ಹಲವು ದೇಶಗಳು ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯಕ್ಕೆ ನಿರಾಸಕ್ತಿ ತೋರುತ್ತಿದ್ದು, ಹೆಚ್ಚುತ್ತಿರುವ ವೆಚ್ಚವೇ ಪ್ರಮುಖ ಕಾರಣವಾಗಿದೆ. ಈ ನಡುವೆ, 2030ರ ಗೇಮ್ಸ್ ಆತಿಥ್ಯವನ್ನು ಭಾರತ ಪಡೆದುಕೊಂಡಿದ್ದು, ಮುಂಬರುವ ಕ್ರೀಡಾಕೂಟದಲ್ಲಿ 126 ಅಥ್ಲೀಟ್‌ಗಳೊಂದಿಗೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಕರ್ನಾಟಕದ 8 ಕ್ರೀಡಾಪಟುಗಳು ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಿನಿ ಒಲಿಂಪಿಕ್ಸ್ ಎಂಬ ಹೆಗ್ಗಳಿಕೆ ಇದ್ದರೂ ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯಕ್ಕೆ ಈಗ ಹಲವು ದೇಶಗಳು ನಿರಾಸಕ್ತಿ ತೋರುತ್ತಿವೆ. ಈ ಮೊದಲು, ಆಸ್ಟ್ರೇಲಿಯಾದ ವಿಕ್ಟೋರಿಯಾ ನಗರವು 2026ರ ಗೇಮ್ಸ್‌ನ ಆತಿಥ್ಯ ಹಕ್ಕು ಪಡೆದಿತ್ತು. ಗೋಲ್ಡ್‌ಕೋಸ್ಟ್, ಕ್ವೀನ್ಸ್‌ಲ್ಯಾಂಡ್ ಸಹ ಆತಿಥ್ಯದ ನಗರಗಳಾಗಿ ಆಯ್ಕೆಯಾಗಿದ್ದವು. ಆದರೆ ವೆಚ್ಚ ಹೆಚ್ಚಳ ಕಾರಣದಿಂದ ಆತಿಥ್ಯ ಹಕ್ಕಿನಿಂದ ವಿಕ್ಟೋರಿಯಾ ಹಿಂದಕ್ಕೆ ಸರಿಯಿತು. ಆ ಬಳಿಕ ಗೋಲ್ಡ್‌ಕೋಸ್ಟ್, ಕ್ವೀನ್ಸ್‌ಲ್ಯಾಂಡ್ ಕೂಡಾ ಆಸಕ್ತಿ ತೋರಲಿಲ್ಲ. ಹೀಗಾಗಿ 2024ರಲ್ಲಿ ಕೊನೆ ಆಯ್ಕೆ ಎಂಬಂತೆ ಸ್ಕಾಟ್ಲೆಂಡ್ ದೇಶವು ಗೇಮ್ಸ್ ಆಯೋಜನೆಗೆ ಮುಂದೆ ಬಂತು.
ಈ ನಡುವೆ, 2030ರ ಗೇಮ್ಸ್‌ನ ಆತಿಥ್ಯ ಹಕ್ಕು ಗುಜರಾತ್‌ನ ಆಹಮದಾಬಾದ್ ಪಡೆದಿದೆ. 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಪ್ರಯತ್ನಿಸುತ್ತಿರುವ ಭಾರತ, ಅದಕ್ಕೂ ಮುನ್ನ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ನೋಡುತ್ತಿದೆ. ಅಲ್ಲದೆ, ಭಾರತಕ್ಕೆ ಜಾಗತಿಕ ಮಟ್ಟದ ಕ್ರೀಡಾಕೂಟದ ಆತಿಥ್ಯ ಪ್ರತಿಷ್ಠೆಯ ವಿಷಯವಾಗಿರುವುದರಿಂದ 2030ರ ಗೇಮ್ಸ್ ನಡೆಸಲು ಮುಂದೆ ಬಂದಿದೆ. ಇದರ ಹೊರತಾಗಿ ಬೇರೆ ದೇಶಗಳು ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯಕ್ಕೆ ಆಸಕ್ತಿ ತೋರುತ್ತಿಲ್ಲ. ಹೆಚ್ಚುತ್ತಿರುವ ವೆಚ್ಚ, ಒಲಿಂಪಿಕ್ಸ್‌ನಷ್ಟು ಖ್ಯಾತಿ ಇಲ್ಲದಿರುವುದು, ಕಡಿಮೆ ಪ್ರಾಯೋಜಕತ್ವ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಲಾಭ ಸಿಗದೇ ಇರುವುದು, ಜಾಗತಿಕ ಮಟ್ಟದಲ್ಲಿ ಟಿವಿ ಆದಾಯ ಕಡಿಮೆ ಇರುವ ಕಾರಣ ಕಾಮನ್‌ವೆಲ್ತ್ ಗೇಮ್ಸ್‌ಗೆ ಆತಿಥ್ಯ ವಹಿಸಲು ದೇಶಗಳು ನಿರಾಸಕ್ತಿ ತೋರುತ್ತಿವೆ.
