ಬೆಂಗಳೂರು(ಸೆ.02]: ‘‘ನನ್ನ ಗೆಲುವಿನ ಓಟ ನಿಲ್ಲುವುದಿಲ್ಲ. ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುವ ಗುರಿ ನನಗಿದೆ. ಪ್ರಮುಖವಾಗಿ ಒಲಿಂಪಿಕ್‌ ಸ್ವರ್ಣ ಪದಕ ಗೆಲ್ಲುವ ಆಸೆಯಿದೆ. ಅದಕ್ಕಾಗಿ ಹೆಚ್ಚು ಶ್ರಮವಹಿಸುತ್ತಿದ್ದೇನೆ,’’ ಎಂದು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು ಹೇಳಿದ್ದಾರೆ

ಬ್ಯಾಡ್ಮಿಂಟನ್‌ಗೆ ಬರದಿದ್ದರೆ ನಾನು ವೈದ್ಯೆಯಾಗಿರುತ್ತಿದೆ. ಆದರೆ, ಅದಕ್ಕಿಂತ ಬ್ಯಾಡ್ಮಿಂಟನ್‌ನಲ್ಲಿ ಹೆಚ್ಚು ಸಂತಸ ಕಾಣುತ್ತಿದ್ದೇನೆ ಎಂದು ಪಿ ವಿ ಸಿಂಧು ಹೇಳಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ‘ಮೆಜೆಸ್ಟೈನ್‌ ಸ್ಪೋರ್ಟ್ಸ್’ ಕ್ಲಬ್‌ನಲ್ಲಿ ಭಾನುವಾರ ನಡೆದ ಕಾರ‍್ಯಕ್ರಮದಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಸಿಂಧು ಹಾಗೂ ಕೆ.ಶ್ರೀಕಾಂತ್‌ ಭಾಗವಹಿಸಿದ್ದರು.

ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಂಧು, ಅಭಿಮಾನಿಗಳ ಜತೆ ವಿಶ್ವ ಚಾಂಪಿಯನ್‌ಷಿಪ್‌ನ ಗೆಲುವಿನ ಅನುಭವ ಹಂಚಿಕೊಂಡರು. ಶ್ರೀಕಾಂತ್‌ ಕೂಡ ಯುವ ಪ್ರತಿಭೆಗಳಿಗೆ ಯಶಸ್ಸಿನ ಸಲಹೆ ನೀಡಿದರು. ‘‘ಕ್ರೀಡಾ ಪ್ರೇಮಿಗಳ ಬೆಂಬಲದಿಂದಾಗಿ ವಿಶ್ವಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು. ಕ್ರೀಡಾಪಟುವಿಗೆ ದೊಡ್ಡ ಟೂರ್ನಿಯ ಪದಕ ಗೆಲ್ಲುವುದಕ್ಕಿಂತ ಸಂತಸದ ಕ್ಷಣ ಇನ್ನೊಂದು ಇರುವುದಿಲ್ಲ. ಅದೇ ರೀತಿ ಕಳೆದ ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡಿರುವುದು ಖುಷಿ ನೀಡಿದೆ’’ ಎಂದರು.

ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು

‘‘ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ನನಗೆ ಪೋಷಕರ ಪ್ರೋತ್ಸಾಹ ಸಾಕಷ್ಟು ಪ್ರಮಾಣದಲ್ಲಿ ದೊರೆಯಿತು. ಅದೇ ರೀತಿ ಹೊಸ ಪೀಳಿಗೆಯ ಪ್ರತಿಭೆಗಳು ಬೆಳಕಿಗೆ ಬರಬೇಕಾದರೆ ಪೋಷಕರ ಬೆಂಬಲ ಅಗತ್ಯ. ಪ್ರಸ್ತುತ ದೇಶದಲ್ಲಿ ಕ್ರೀಡೆಗೆ ಹೆಚ್ಚು ಮಾನ್ಯತೆ ದೊರೆಯುತ್ತಿದೆ. ಅದು ಇನ್ನಷ್ಟುಹೆಚ್ಚಾಗಲಿ,’’ ಎಂದರು.

ಉತ್ತಮ ಕೋಚ್‌ ಬೇಕು:

ಕಿದಂಬಿ ಶ್ರೀಕಾಂತ್‌ ಮಾತನಾಡಿ ‘‘ದೊಡ್ಡ ಪ್ರಮಾಣದ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸುವುದರಿಂದ ಮಾತ್ರ ಬ್ಯಾಡ್ಮಿಂಟನ್‌ ಹೆಚ್ಚು ಬೆಳೆಯುತ್ತದೆ ಎನ್ನುವುದು ತಪ್ಪು ತಿಳಿವಳಿಕೆ. ಹೆಚ್ಚು ಅನುಭವ ಇರುವ ಕೋಚ್‌ ಹಾಗೂ ಉತ್ತಮ ತರಬೇತಿಯಿಂದ ಮಾತ್ರ ಬ್ಯಾಡ್ಮಿಂಟನ್‌ ಪ್ರತಿಭೆಗಳ ಸಂಖ್ಯೆ ಹೆಚ್ಚುತ್ತದೆ.’’ ಎಂದರು.