ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು
ಭಾರತದ ನಂ.1 ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ ಸಿಂಧು, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಇದರೊಂದಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬಾಸೆಲ್[ಆ.25]: ಕಳೆದೆರಡು ವರ್ಷ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲಲು ವಿಫಲವಾಗಿದ್ದ, ಪಿ.ವಿ ಸಿಂಧು ಕೊನೆಗೂ ಚಿನ್ನ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ನಜೋಮಿ ಒಕೊಹರ ಮಣಿಸಿದ ಸಿಂಧು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್’ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಶಟ್ಲರ್ ಎನ್ನುವ ದಾಖಲೆ ಬರೆದರು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿಂಧು ತಾಯಿಗೆ ಈ ಪದಕವನ್ನು ಅರ್ಪಿಸಿದ್ದಾರೆ.
ಏಕಪಕ್ಷೀಯವಾಗಿ ನಡೆದ ಕಾದಾಟದಲ್ಲಿ ಸಿಂಧು 21-7, 21-7 ನೇರ ಗೇಮ್’ಗಳಲ್ಲಿ ಜಯಭೇರಿ ಬಾರಿಸುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವಲ್ಲಿ ಸಫಲರಾದರು. 2017, 2018ರಲ್ಲೂ ಫೈನಲ್ ಪ್ರವೇಶಿಸಿದ್ದ ಸಿಂಧು ಫೈನಲ್’ನಲ್ಲಿ ಮುಗ್ಗರಿಸಿದ್ದರು. 2017ರಲ್ಲಿ ನಜೋಮಿ ಒಕೊಹರ ವಿರುದ್ಧ ಸೋತಿದ್ದ ಸಿಂಧು, 2018ರಲ್ಲಿ ರಿಯೊ ಚಿನ್ನದ ಪದಕ ವಿಜೇತೆ ಕರೋಲಿನಾ ಮರೀನ್ ವಿರುದ್ಧ ಫೈನಲ್’ನಲ್ಲಿ ಸೋತು ರಜತ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
ವಿಶ್ವ ಬ್ಯಾಡ್ಮಿಂಟನ್: ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ ಸಿಂಧುಗೆ ಇನ್ನೂ ಸಮಾಧಾನವಾಗಿಲ್ಲ..!
ಸೆಮಿಫೈನಲ್ ಗೆಲುವಿನ ಬಳಿಕ ಚಿನ್ನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದ ಸಿಂಧು ಕಡೆಗೂ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನದ ಪದಕ ಜಯಿಸಿದ ಬಳಿಕ ಮಾತನಾಡಿದ ಸಿಂಧು, ಕೋಚ್, ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಇದರ ಜತೆಗೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿಂಧು ತಾಯಿ ಪಿ. ವಿಜಯಾ ಅವರಿಗೆ ಈ ಪದಕ ಅರ್ಪಿಸಿದರು.
ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್’ನಲ್ಲಿ ಸಿಂಧು ಸಾಧನೆ:
2013- ಕೋಪನ್’ಹೇಗನ್ ಕಂಚಿನ ಪದಕ
2014-ಗೌಂಜುಗೌ- ಕಂಚಿನ ಪದಕ
2017- ನಾನ್ಜಿಂಗ್- ಬೆಳ್ಳಿ ಪದಕ
2018-ಗ್ಲಾಸ್ಗೋ- ಬೆಳ್ಳಿ
2019- ಬಾಸೆಲ್- ಚಿನ್ನ