ಶಾಲಾ ಮಕ್ಕಳಿಂದ ಮಾಸ್ಕಾಟ್ ವಿನ್ಯಾಸ
ಕ್ರೀಡಾಕೂಟದ ಅಧಿಕೃತ ಮಾಸ್ಕಾಟ್‌ಅನ್ನು ಕ್ರೀಡೆಗೆ ಒಂದು ವರ್ಷ ಇರುವಾಗಲೇ, ಅಂದರೆ 2025ರ ಜುಲೈ 23ರಂದು ಅನಾವರಣಗೊಳಿಸಲಾಗಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟದ ಪೂರ್ವಭಾವಿಯಾಗಿ ಸೃಜನಶೀಲತೆ ಮತ್ತು ಯುವ ಸಮೂಹದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಂದ ಈ ಮಾಸ್ಕಾಟ್ ವಿನ್ಯಾಸಗೊಳಿಸಲಾಗಿದೆ. ಗ್ಲಾಸ್ಗೋ ನಗರದ ಫಿನ್ನಿಸ್ಟನ್ ಕ್ರೇನ್‌ನ ಹೆಸರನ್ನು ಸೂಚಿಸುವ ‘ಫಿನ್ನಿ’ ಎಂಬ ಹೆಸರನ್ನು ಈ ಮಾಸ್ಕಾಟ್‌ಗೆ ಇಡಲಾಗಿದೆ.
ಭಾರತಕ್ಕೆ ಈವರೆಗೂ 203 ಚಿನ್ನ ಸೇರಿ 564 ಪದಕಗಳು
1930ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆರಂಭಗೊಂಡಿದ್ದರೂ ಭಾರತ ಮೊದಲ ಬಾರಿ ಪಾಲ್ಗೊಂಡಿದ್ದು 1934ರಲ್ಲಿ. ಆ ಗೇಮ್ಸ್‌ನಲ್ಲಿ ಭಾರತಕ್ಕೆ ಕೇವಲ 1 ಪದಕ ಲಭಿಸಿತ್ತು. ಬಳಿಕ 1938, 1954ರಲ್ಲಿ ಭಾರತ ಒಂದೂ ಪದಕ ಗೆದ್ದಿರಲಿಲ್ಲ. ಒಟ್ಟಾರೆ ಈವರೆಗಿನ 22 ಆವೃತ್ತಿಗಳ ಪೈಕಿ ಭಾರತ 18ರಲ್ಲಿ ಪಾಲ್ಗೊಂಡಿವೆ. 203 ಚಿನ್ನ, 190 ಬೆಳ್ಳಿ, 171 ಕಂಚು ಸೇರಿ 564 ಪದಕ ಗೆದ್ದಿದೆ. 2002ರಿಂದ 2022ರ ವರೆಗೆ ಸತತವಾಗಿ 6 ಆವೃತ್ತಿಗಳಲ್ಲಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ. ಕಳೆದ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತ 22 ಚಿನ್ನ ಸೇರಿ 61 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 4ನೇ ಸ್ಥಾನಿಯಾಗಿತ್ತು.
