಗೇಶ್ವರ್‌ ಬ್ರಿಜ್‌ಭೂಷಣ್‌ರ ಎಂಜಲು ತಿನ್ನುತ್ತಿದ್ದಾರೆ ಎಂದು ಇಡೀ ಕುಸ್ತಿ ಜಗತ್ತಿಗೆ ಅರ್ಥವಾಗಿದೆ. ಸಮಾಜದ ಅನ್ಯಾಯದ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ಯೋಗೇಶ್ವರ್ ಸಹಿಸುವುದಿಲ್ಲ. ಯೋಗೇಶ್ವರ್‌ ಬ್ರಿಜ್‌ರ ಪಾದ ನೆಕ್ಕಿದ್ದವ ಎನ್ನುವುದನ್ನು ಕುಸ್ತಿ ಜಗತ್ತು ಎಂದೂ ಮರೆಯುವುದಿಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತಿ​ಭ​ಟನೆಯಲ್ಲಿ ತೊಡ​ಗಿ​ದ್ದ 6 ಕುಸ್ತಿ​ಪ​ಟು​ಗ​ಳಿಗೆ ಸ್ಪೆಷಲ್‌ ಎಂಟ್ರಿ?

ಲೈಂಗಿಕ ಕಿರುಕುಳ ಪ್ರಕರಣದ ತನಿಖೆಗೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ನೇಮಿಸಿದ್ದ ಸಮಿತಿಯಲ್ಲಿದ್ದ ಯೋಗೇಶ್ವರ್‌ರಿಂದ ಕುಸ್ತಿಪಟುಗಳಿಗೆ ಮೋಸವಾಗಿದೆ ಎಂದು ವಿನೇಶ್ ಗಂಭೀರ ಆರೋಪ ಮಾಡಿದ್ದಾರೆ. "ಲೈಂಗಿಕ ಕಿರುಕುಳದ ಬಗ್ಗೆ ಕುಸ್ತಿಪಟು ತನಿಖಾ ಸಮಿತಿ ಮುಂದೆ ವಿವರಿಸುವಾಗ ಯೋಗೇಶ್ವರ್‌ ನಗುತ್ತಿದ್ದರು. ಲೈಂಗಿಕ ಕಿರುಕುಳ ನಡೆದಿದ್ದರೆ ದೊಡ್ಡ ವಿಷಯ ಮಾಡಬೇಡಿ. ನಿಮಗೇನಾದರು ಬೇಕಿದ್ದರೆ ನನ್ನಲ್ಲಿ ಕೇಳಿ ಎಂದು ಕುಸ್ತಿಪಟುಗಳಿಗೆ ಅವರು ಆಫರ್‌ ನೀಡಿದ್ದರು. ಕುಸ್ತಿಪಟುಗಳ ಕುಟುಂಬಸ್ಥರಿಗೂ ಕರೆಮಾಡಿ ಸುಮ್ಮನಾಗುವಂತೆ ಹೇಳಿದ್ದರು" ಎಂದು ದೂರಿದ್ದಾರೆ.

Follow Us:
Download App:
  • android
  • ios