ವಿಶ್ವ ಅಥ್ಲೆಟಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ಚಿನ್ನಒಲಿಂಪಿಕ್ಸ್‌ ಬಳಿಕ ವಿಶ್ವ ಕೂಟದಲ್ಲೂ ಚೋಪ್ರಾ ಬಂಗಾರದ ಸಾಧನೆ40 ವರ್ಷದ ಕೂಟದಲ್ಲಿ ಕೊನೆಗೂ ಭಾರತಕ್ಕೆ ಸಿಕ್ತು ಚಿನ್ನದ ಪದಕಕಿಶೋರ್‌ಗೆ 5ನೇ, ಕರ್ನಾಟಕದ ಡಿ.ಪಿ. ಮನುಗೆ 5ನೇ ಸ್ಥಾನ

ಬುಡಾಪೆಸ್ಟ್‌(ಹಂಗೇರಿ): ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌ ಚೋಪ್ರಾರ ಮೇಲೆ ಕೋಟ್ಯಂತರ ಭಾರತೀಯರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಲಿಲ್ಲ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಜಾವೆಲಿನ್‌ ಎಸೆತದಲ್ಲಿ ಚಾಂಪಿಯನ್‌ ಆಟಗಾರ ನೀರಜ್‌ ಐತಿಹಾಸಿಕ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ ಒಂದೇ ಎಸೆತಕ್ಕೆ ಫೈನಲ್‌ ಹಾಗೂ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಪಡೆದುಕೊಂಡಿದ್ದ 25ರ ನೀರಜ್‌, ಭಾನುವಾರ ಮಧ್ಯರಾತ್ರಿ ನಡೆದ ಫೈನಲ್‌ನಲ್ಲಿ 88.17 ಮೀ. ದೂರಕ್ಕೆ ಎಸೆದು ಇತಿಹಾಸ ಸೃಷ್ಟಿಸಿದರು. ಒಲಿಂಪಿಕ್ಸ್‌ ಬಳಿಕ ವಿಶ್ವ ಕೂಟದಲ್ಲೂ ಭಾರತದ ಚಿನ್ನದ ಕೊರತೆಯನ್ನು ನೀಗಿಸಿದರು.

ಜಾವೆಲಿನ್‌ ಫೈನಲ್‌ನಲ್ಲಿ ನೀರಜ್‌ ಜೊತೆ ಕಿಶೋರ್‌ ಜೆನಾ ಹಾಗೂ ಕರ್ನಾಟಕದ ಡಿ.ಪಿ.ಮನು ಕೂಡಾ ಸ್ಪರ್ಧಿಸಿದ್ದರು. ಆದರೆ ಅವರಿಬ್ಬರಿಗೂ ಪದಕ ಕೈಗೆಟುಕಲಿಲ್ಲ. ಮೊದಲ ಎಸೆತವನ್ನು ¶ೌಲ್‌ ಮಾಡಿಕೊಂಡ ನೀರಜ್‌, 2ನೇ ಪ್ರಯತ್ನದಲ್ಲಿ 88.17 ಮೀ. ದೂರ ದಾಖಲಿಸಿ ಅಗ್ರಸ್ಥಾನ ಕಾಯ್ದುಕೊಂಡರು. ಬಳಿಕ 3ನೇ ಪ್ರಯತ್ನದಲ್ಲಿ 86.32 ಮೀ. ದೂರಕ್ಕೆ ಜಾವೆಲಿನ್‌ ಎಸೆದರೂ, ಅಗ್ರಸ್ಥಾನ ಕಳೆದುಕೊಳ್ಳಲಿಲ್ಲ. 4ನೇ ಪ್ರಯತ್ನದಲ್ಲಿ ಜಾವೆಲಿನ್‌ 86.64 ಮೀ. ದೂರದಲ್ಲಿ ಬಿತ್ತು. 5ನೇ ಪ್ರಯತ್ನದಲ್ಲಿ 87.73 ಮೀ. ದೂರ ದಾಖಲಿಸಿದ ಚೋಪ್ರಾ, ಕೊನೆ ಎಸೆತದಲ್ಲಿ 83.98 ಮೀ. ದೂರ ಎಸೆಯಲಷ್ಟೇ ಶಕ್ತರಾದರು.

Scroll to load tweet…

ಚೋಪ್ರಾಗೆ ಕಠಿಣ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಶದ್‌ ನದೀಂ ತಮ್ಮ 3ನೇ ಪ್ರಯತ್ನದಲ್ಲಿ 87.82 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೆಕ್‌ ಗಣರಾಜ್ಯದ ಜಾಕುಬ್‌ ವೆಡ್ಲೆಜ್‌ 86.67 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಗಮನ ಸೆಳೆದ ಕಿಶೋರ್‌, ಮನು

ಫೈನಲ್‌ನಲ್ಲಿ ಕಿಶೋರ್‌ ಹಾಗೂ ಮನು ಪದಕ ಗೆಲ್ಲಲು ವಿಫಲರಾದರೂ, ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದರು. 5ನೇ ಪ್ರಯತ್ನದಲ್ಲಿ 84.77 ಮೀ. ದೂರ ಎಸೆದು ತಮ್ಮ ವೈಯಕ್ತಿಕ ಶ್ರೇಷ್ಠ ದೂರ ದಾಖಲಿಸಿದ ಕಿಶೋರ್‌ 5ನೇ ಸ್ಥಾನ ಪಡೆದುಕೊಂಡರೆ, ಮನು 6ನೇ ಪ್ರಯತ್ನದಲ್ಲಿ 84.14 ಮೀ. ದೂರ ಎಸೆದು 6ನೇ ಸ್ಥಾನ ಪಡೆದರು.

ಎಲ್ಲದರಲ್ಲೂ ಚಾಂಪಿಯನ್‌!

ನೀರಜ್‌ ವಿಶ್ವದ ಎಲ್ಲಾ ಪ್ರಮುಖ ಕೂಟಗಳಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 2018ರಲ್ಲಿ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, ಅದೇ ವರ್ಷ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಎನಿಸಿಕೊಂಡರು. 2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ ಕಳೆದ ವರ್ಷ ಡೈಮಂಡ್‌ ಲೀಗ್‌ ಪ್ರಶಸ್ತಿ ತನ್ನದಾಗಿಸಿಕೊಂಡರು. ವಿಶ್ವ ಕೂಟದಲ್ಲಿ ಬಾಕಿ ಇದ್ದ ಸ್ವರ್ಣವನ್ನು ಈ ಬಾರಿ ಕೊರಳಿಗೇರಿಸಿಕೊಂಡರು.

40 ವರ್ಷಗಳಲ್ಲಿ ಭಾರತಕ್ಕೆ 3ನೇ ಪದಕ

1983ರಿಂದಲೂ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್‌ ಕೂಟದಲ್ಲಿ ಭಾರತಕ್ಕಿದು 3ನೇ ಪದಕ. 2003ರ ಪ್ಯಾರಿಸ್‌ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಮೊದಲ ಪದಕ ತಂದುಕೊಟ್ಟಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ಪುರುಷರ ಜಾವೆಲಿನ್‌ ಎಸೆತದಲ್ಲಿ ನೀರಜ್‌ ಬೆಳ್ಳಿ ಪದಕ ಗೆದ್ದಿದ್ದರು.