ಭಾರತದಿಂದ ಈ ಬಾರಿ 126 ಅಥ್ಲೀಟ್ಸ್ ಭಾಗಿ
ಈ ಬಾರಿ ಭಾರತದ 126 ಅಥ್ಲೀಟ್‌ಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 78 ಪುರುಷರು, 48 ಮಹಿಳೆಯರಿದ್ದಾರೆ. ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ವೇಟ್‌ಲಿಫ್ಟಿಂತ್ ತಾರೆ ಮೀರಾಬಾಯಿ ಚಾನು, ಬಾಕ್ಸರ್ ಲವ್ಲೀನಾ ಬೊರ್ಗೊಹೈನ್, ಅಥ್ಲೆಟಿಕ್ಸ್‌ನಲ್ಲಿ ಪಾರುಲ್ ಚೌಧರಿ, ಮುರಳಿ ಶ್ರೀಶಂಕರ್, ಅನಿಮೇಶ್ ಕುಜೂರ್ ಸೇರಿ ಪ್ರಮುಖರು ಸ್ಪರ್ಧಿಸಲಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ನೀರಜ್ ಈಗ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಹಲವು ಕ್ರೀಡೆಗಳನ್ನು ಕೈಬಿಡಲಾಗಿದ್ದರೂ ಭಾರತ ಈ ಬಾರಿ 25ಕ್ಕೂ ಹೆಚ್ಚು ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ.
ಕಣದಲ್ಲಿರುವ ಕನ್ನಡಿಗರು
ಕರ್ನಾಟಕದ 8 ಕ್ರೀಡಾಪಟುಗಳು ಕೂಡಾ ಸ್ಪರ್ಧಿಸಲಿದ್ದಾರೆ. ಈಜುಪಟುಗಳಾದ ಶ್ರೀಹರಿ ನಟರಾಜ್, ಅನೀಶ್ ಗೌಡ, ಅಥ್ಲೀಟಿಕ್ಸ್‌ನ ಯಶಸ್ ಪಿ., ಲೋಕೇಶ್ ಸತ್ಯನಾಥನ್, ಪ್ಯಾರಾ ಈಜು ಪಟು ಸಾತ್ವಿಕ್ ಪಾಟೀಲ್, ಗಾಲಿ ಕುರ್ಚಿ ಬಾಸ್ಕೆಟ್‌ಬಾಲ್‌ನ ಲಕ್ಷ್ಮಿ ರಾಯಪ್ಪ, ಮಹಿಳಾ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ.ಎಸ್. ಕಣದಲ್ಲಿದ್ದಾರೆ. ಪ್ಯಾರಾ ಅಥ್ಲೆಟಿಕ್ಸ್‌ನ ಮುಖ್ಯ ಕೋಚ್ ಸತ್ಯನಾರಾಯಣ, ದಿವಾಕರ್ ತಿಮ್ಮೆಗೌಡ, ಶರತ್ ಮಹಾದೇವರ ಕೂಡಾ ಭಾಗವಹಿಸಲಿದ್ದಾರೆ.
5-6 ಪದಕ ವಿಶ್ವಾಸ
ಈ ಬಾರಿ ನಮ್ಮ ಪ್ಯಾರಾ ಅಥ್ಲೀಟ್‌ಗಳ ತಂಡ ಬಲಿಷ್ಠವಾಗಿದೆ. ಸೂಕ್ತ ಸಿದ್ಧತೆ ಕೂಡಾ ಮಾಡಿದ್ದಾರೆ. ಕನಿಷ್ಠ 5-6 ಪದಕಗಳನ್ನು ಪ್ಯಾರಾ ಅಥ್ಲೀಟ್‌ಗಳು ಗೆಲ್ಲುವ ಭರವಸೆ ಇದೆ. ಪ್ರಮುಖವಾಗಿ ಪ್ಯಾರಾ ಅಥ್ಲೆಟಿಕ್ಸ್, ವ್ಹೀಲ್‌ಚೇರ್ ಬಾಸ್ಕೆಟ್‌ಬಾಲ್, ಪವರ್‌ಲಿಫ್ಟಿಂಗ್‌ನಲ್ಲಿ ಪದಕ ವಿಶ್ವಾಸವಿದೆ.
ಸತ್ಯನಾರಾಯಣ, ಪ್ಯಾರಾ ಅಥ್ಲೆಟಿಕ್ಸ್ ಕೋಚ್


