ಲಂಡನ್‌(ಮೇ.15): ಐಸಿಸಿ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಟೂರ್ನಿ ವೇಳೆ ಭ್ರಷ್ಟಾಚಾರ ತಡೆಯಲು ಹೊಸ ಯೋಜನೆ ರೂಪಿಸಿದೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ 10 ತಂಡಗಳಿಗೆ ಪ್ರತ್ಯೇಕ ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಯನ್ನು ಐಸಿಸಿ ನೇಮಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಧೋನಿ ವಿರುದ್ಧ ತಿರುಗಿ ಬಿದ್ರಾ ಕುಲ್ದೀಪ್ ಯಾದವ್?

ಅಭ್ಯಾಸ ಪಂದ್ಯದಿಂದ ಹಿಡಿದು ಟೂರ್ನಿ ಕೊನೆಗೊಳ್ಳುವ ವರೆಗೂ ಆ ಅಧಿಕಾರಿ ತಂಡದೊಂದಿಗೆ ಇರಲಿದ್ದಾರೆ. ಈ ಮೊದಲು ಪಂದ್ಯಗಳು ನಡೆಯುವ ಸ್ಥಳಗಳಲ್ಲಿ ಅಧಿಕಾರಿಗಳು ಇರುತ್ತಿದ್ದರು. ಆದರೆ ಈ ಬಾರಿ ಅಧಿಕಾರಿಗಳು ತಂಡದೊಂದಿಗೆ ಪ್ರಯಾಣಿಸಲಿದ್ದು, ಆಟಗಾರರು ಉಳಿದುಕೊಳ್ಳುವ ಹೋಟೆಲ್‌ನಲ್ಲೇ ಉಳಿದುಕೊಳ್ಳಲಿದ್ದಾರೆ. ಪಂದ್ಯಗಳ ನಡುವೆ ಅಭ್ಯಾಸ, ಪತ್ರಿಕಾಗೋಷ್ಠಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವೇಳೆಯೂ ಆಟಗಾರರ ಜತೆ ಅಧಿಕಾರಿ ತೆರಳಲಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಆಟಗಾರರನ್ನು ಭೇಟಿ ಮಾಡುವುದನ್ನು ತಪ್ಪಿಸಲು ಐಸಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಲಾಗಿದೆ.