ಟೂರ್ನಿಯುದ್ದಕ್ಕೂ ಅಭೂತಪೂರ್ವ ಆಟ ಪ್ರದರ್ಶಿಸಿದ ಸರ್‌ ಸೇಫ್ಟಿ ತಂಡ ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು. ಇಟಲಿಯ ಸಿಮೊನ್‌ ಜಿಯಾನೆಲಿ ಸೇರಿ ವಿಶ್ವ ಶ್ರೇಷ್ಠ ಆಟಗಾರರನ್ನು ಹೊಂದಿರುವ ಸರ್‌ ಸೇಫ್ಟಿ ತಂಡ ಆರಂಭಿಕ ಸೆಟ್‌ನಲ್ಲಿ 25-13 ಅಂತರದಲ್ಲಿ ಜಯಿಸಿತು.

ಬೆಂಗಳೂರು(ಡಿ.12): ಇಟಲಿಯ ಸರ್‌ ಸೇಫ್ಟಿ ಸುಸಾ ಪೆರುಗಿಯಾ ಮತ್ತೊಮ್ಮೆ ಕ್ಲಬ್‌ ವಿಶ್ವ ವಾಲಿಬಾಲ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬ್ರೆಜಿಲ್‌ನ ಇಟ್ಟಂಬೆ ಮಿನಾಸ್‌ ವಿರುದ್ಧದ ಫೈನಲ್‌ನಲ್ಲಿ 3-0 (25-13, 25-21, 25-19) ನೇರ ಸೆಟ್‌ಗಳ ಭರ್ಜರಿ ಜಯಗಳಿಸಿ, ಸತತ 2ನೇ ಬಾರಿ ಕ್ಲಬ್‌ ವಾಲಿಬಾಲ್‌ನ ವಿಶ್ವ ಚಾಂಪಿಯನ್‌ ಎನಿಸಿಕೊಂಡಿತು.

ಟೂರ್ನಿಯುದ್ದಕ್ಕೂ ಅಭೂತಪೂರ್ವ ಆಟ ಪ್ರದರ್ಶಿಸಿದ ಸರ್‌ ಸೇಫ್ಟಿ ತಂಡ ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು. ಇಟಲಿಯ ಸಿಮೊನ್‌ ಜಿಯಾನೆಲಿ ಸೇರಿ ವಿಶ್ವ ಶ್ರೇಷ್ಠ ಆಟಗಾರರನ್ನು ಹೊಂದಿರುವ ಸರ್‌ ಸೇಫ್ಟಿ ತಂಡ ಆರಂಭಿಕ ಸೆಟ್‌ನಲ್ಲಿ 25-13 ಅಂತರದಲ್ಲಿ ಜಯಿಸಿತು. 2ನೇ ಹಾಗೂ 3ನೇ ಸೆಟ್‌ಗಳಲ್ಲಿ ಪ್ರತಿರೋಧ ಎದುರಾದರೂ, ವೇಗದ ಸರ್ವ್‌, ಬಲಿಷ್ಠ ಸ್ಪೈಕ್ ಹಾಗೂ ನಿಖರ ಡಿಫೆನ್ಸ್‌ ಮೂಲಕ ಮಿನಾಸ್‌ ತಂಡಕ್ಕೆ ಹೆಚ್ಚಿನ ಅಂಕ ಗಳಿಸಲು ಅವಕಾಶ ನೀಡದೆ ಸರ್‌ ಸೇಫ್ಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ತಂಡ ಟೂರ್ನಿಯಲ್ಲಿ ಫೈನಲ್‌ ಸೇರಿ 4 ಪಂದ್ಯಗಳನ್ನಾಡಿದ್ದು, ಒಂದೂ ಸೆಟ್‌ ಕಳೆದುಕೊಳ್ಳಲಿಲ್ಲ ಎನ್ನುವುದು ತಂಡದ ಪ್ರಾಬಲ್ಯ ಎಷ್ಟಿತ್ತು ಎನ್ನುವುದನ್ನು ವಿವರಿಸುತ್ತದೆ.

ಸನ್‌ಬರ್ಡ್ಸ್‌ಗೆ ಕಂಚು

ಕ್ಲಬ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಿದ ಜಪಾನ್‌ನ ಮೊದಲ ತಂಡ ಎಂಬ ಖ್ಯಾತಿ ಗಳಿಸಿದ ಸುಂಟೋರಿ ಸನ್‌ಬರ್ಡ್ಸ್‌ ಚೊಚ್ಚಲ ಪ್ರಯತ್ನದಲ್ಲೇ ಕಂಚು ತನ್ನದಾಗಿಸಿಕೊಂಡಿದೆ. ಭಾನುವಾರ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಏಷ್ಯನ್‌ ಚಾಂಪಿಯನ್‌ ಸನ್‌ಬರ್ಡ್ಸ್‌, ಟರ್ಕಿಯ ಹಾಲ್ಕ್‌ಬ್ಯಾಂಕ್‌ ಸ್ಪೋರ್‌ ವಿರುದ್ಧ 3-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿತು.ಮೊದಲೆರಡು ಸೆಟ್‌ ಸೋತ ಹೊರತಾಗಿಯೂ, ಕೊನೆ 3 ಸೆಟ್‌ಗಳಲ್ಲಿ ಅತ್ಯಾಕರ್ಷಕ ಪ್ರದರ್ಶನ ನೀಡಿದ ಸನ್‌ಬರ್ಡ್ಸ್‌ ಕಂಚು ಪಡೆಯಿತು.

Pro Kabaddi League: ಬೆಂಗಾಲ್‌ಗೆ 2ನೇ ಗೆಲುವು, ಟೂರ್ನಿಯಲ್ಲಿ ಮೊದಲ ಸೋಲುಂಡ ತಲೈವಾಸ್

ಬೆಂಗಳೂರು: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಾಲ್‌ ವಾರಿಯರ್ಸ್‌ ಅಜೇಯ ಓಟ ಮುಂದುವರಿಸಿದ್ದು, 2ನೇ ಗೆಲುವು ಸಾಧಿಸಿದೆ. ಭಾನುವಾರ ತಮಿಳ್‌ ತಲೈವಾಸ್‌ ವಿರುದ್ಧ 48-38 ಅಂಕಗಳ ಜಯ ಲಭಿಸಿತು. ಬೆಂಗಾಲ್‌ 3 ಪಂದ್ಯದಲ್ಲಿ 2 ಜಯ, 1 ಡ್ರಾದೊಂದಿಗೆ 13 ಅಂಕ ಸಂಪಾದಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ತಲೈವಾಸ್‌ಗೆ ಇದು ಮೊದಲು ಸೋಲು.

ಆರಂಭದಲ್ಲಿ ಬೆಂಗಾಲ್‌ ಪ್ರಾಬಲ್ಯ ಸಾಧಿಸಿದರೂ, ಬಳಿಕ ಕಮ್‌ಬ್ಯಾಕ್‌ ಮಾಡಿದ ತಲೈವಾಸ್‌ ಮೊದಲಾರ್ಧಕ್ಕೆ 27-21ರಿಂದ ಮುನ್ನಡೆ ಪಡೆಯಿತು. ಆದರೆ ದ್ವಿತೀಯಾರ್ಧ ಸಂಪೂರ್ಣ ಬೆಂಗಾಲ್‌ ಪರಾಕ್ರಮಕ್ಕೆ ಸಾಕ್ಷಿಯಾಯಿತು. ತಲೈವಾಸನ್ನು 2 ಬಾರಿ ಆಲೌಟ್‌ ಮಾಡಿದ ತಂಡ ಸುಲಭದಲ್ಲಿ ಜಯಗಳಿಸಿತು. ಮಣೀಂದರ್‌ 16 ರೈಡ್‌ ಅಂಕ, ಶುಭಂ ಶಿಂಧೆ 11 ಟ್ಯಾಕಲ್‌ ಅಂಕ ಗಳಿಸಿ ಬೆಂಗಾಲ್‌ ಗೆಲುವಿನ ರೂವಾರಿಗಳಾದರು.

ಡೆಲ್ಲಿಗೆ ಸೋಲು

ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿಗೆ 33-35 ಅಂಕಗಳ ವೀರೋಚಿತ ಸೋಲು ಎದುರಾಯಿತು. ನವೀನ್‌ ಕುಮಾರ್‌ರ ಹೋರಾಟದ 16 ಅಂಕ ಡೆಲ್ಲಿ ಗೆಲುವಿಗೆ ಸಾಕಾಗಲಿಲ್ಲ. ಹರ್ಯಾಣಕ್ಕೆ ಇದು ಸತತ 2ನೇ ಜಯ.

ಇಂದಿನ ಪಂದ್ಯಗಳು

ಜೈಪುರ-ಗುಜರಾತ್‌, ರಾತ್ರಿ 8ಕ್ಕೆ

ಬೆಂಗಳೂರು-ಯೋಧಾಸ್‌, ರಾತ್ರಿ 9ಕ್ಕೆ

ವನಿತಾ ಹಾಕಿ ವಿಶ್ವಕಪ್‌: ಭಾರತಕ್ಕೆ 9ನೇ ಸ್ಥಾನ

ಸ್ಯಾಂಟಿಯಾಗೊ(ಚಿಲಿ): ಎಫ್‌ಐಎಚ್‌ ಕಿರಿಯ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಭಾರತ 9ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದೆ. ಶನಿವಾರ 9 ಮತ್ತು 10ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳಿಂದ ಜಯಭೇರಿ ಬಾರಿಸಿತು. ನಿಗದಿತ ಅವಧಿ ಮುಕ್ತಾಯಕ್ಕೆ ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು.

ಅಶ್ವಿನಿ-ತನಿಶಾ ಗುವಾಹಟಿ ಮಾಸ್ಟರ್ಸ್‌ ಚಾಂಪಿಯನ್‌

ಗುವಾಹಟಿ: ಭಾರತದ ತಾರಾ ಮಹಿಳಾ ಡಬಲ್ಸ್‌ ಜೋಡಿ ತನಿಶಾ ಕ್ರಾಸ್ಟೊ-ಕರ್ನಾಟಕದ ಅಶ್ವಿನಿ ಪೊನ್ನಪ್ಪ ಗುವಾಹಟಿ ಮಾಸ್ಟರ್ಸ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಹೊರಹೊಮ್ಮಿದ್ದಾರೆ. ಕಳೆದ ವಾರ ಸಯ್ಯದ್‌ ಮೋದಿ ಟೂರ್ನಿಯಲ್ಲಿ ರನ್ನರ್‌-ಅಪ್‌ ಆಗಿದ್ದ 2ನೇ ಶ್ರೇಯಾಂಕಿತ ಭಾರತದ ಜೋಡಿ, ಭಾನುವಾರ ಫೈನಲ್‌ನಲ್ಲಿ ಚೈನೀಸ್‌ ತೈಪೆಯ ಸುಂಗ್‌ ಯುನ್‌-ಯು ಚೀನ್‌ ಹ್ಯು ಜೋಡಿ ವಿರುದ್ಧ 21-13, 21-19 ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿತು. ಇದು ಅಶ್ವಿನಿ-ತನಿಶಾಗೆ 3ನೇ ಬಿಡಬ್ಲ್ಯುಎಫ್‌ ಪ್ರಶಸ್ತಿ. ಈ ವರ್ಷ ಅಬು ಧಾಬಿ ಮಾಸ್ಟರ್ಸ್‌, ನಾಂಟೆಸ್‌ ಚಾಲೆಂಜ್‌ ಟೂರ್ನಿಯಲ್ಲಿ ಗೆದ್ದಿದ್ದರು.